15 ಸ್ಥಾನದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುತ್ತೆ: ಚೆಲುವರಾಯಸ್ವಾಮಿ

ಚುನಾವಣೆಯಲ್ಲಿ ರಾಜೇಂದ್ರ ಗೆಲುವು ಖಚಿತ

142

Get real time updates directly on you device, subscribe now.

ತುಮಕೂರು: ಬಿಜೆಪಿ ವಿರುದ್ಧ ಮತದಾನ ಮಾಡಿದರೆ ಬೆಲೆ ಇಳಿಕೆಯಾಗುತ್ತದೆ, ಉಪ ಚುನಾವಣೆಗಳಲ್ಲಿ ಬಿಜೆಪಿ ಸೋತಿದ್ದರಿಂದ ಕೇಂದ್ರ ಸರ್ಕಾರ ಪೆಟ್ರೋಲ್‌ ಬೆಲೆ ಇಳಿಸುವಂತಾಯಿತು, ವಿಧಾನ ಪರಿಷತ್‌ ಚುನಾವಣೆಯಲ್ಲಿಯೂ ಬಿಜೆಪಿಗೆ ವಿರುದ್ಧವಾಗಿ ಮತ ನೀಡುವ ಮೂಲಕ ಬಿಜೆಪಿಗೆ ತಕ್ಕಪಾಠ ಕಲಿಸಬೇಕೆಂದು ಮಾಜಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತ ವಿರೋಧಿ ಕಾಯ್ದೆ, ಜನ ವಿರೋಧಿ ಬಿಜೆಪಿ ವಿರುದ್ಧ ಮತ ಹಾಕಲು ರಾಜ್ಯದ ಜನರು ಮುಂದಾಗಿದ್ದಾರೆ, ಕೋವಿಡ್‌ ಸಂದರ್ಭದಲ್ಲಿ ರಾಜ್ಯದ ಜನರಿಗೆ ಕನಿಷ್ಠ ಪರಿಹಾರ ಕೊಡಲು ಆಗಲಿಲ್ಲ, ಇಂತಹ ಸರ್ಕಾರವನ್ನು ಸೋಲಿಸಬೇಕು, ಕನಿಷ್ಠ ಪಕ್ಷ 15 ಸ್ಥಾನದಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದರು.
ಜೆಡಿಎಸ್‌ ಅಭ್ಯರ್ಥಿಯನ್ನು ಬಲವಂತದಿಂದ ರಾಜೀನಾಮೆ ಕೊಡಿಸಿ ಚುನಾವಣಾ ಕಣಕ್ಕೆ ಕರೆ ತಂದಿದ್ದಾರೆ, ಹತ್ತು ವರ್ಷ ಕೆಲಸ ಮಾಡಿದ್ದ ಜೆಡಿಎಸ್‌ ಅಭ್ಯರ್ಥಿ ಐನೂರು ಕೋಟಿ ಹಣ ಮಾಡಿದ್ದಾರೆ ಎಂಬ ಆರೋಪವಿದೆ, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಒಂದು ಪ್ರಕರಣ ಮರೆ ಮಾಚಿದ್ದಾರೆ, ಬಿಡಿಎ ಅಧಿಕಾರದಲ್ಲಿದ್ದಾಗ ಅವರ ಮೇಲೆ ಕ್ರಿಮಿನಲ್‌ ಮೊಕದ್ದಮೆಗಳು ದಾಖಲಾಗಿವೆ, ಅಂತಹ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿದ್ದಾರೆ ಜೆಡಿಎಸ್‌ಗೆ ನೈತಿಕತೆ ಇದೆಯೇ? ಇಂತಹ ವ್ಯಕ್ತಿಗೆ ಮತ ಹಾಕಿದರೆ ಜನರ ಸಮಸ್ಯೆಗೆ ಧ್ವನಿಯಾಗುತ್ತಾರೆಯೇ ಎಂದು ಪ್ರಶ್ನಿಸಿದರು.
ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಹೊರಗಿನಿಂದ ಬಂದವರು ಅವರಿಗೆ ಜಿಲ್ಲೆಯ ಬಗ್ಗೆ ಅರಿವಿಲ್ಲ, ಸಿದ್ದರಾಮಯ್ಯ ಸರ್ಕಾರವಿದ್ದಾಗ ರೈತರಿಗೆ ನೀಡಿದ ಸಾಲ ಸೌಲಭ್ಯವನ್ನು ಜನರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿರುವ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ರಾಜೇಂದ್ರ ಅವರನ್ನು ಗೆಲ್ಲಿಸಿ, ನೈತಿಕತೆ ಇಲ್ಲದೇ ರಾಜಕಾರಣಕ್ಕೆ ಬರುತ್ತಿರುವ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್‌- ಬಿಜೆಪಿ ಮೈತ್ರಿ ಪರಿಷತ್‌ ಚುನಾವಣೆಯಲ್ಲಿ ಇದ್ದೇ ಇರುತ್ತದೆ, ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ, ತುಮಕೂರು ಜಿಲ್ಲೆಯಲ್ಲಿಯೂ ಮೈತ್ರಿ ಆಗುವ ಸಾಧ್ಯತೆ ಇದ್ದು, ಪರೋಕ್ಷವಾಗಿ ಪರಸ್ಪರ ಸಹಾಯ ಮಾಡುವ ಸ್ಥಿತಿ ಇದೆ ಎಂದು ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲ್ಲ ಎಂದು ಭರವಸೆ ವ್ಯಕ್ಯಪಡಿಸಿದರು.
ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಮಾತನಾಡಿ, ಕಾಂಗ್ರೆಸ್‌ ನಲ್ಲಿ ಗುಂಪುಗಾರಿಕೆ ಇದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ, ಕಾಂಗ್ರೆಸ್‌ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸಂಘಟಿತವಾಗಿ ಹೋರಾಡಲಿದೆ, ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಎಲ್ಲ ನಾಯಕರು ಶ್ರಮಿಸಲಿದ್ದಾರೆ, ಜಿಲ್ಲೆಯಲ್ಲಿ ಕಾಂಗ್ರೆಸ್‌ ಪರ ಅಲೆ ಇದೆ, ಕಾಂಗ್ರೆಸ್‌ ಗೆ ಬಿಜೆಪಿ ಪ್ರತಿಸ್ಪರ್ಧಿಯಾಗಿದೆ, ಆಡಳಿತ ವ್ಯವಸ್ಥೆ ಅವರ ಪರವಾಗಿದ್ದರು, ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲ್ಲಿದೆ, ಚುನಾವಣೆ ಪಾರದರ್ಶಕವಾಗಿ ನಡೆಯಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್‌ ಅಭ್ಯರ್ಥಿ ಆರ್‌.ರಾಜೇಂದ್ರ ಅವರು, ಕಾಂಗ್ರೆಸ್‌ ಎಲ್ಲಾ ತಾಲ್ಲೂಕುಗಳಲ್ಲಿಯೂ ಪ್ರಚಾರ ಮಾಡಿದ್ದು, ಶನಿವಾರ ಕುಣಿಗಲ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದ ಡಿ.ಕೆ.ಸುರೇಶ್‌ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಪ್ರಚಾರ ಸಭೆ ನಡೆಯಲಿದೆ ಎಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್‌ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ, ಜಿಲ್ಲೆಯ ಪ್ರತಿಯೊಬ್ಬರು ಗ್ರಾಪಂ ಸದಸ್ಯರನ್ನು ಒಂದೆರೆಡು ಬಾರಿ ಭೇಟಿ ಮಾಡಿದ್ದು, ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇದೆ ಎಂದ ಅವರು, ಕಾಂಗ್ರೆಸ್‌ ಪರವಾಗಿ ಎಲ್ಲಾ ಮುಖಂಡರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್‌ ಸದಸ್ಯ ಸಿ.ಆರ್‌.ಮನೋಹರ್‌, ಜಿಪಂ ಮಾಜಿ ಅಧ್ಯಕ್ಷ ಜಿ.ಜೆ.ರಾಜಣ್ಣ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!