ಜೋಳ ವರ್ಣತಂತು ಸಂಶೋಧನೆ, ಅಭಿವೃದ್ಧಿ ಪ್ರಯೋಗಾಲಯ ಉದ್ಘಾಟನೆ

ಜೋಳ ಜಗತ್ತಿನ ಭವಿಷ್ಯದ ಆಹಾರ ಧಾನ್ಯ: ರಾಜೇಂದ್ರಸಿಂಗ್

141

Get real time updates directly on you device, subscribe now.

ಕುಣಿಗಲ್‌: ಜಗತ್ತಿನಲ್ಲಿ ಬದಲಾಗುತ್ತಿರುವ ಹವಾಮಾನ ವೈಪರಿತ್ಯವನ್ನು ಸಮರ್ಥವಾಗಿ ಸಹಿಸಿಕೊಂಡು ಬೆಳೆಯುವ ಆಹಾರ ಧಾನ್ಯ ತಳಿಗಳ ಸಂಶೋಧನೆ ನಿಟ್ಟಿನಲ್ಲಿ ಕೃಷಿ ಯುವ ವಿಜ್ಞಾನಿಗಳು ಶ್ರಮಿಸಬೇಕೆಂದು ನವದೆಹಲಿಯ ಕೃಷಿ ವಿಜ್ಞಾನ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಪದ್ಮಭೂಷಣ ಡಾ.ರಾಜೇಂದ್ರಸಿಂಗ್‌ ಪರೋಡ ಹೇಳಿದರು.
ಶುಕ್ರವಾರ ತಾಲೂಕಿನ ರಂಗನಾಥಸ್ವಾಮಿ ಗುಡ್ಡಕಾವಲ್‌ ಪ್ರದೇಶದಲ್ಲಿನ ಕೃಷಿ ಸಂಶೋಧನ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಜೋಳ, ಗೋಧಿ ತಳಿ ಅಭಿವೃದ್ಧಿ ಸಂಸ್ಥೆ ಹಾಗೂ ಬೆಂಗಳೂರು ಕೃಷಿವಿವಿ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಕೃಷಿ ಸಂಶೋಧನಾ ಸಲಹಾ ಸಂಸ್ಥೆಯ ಅನುದಾನದ ಸಹಯೋಗದಲ್ಲಿ 12 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಜೋಳ ವರ್ಣತಂತು ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿ, ಕೃಷಿ ಯುವ ವಿಜ್ಞಾನಿಗಳ ಸಂಶೋಧನೆಯಿಂದ ದೇಶದ ರೈತರ, ಬಡವರ ಬದುಕು ಹಸನಾಗಿ ದೇಶ ಆಹಾರ ಉತ್ಪಾನೆಯಲ್ಲಿ ಸ್ವಾವಲಂಬನೆ ಸಾಧಿಸುವಂತಾಗಬೇಕು, ಆಹಾರಧಾನ್ಯ ಕೇವಲ ಆಹಾರಧಾನ್ಯವಾಗಿಲ್ಲ, ಬದಲಾದ ಪರಿಸ್ಥಿತಿಯಲ್ಲಿ ಆಹಾರ ಧಾನ್ಯದ ಉತ್ಪಾದನೆ, ಆಹಾರ, ಪೌಷ್ಟಿಕ ಆಹಾರ, ಜಾನುವಾರುಗೆ ಮೇವು ಹಾಗೂ ಇಂಧನವಾಗಿ ಬಳಕೆಯಾಗುವ ವಿಫುಲ ಅವಕಾಶವಿದೆ, ಕಡಿಮೆ ನೀರು ಬಳಸಿಕೊಂಡು ಬೆಳೆಯುವ ಜೋಳದಲ್ಲಿ ಉತ್ತಮ ಪೌಷ್ಟಿಕಾಂಶ ಹೆಚ್ಚಿದ್ದು ಜಗತ್ತಿನ ಭವಿಷ್ಯದ ಆಹಾರ ಧಾನ್ಯವಾಗಲಿದೆ, ಹೆಚ್ಚು ನೀರು ಬಳಸಿ ಉತ್ಪಾದಿಸುವ ಆಹಾರ ಧಾನ್ಯಗಳ ನೀರಿನ ಲಭ್ಯತೆ ಕೊರತೆಯಿಂದ ಕಡಿಮೆಯಾಗಲಿದೆ, ಇಡೀ ಜಗತ್ತಿನಲ್ಲಿ ಜೋಳ ಉತ್ತಮ ಆಹಾರವಾಗಿ ಬಳಕೆಯಾಗುವ ಜೊತೆಯಲ್ಲಿ ಭವಿಷ್ಯದ ಇಂಧನವಾಗಲಿದೆ. ಈ ಸಂಶೋಧನ ಕೇಂದ್ರವು ಜಗತ್ತಿಗೆ ಮೂರನೆಯದಾಗಿದ್ದು ಏಷಿಯಾ ಖಂಡದಲ್ಲೆ ಮೊದಲನೆದಾಗಿದೆ. ಇದರಿಂದ ಇಡೀ ಜಗತ್ತಿಗೆ ಉತ್ತಮ ಸಂಶೋಧನೆಗಳು ಪ್ರಕಟಗೊಂಡು ದೇಶಕ್ಕೆ ಉತ್ತಮ ಹೆಸರು ಬರುವಂತಾಗಬೇಕೆಂದರು.
ದೇಶದ ಪ್ರಧಾನಿಗಳು ಜಾಗತಿಕ ಸಮ್ಮೇಳನದಲ್ಲಿ ಹೇಳಿರುವಂತೆ ಮುಂದಿನ ಕೆಲ ವರ್ಷದಲ್ಲಿ ಪಳೆಯುಳಿಕೆ ಇಂಧನ ಬಳಕೆ ತಗ್ಗಿಸಿ ಜೈವಿಕ ಇಂಧನ ಬಳಕೆಗೆ ಹೆಚ್ಚು ಒತ್ತು ನೀಡುವ ಮೂಲಕ ರೈತರಿಗೆ ಹೆಚ್ಚು ಅನುಕೂಲವಾಗುವಂತೆ ಮಾಡಲಾಗುವುದು. ಈಗಾಗಲೆ ಅಮೆರಿಕಾ ದೇಶವೂ ಶೇ.22 ರಷ್ಟು ಇಂಧನವನ್ನು ಜೋಳದ ಬೆಳೆಯ ಮೂಲಕ ಜೈವಿಕ ಇಂಧನವಾಗಿ ಬಳಸುತ್ತಿದೆ. ಕೃಷಿ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನ, ಅನುವಂಶೀಯ ಸಂಶೋಧನ ತಂತ್ರಜ್ಞಾನವನ್ನು ಯುವ ಕೃಷಿ ವಿಜ್ಞಾನಿಗಳು ಬಳಸಿ ಇಡೀ ಜಗತ್ತಿಗೆ ದೇಶವು ಅಗ್ರಗಣ್ಯವಾಗುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದರು.
ಕೀನ್ಯಾ ದೇಶದ ನೈರೋಬಿಯ ಜಾಗತಿಕ ಜೋಳ ಸಂಶೋಧನಾ ಯೋಜನೆಯ ನಿರ್ದೇಶಕ ಡಾ.ಬಿ.ಎಂ.ಪ್ರಸನ್ನ ಮಾತನಾಡಿ, ಕುಣಿಗಲ್‌ ತಾಲೂಕಿನಲ್ಲಿ ಈ ಸಂಶೋಧನ ಕೇಂದ್ರ ಪ್ರಾರಂಭದಿಂದಾಗಿ ಕುಣಿಗಲ್‌ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಿದೆ, ಎಲ್ಲಾ ರೀತಿಯ ಹವಾಮಾನವನ್ನು ಭೌಗೋಳಿಕವಾಗಿ ಕುಣಿಗಲ್‌ ತಾಲೂಕು ಹೊಂದಿರುವುದರಿಂದ ಇಡೀ ಏಷಿಯಾ ಖಂಡದಲ್ಲೆ ಮೊದಲ ಬಾರಿಗೆ ಈ ಸ್ಥಳ ಆಯ್ಕೆ ಮಾಡಿಕೊಳ್ಳಲಾಯಿತು, ರಾಜ್ಯ ಸರ್ಕಾರವೂ ಉತ್ತಮ ಸಹಕಾರ ನೀಡಿದ್ದರಿಂದ ಕೇಂದ್ರಸ್ಥಾಪನೆಗೆ ಸಹಕಾರಿಯಾಗಿ ಏಳು ವರ್ಷ ಸತತ ಪರಿಶ್ರಮದಿಂದ ಈ ಕೇಂದ್ರ ಇಂದು ಉದ್ಘಾಟನೆಯಾಗಿದೆ. ಜೋಳವು ಆಫ್ರಿಕಾ ದೇಶದ ಜನತೆಗೆ ಆಹಾರದ ದೈವ ಸ್ವರೂಪ, ಭಾರತೀಯರಿಗೆ ವಾಣಿಜ್ಯ, ಖಾದ್ಯ ಬೆಳೆಯಾಗಿದೆ. ಜಗತ್ತಿನಲ್ಲೆ ಎಲ್ಲೆಡೆ ಬಳಕೆಯಾಗುವ ಪ್ರಮುಖ ಆಹಾರವಾಗಿದ್ದು ಮುಂದಿನ ದಿನಗಳಲ್ಲಿ ಈ ಬೆಳೆಯು ಫುಡ್‌, ಫೀಡ್‌, ಫಾಡರ್‌ ಹಾಗೂ ಫ್ಯೂಯಲ್‌ ರೀತಿಯಲ್ಲಿ ಬಳಕೆಯಾಗಿ ಸರ್ವಮಾನ್ಯವಾಗಲಿದೆ. ಈ ಸಂಶೋಧನ ಕೇಂದ್ರ ಮುಂದಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಹೆಗ್ಗುರುತಾಗುವ ರೀತಿಯಲ್ಲಿ ಉತ್ತಮ ತಳಿಗಳ ಸಂಶೋಧನೆ ಮಾಡಿ ಜಗತ್ತಿಗೆ ಪರಿಚಯಿಸಬೇಕೆಂದರು.
ಅಂತಾರಾಷ್ಟ್ರೀಯ ಜೋಳ, ಗೋಧಿ ತಳಿ ಅಭಿವೃದ್ಧಿ ಸಂಸ್ಥೆ, ಮೆಕ್ಸಿಕೊದ ಕಾರ್ಯವಾಹಕ ನಿರ್ದೇಶಕ ಡಾ.ಬ್ರಾಮ್‌ ಗೊವೆರ್ಟಸ್‌ ಮಾತನಾಡಿ, ಭಾರತದಲ್ಲಿ ಈ ಜೋಳ ವರ್ಣತಂತು ಸಂಶೋಧನ ಮತ್ತು ಅಭಿವೃದ್ಧಿ ಕೇಂದ್ರ ಪ್ರಾರಂಭ ಆಗುತ್ತಿರುವುದರಿಂದ ಇಲ್ಲಿನ ನುರಿತ ತಂತ್ರಜ್ಞರು ಜೋಳದ ಹೊಸ ಹೊಸ ತಳಿಯನ್ನು ಜಗತ್ತಿಗೆ ಪರಿಚಯಿಸಲು ಪೂರಕವಾಗಿದೆ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದರು.
ಬೆಂಗಳೂರು ಕೃಷಿ ವಿವಿ ಉಪಕುಲಪತಿ ಡಾ.ಎಸ್‌.ರಾಜೇಂದ್ರಪ್ರಸಾದ್‌ ಮಾತನಾಡಿ, ವಿದ್ಯಾರ್ಥಿನಿಯರು ಕೃಷಿ ಸಂಶೋಧನ ವಿಜ್ಞಾನದಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿರುವುದು ಒಳ್ಳೆ ಬೆಳವಣಿಗೆಯಾಗಿದೆ ಎಂದರು.
ಕೃಷಿ ವಿವಿಯ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀರಾಮ್‌, ದಯಾನಂದ, ಸಂಶೋಧನ ವಿಭಾಗದ ಷಡಕ್ಷರಿ, ಮಂಡ್ಯ ವಿವಿಯ ಡಾ.ವೆಂಕಟೇಶ್‌ ಸೇರಿದಂತೆ ವಿವಿಧ ದೇಶದ ವಿವಿಧ ಕೃಷಿ ವಿವಿಗಳ ಪ್ರತಿನಿಧಿಗಳು, ಸಂಶೋಧನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!