ಮುಂದಿನ ತಲೆಮಾರಿಗೂ ಜಾನಪದ ಕಲೆ ತಲುಪಿಸಿ

132

Get real time updates directly on you device, subscribe now.

ತುಮಕೂರು: ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವ ಜಾನಪದ ಕಲೆಗಳು ಮುಂದಿನ ತಲೆಮಾರಿಗೂ ಉಳಿದು ಬೆಳೆಯುವಂತಾಗಬೇಕು ಎಂದು ಹಿರಿಯ ಕಲಾವಿದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣದಾಸ್‌ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಜನಪರ ಉತ್ಸವ ಉದ್ಘಾಟಿಸಿ ಮಾತನಾಡಿ, ಈಗಿನ ಕಲಾವಿದರು ಜಾನಪದ ಕಲೆ ಉಳಿಸುವಂತಹ ಮಹತ್ಕಾರ್ಯ ಮಾಡಬೇಕು, ಕಲೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು, ಈ ಜನಪರ ಉತ್ಸವ ಜನಪ್ರಿಯ ಉತ್ಸವವಾಗಬೇಕು ಎಂದರು.
ಯಾವುದೇ ಕಷ್ಟ ಎದುರಿಸಿ ಕಲಾವಿದರು ತಮ್ಮ ಕಲಾ ಸೇವೆ ಮುಂದುವರೆಸಬೇಕು, ನೋವಿನಲ್ಲೂ ನಗು ಕಾಣುವ ಶಕ್ತಿ ಕಲಾವಿದರಿಗೆ ಇದೆ, ಜಾನಪದ ಕಲೆಗಳು ನಮ್ಮ ಸಂಸ್ಕೃತಿಯ ಹಿರಿಮೆ, ಅವುಗಳನ್ನು ಉಳಿಸಿ ಮುಂದುವರೆಸುತ್ತಿರುವ ಕಲಾವಿದರ ಕಾರ್ಯ ಶ್ಲಾಘನೀಯ, ಇಂದಿನ ಮಕ್ಕಳು ಇಂತಹ ಕಲಾಪ್ರಕಾರಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಕಲೆ ಉಳಿಸಲು ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಡಾ.ಲಕ್ಷ್ಮಣದಾಸ್‌ ಮನವಿ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಸ್‌.ಸಿದ್ಧಲಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾ ಪ್ರತಿಭೆ ಹೊರಹೊಮ್ಮಲು ಇಂತಹ ವೇದಿಕೆಗಳು ಕಲಾವಿದರಿಗೆ ಅನುಕೂಲವಾಗಿವೆ. ಇದನ್ನು ಬಳಸಿಕೊಂಡು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರತಿಭೆ ಬೆಳಗಿಸಬೇಕು, ಹಳ್ಳಿಗಳಲ್ಲಿ ಜಾನಪದ ಕಲೆ ಉಳಿದಿದೆ, ವಂಶಪಾರಂಪರ್ಯವಾಗಿ, ಊರಿಂದಊರಿಗೆ ಹರಡಿ ಈ ಕಲೆಗಳು ಉಳಿದು ಬಂದಿವೆ. ಇದು ಮುಂದಿನ ಪೀಳಿಗೆಗೂ ಮುಂದುವರೆಸಲು ಕಲಾವಿದರು ಕಾಳಜಿವಹಿಸಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಶ್ರೀನಿವಾಸ್‌ ಪ್ರಾಸ್ತಾವಿಕ ನುಡಿಗಳನ್ನಾಡಿ, ಕಲಾವಿದರನ್ನು ಪ್ರೋತ್ಸಾಹಿಸಿ ಅವರಲ್ಲಿನ ಕಲಾ ಪ್ರತಿಭೆ ಪರಿಚಯಿಸಲು ಸರ್ಕಾರ ಪ್ರತಿ ವರ್ಷ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿದೆ, ಕಲಾವಿದರು ಇಂತಹ ಕಾರ್ಯಕ್ರಮಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಲ್ಲಿಕಾರ್ಜುನಕೆಂಕೆರೆ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸದಾಶಿವಯ್ಯ, ನಿವೃತ್ತ ಪ್ರಾಚಾರ್ಯ ಜಿ.ಹೆಚ್‌.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೇಲ್ವಿಚಾರಕ ಸುರೇಶ್ ಕುಮಾರ್‌ ಮತ್ತಿತರರು ಭಾಗವಹಿಸಿದ್ದರು. ನಂತರ ವಿವಿಧ ಕಲಾವಿದರು ಕಲಾ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿದರು.

Get real time updates directly on you device, subscribe now.

Comments are closed.

error: Content is protected !!