ಕುಣಿಗಲ್: ಅವಕಾವಾದಿ ಜೆಡಿಎಸ್, ಗ್ರಾಮ ಸ್ವರಾಜ್ ವ್ಯವಸ್ಥೆ ವಿರೋಧಿಸಿಕೊಂಡು ಬಂದಿರುವ ಬಿಜೆಪಿಗೆ ಮತ ಹಾಕಬಾರದೆಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ತಾಲೂಕಿನ ಎಡೆಯೂರಿನಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ತುಮಕೂರು ಜಿಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ರಾಜಣ್ಣನವರ ಪರ ಮತಯಾಚನೆ ಮಾಡಿ ಮಾತನಾಡಿ, ಜೆಡಿಎಸ್ ಕೇವಲ ಆರು ಸ್ಥಾನದಲ್ಲಿ ಸ್ಪರ್ಧೆ ಮಾಡಿದ್ದರೂ ಎಲ್ಲೆಲ್ಲಿ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ, ಕೇವಲ ಅವಕಾಶವಾದಿ ರಾಜಕಾರಣದಲ್ಲಿ ಮುಳುಗಿರುವ ಜೆಡಿಎಸ್ ನ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರೆ ಅಳುತ್ತಾರೆ. ಅಧಿಕಾರ ವಂಶಪರಂಪರೆ ವ್ಯವಸ್ಥೆ ಅಲ್ಲ ಎಂಬುದು ಅವರಿಗೆ ಗೊತ್ತಿಲ್ಲ, ಸ್ಥಿರ ಸರ್ಕಾರ ಬರುವುದು ಅವರಿಗೆ ಬೇಕಿಲ್ಲ. ಇನ್ನು ಬಿಜೆಪಿ ಅಭಿವೃದ್ಧಿ ವಿರೋಧಿ, ಜನತೆಗೆ ಒಂದು ಮನೆ ನೀಡದ ಮನೆ ಹಾಳರು, ಕೊರೊನ ಔಷಧಿ ಪೂರೈಕೆ ಸೇರಿದಂತೆ ಹೆಣ ಸಾಗಾಟ, ಸುಡುವುದರಲ್ಲು ಕಮಿಷನ್ ಹೊಡೆದ ಭ್ರಷ್ಟರು ಎಂದರು.
ಪ್ರಧಾನಿ ರಾಜಿವ್ ಗಾಂಧಿ ತುಳಿತಕ್ಕೆ ಒಳಗಾವದರಿಗೆ ಅಧಿಕಾರ ಕೊಡಲು ಸಂವಿಧಾನ ಪರಿಚ್ಚೇದ 73, 74ಕ್ಕೆ ತಿದ್ದುಪಡಿಸಿ ತಂದು ಅಧಿಕಾರ ವಿಕೇಂದ್ರಿಕರಣ ಮಾಡಿದ್ದರು, ಇದರ ವಿರುದ್ಧ ಬಿಜೆಪಿಯ ರಾಮಜೋಯಿಸ್ ಸುಪ್ರಿಂ ಮೆಟ್ಟಿಲೇರಿದರೂ ಕೋರ್ಟ್ ವಜಾ ಮಾಡಿ ಅಧಿಕಾರ ವಿಕೇಂದ್ರಿಕರಣ ಎತ್ತಿಹಿಡಿಯಿತು, ಗ್ರಾಮ ಸ್ವರಾಜ್ ಮೂಲ ಅಧಿಕಾರ ವಿಕೇಂದ್ರಿಕರಣದ ಪರ ಕಾಂಗ್ರೆಸ್ ಇದ್ದರೆ ಬಿಜೆಪಿ ತಾಪಂ, ಜಿಪಂ ಚುನಾವಣೆ ಮುಂದೂಡುವ ಮೂಲಕ ಅಧಿಕಾರ ಕೇಂದ್ರಿಕರಣ ಮಾಡುತ್ತ ಜನವಿರೋಧಿ, ತುಳಿತಕ್ಕೊಳಗಾದವರ ವಿರೋಧಿಯಾಗಿದೆ. ಕೇಂದ್ರದ ಮೋದಿ ಸರ್ಕಾರ ಬೆಲೆ ಏರಿಕೆಯಿಂದ ಜನರ ಜೀವನ ಹಾಳು ಮಾಡುತ್ತಿದ್ದರೆ, ರಾಜ್ಯದ ಬೊಮ್ಮಯಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗೆದ್ದು ಜನರ ಶೋಷಣೆ ಮಾಡುತ್ತಾ ಸಂವಿಧಾನ ವಿರೋಧಿಗಳಾಗಿದ್ದಾರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 15 ಸ್ಥಾನದಲ್ಲಿ ಗೆಲ್ಲುವ ಮೂಲಕ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಸ್ಪಷ್ಟ ಸಂದೇಶ ನೀಡುತ್ತದೆ. ಭ್ರಷ್ಟ ಬಿಜೆಪಿ, ಅವಕಾಶವಾದಿ ಜೆಡಿಎಸ್‌ನ ಆಮೀಷ ತಿರಸ್ಕರಿಸಿ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ಅವರನ್ನು ಬೆಂಬಲಿಸಿ ಗೆಲ್ಲಿಸಬೇಕೆಂದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಜಿಲ್ಲೆಯಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಾಣುತ್ತಿದ್ದರೂ ಜೆಡಿಎಸ್ ಬಿಜೆಪಿಯೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದು ಇಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದು, ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ರಾಜಣ್ಣ ಗೆಲ್ಲಲಿದ್ದಾರೆ. ತಾಲೂಕಿನಲ್ಲಿ ಬಿಜೆಪಿಯ ಡಿ.ಕೃಷ್ಣಕುಮಾರ್ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಲು ರಾಜಣ್ಣ ಕಾರಣ, ಹೀಗಾಗಿ ಅವರೂ ಸಹ ರಾಜೇಂದ್ರ ಪರ ಚುನಾವಣೆ ಮಾಡುತ್ತಿದ್ದು, ಜೆಡಿಎಸ್‌ನ ಡಿ.ನಾಗರಾಜಯ್ಯನವರ ತಮ್ಮ ಬಿ.ಶಿವಣ್ಣ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದು ಅವರು ಸಹ ರಾಜೇಂದ್ರ ಪರ ಮತ ಯಾಚಿಸುತ್ತಿದ್ದಾರೆ. ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಅತ್ಯಧಿಕ ಮತಗಳಿಂದ ರಾಜೇಂದ್ರ ಗೆಲುವು ನಿಶ್ಚಿತ. ರಾಜೇಂದ್ರರವರ ತಂದೆ ರಾಜಣ್ಣ, ಯಡಿಯೂರಪ್ಪ ಸೇರಿದಂತೆ ಸಿಎಂ ಬೊಮ್ಮಾಯಿ, ಉಸ್ತುವಾರಿ ಸಚಿವ ಮಾಧುಸ್ವಾಮಿಯ ಜೊತೆ ಉತ್ತಮ ಸಂಬಂಧ ಇರುವ ಕಾರಣ ಅವರೂ ಸಹ ಇವರ ಗೆಲುವು ಬಯಸಿದ್ದಾರೆ ಎಂದರು.
ಕೇಂದ್ರಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಶಾಸಕ ಡಾ.ರಂಗನಾಥ್, ಮಾಜಿ ಶಾಸಕ ಷಡಕ್ಷರಿ ಇತರರು ಮಾತನಾಡಿದರು. ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ, ಪುರಸಭೆಯ ಕಾಂಗ್ರೆಸ್ ಸದಸ್ಯರು ಪಾಲ್ಗೊಂಡಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಗಣ್ಣಗೌಡ, ವೆಂಕಟರಾಮು, ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್ ಗೌಡ ಇತರರು ಹಾಜರಿದ್ದರು.
ಚರ್ಚೆಗೆ ಗ್ರಾಸವಾಯ್ತು ಅಭ್ಯರ್ಥಿ ವಿಚಾರ
ಕುಣಿಗಲ್ ತಾಲೂಕಿನ ಎಡೆಯೂರಿನಲ್ಲಿ ನಡೆದ ವಿಧಾನಪರಿಷತ್ ಚುನಾವಣೆಯ ಸಭೆಯಲ್ಲಿ ಕುಣಿಗಲ್ ವಿಧಾನಸಭೆ ಕ್ಷೇತ್ರದಿಂದ 2023ರ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಚರ್ಚೆಗೆ ಎಡೆಮಾಡಿಕೊಟ್ಟಿತು.
ಸಭೆಯಲ್ಲಿ ಮಾತನಾಡುತ್ತಾ ತಿಪಟೂರು ಮಾಜಿ ಶಾಸಕ ಷಡಕ್ಷರಿ, ಕುಣಿಗಲ್, ತಿಪಟೂರು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿತರ ದಂಡು ಜೋರಾಗಿದೆ, ಆದರೆ ನಾವು ಪಕ್ಷದ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರೊಂದಿಗೆ ಚರ್ಚೆ ನಡೆಸಿದ್ದೇವೆ, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕುಣಿಗಲ್ ಕ್ಷೇತ್ರದಿಂದ ಡಾ.ರಂಗನಾಥ್, ತಿಪಟೂರಿನಿಂದ ನಾನು ಸ್ಪರ್ಧೆ ಮಾಡೋದನ್ನು ತಡೆಯಲು ಯಾರಿಂದ ಸಾಧ್ಯವಿಲ್ಲ, ಎರಡೂ ಕ್ಷೇತ್ರದ ಸೀಟುಗಳು ಖಾಲಿ ಇಲ್ಲ ಎಂಬುದ ಸ್ಪರ್ಧಾಕಾಂಕ್ಷಿಗಳು ಅರಿಯಬೇಕೆಂದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ ಇತ್ತೀಚೆಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಕೆಲವರು ಓಡಾಡುತ್ತಿರುವುದಾಗಿ, ನಾವೆ ಮುಂದಿನ ಅಭ್ಯರ್ಥಿ ಎಂದು ಗೊಂದಲ ಸೃಷ್ಟಿಸುತ್ತಿರುವುದು ಕಂಡುಬಂದಿದೆ. ಇದು ಸರಿಯಲ್ಲ, ಕೊರೊನಾ ಸಮಯ ಸೇರಿದಂತೆ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಡಾ.ರಂಗನಾಥ್ ಅವರ ಸೇವೆ ಸ್ಮರಣೀಯ ಹಾಗೂ ಆದರ್ಶನೀಯ, ಇಂತಹ ಅಭ್ಯರ್ಥಿ ಬಿಟ್ಟು ಬೇರೆ ಅಭ್ಯರ್ಥಿಯ ಪ್ರಸ್ತಾಪ ಇಲ್ಲಿ ಸರಿಯಲ್ಲ. ಗೊಂದಲ ಸೃಷ್ಟಿಸುವುದು ಸರಿಯಲ್ಲ, ನಾನು ಸಂಸದನಾಗಿ ಹಾಗೂ ಇಲ್ಲಿನ ಉಸ್ತುವಾರಿ ತೆಗೆದುಕೊಂಡಿರುವವರೆಗೂ ಯಾವುದೇ ಕಾರಣಕ್ಕೂ ಕುಣಿಗಲ್ ಕಾಂಗ್ರೆಸ್ ಅಭ್ಯರ್ಥಿ ಡಾ.ರಂಗನಾಥ್ ಬದಲಾವಣೆ ಇಲ್ಲ, ಕಾರ್ಯಕರ್ತರು ಸಹ ದಿಲ್ಲಿಯಿಂದ ಬರುವವರು, ಹೋಗುವವರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ, ಅವರಿಗೆ ಎಷ್ಟು ಬೆಲೆಕೊಡಬೇಕೋ ಕೊಡೋಣ, ಪಕ್ಷದ ವಿಷಯದಲ್ಲಿ ಗೊಂದಲ ಸರಿಯಲ್ಲ. ಯಾವುದೆ ಊಹಾಪೂಹ ಬೇಡ, ಇದೆಲ್ಲಾ ಮಾಧ್ಯಮದವರಿಗೆ ಸುದ್ದಿ ಅಷ್ಟೆ, ಕಾಯಕರ್ತರಲ್ಲಿ ಯಾವುದೇ ಗೊಂಡಲ ಬೇಡ ಎಂದರು.
Comments are closed.