ಕೇಂದ್ರ ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್‌ ಕಿಡಿ

ಇಸ್ರೋ ಸ್ಥಳಾಂತರಕ್ಕೆ ಕೇಂದ್ರದ ಹುನ್ನಾರ

332

Get real time updates directly on you device, subscribe now.

ತುಮಕೂರು: ನಗರದ ಎಚ್‌ಎಂಟಿ ಕಾರ್ಖಾನೆ ಜಾಗದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಸ್ರೋ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿತ್ತು, ಆದರೆ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಇಸ್ರೋ ಕೇಂದ್ರವನ್ನು ಗುಜರಾತ್‌ಗೆ ಸ್ಥಳಾಂತರ ಮಾಡಲು ದೊಡ್ಡ ಹುನ್ನಾರ ನಡೆಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ದಿನದಲ್ಲಿ ತುಮಕೂರು- ಬೆಂಗಳೂರು ಸ್ಯಾಟಲೈಟ್‌ ಟೌನ್‌ ಆಗಲಿದೆ, ಬೆಂಗಳೂರಿಗೆ ಸಮೀಪವಿರುವ ಜಿಲ್ಲೆಯಾಗಿದೆ, ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಮಹತ್ವಕಾಂಕ್ಷೆ ಯೋಜನೆಗಳು ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿವೆ, ಬೃಹತ್‌ ಕೈಗಾರಿಕಾ ಪ್ರದೇಶ, ಸ್ಮಾರ್ಟ್‌ ಸಿಟಿ ಯೋಜನೆ ಹಾಗೂ ದೊಡ್ಡ ದೊಡ್ಡ ಆಸ್ಪತ್ರೆಗಳು ತುಮಕೂರಿಗೆ ಆಗಮಿಸುತ್ತಿವೆ, ಇಷ್ಟು ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಆರಂಭಿಸಲು ಉದ್ದೇಶಿಸಿದ್ದ ಇಸ್ರೋ ಕೇಂದ್ರವನ್ನು ಕುಂಟು ನೆಪವೊಡ್ಡಿ ಗುಜರಾತಿಗೆ ಸ್ಥಳಾಂತರ ಮಾಡಲು ಕೇಂದ್ರ ಸರ್ಕಾರ ಹುನ್ನಾರ ಮಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಹಲವು ನಾಯಕರು, ಮಾಜಿ, ಹಾಲಿ ಸಂಸದರು ಸೇರಿದಂತೆ ಹಲವು ಹಿರಿಯ ನಾಯಕರು ಅದಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದರು, ಜಾಗವನ್ನು ಇಸ್ರೋಗೆ ಹಸ್ತಾಂತರಿಸಲಾಗಿತ್ತು, ಆದರೆ ಸಮುದ್ರದ ಪಕ್ಕ ನಿರ್ಮಾಣ ಮಾಡಬೇಕು ಎಂದು ನೆಪ ಹೇಳುತ್ತಾ ಸ್ಥಳಾಂತರ ಮಾಡಲು ಹೊರಟಿದ್ದಾರೆ. ಆದರೆ ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಹಾಗೂ ಮಂತ್ರಿಗಳು, ಸಂಸದರು ಯಾರು ಕೂಡ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಎಚ್‌ಎಎಲ್‌ ಘಟಕ, ಎತ್ತಿನಹೊಳೆ ಯೋಜನೆ, ಸ್ಮಾರ್ಟ್‌ ಸಿಟಿ ಯೋಜನೆ ಸೇರಿದಂತೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳು ಕುಂಟುತ್ತ ಸಾಗಿವೆ, ಆದರೆ ಈಗಿರುವ ಮುಖ್ಯಮಂತ್ರಿಗಳು ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಇನ್ನು ಇಸ್ರೋ ಘಟಕವನ್ನು ಗುಜರಾತಿಗೆ ಸ್ಥಳಾಂತರ ಮಾಡಲು ಹೊರಟಿರುವ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಇಂತಹ ಅಮೂಲ್ಯ ಯೋಜನೆ ರಾಜ್ಯದಲ್ಲಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಮುಂದಾಗಬೇಕು ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಎಲ್ಲಾ ಹಂತದಲ್ಲೂ ಎಲ್ಲಾ ಕಾಮಗಾರಿಗಳಿಗೂ ಶೇಕಡ 40 ರಷ್ಟು ಕ ಕಮಿಷನ್‌ ಪಡೆಯಲಾಗುತ್ತಿದೆ ಎಂದು ಕಂಟ್ರಾಕ್ಟರ್‌ಗಳ ಸಂಘ ಕೇಂದ್ರಕ್ಕೆ ಪತ್ರ ಬರೆದಿರುವುದು ರಾಜ್ಯದ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿ, ಹಾಗಾಗಿ ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು, ಇನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಡಬಲ್‌ ಇಂಜಿನ್‌ ಸರ್ಕಾರ ಮೇಕೆದಾಟು ಯೋಜನೆ ಜಾರಿಯಲ್ಲಿ ಸಹ ಹಿಂದೇಟು ಹಾಕುತ್ತಿದೆ, ಮೇಕೆದಾಟು ಯೋಜನೆ ಜಾರಿಯಾದರೆ ಕರ್ನಾಟಕಕ್ಕೆ ಕುಡಿಯುವ ನೀರು ಹಾಗೂ ವಿದ್ಯುತ್‌ ಉತ್ಪಾದನೆಗೆ ಅನುಕೂಲವಾಗಲಿದೆ, ಈಗಾಗಲೇ ಸಾಕಷ್ಟು ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ, ಹಾಗಾಗಿ ಹರಿದು ಹೋಗುತ್ತಿರುವ ನೀರಿಗೆ ಮೇಕೆದಾಟು ಯೋಜನೆ ಜಾರಿ ಮಾಡುವ ಮೂಲಕ ಕರ್ನಾಟಕಕ್ಕೆ ಕುಡಿಯುವ ನೀರಿಗೆ ಹಾಗೂ ಇತರೆ ಕೆಲಸಗಳಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ, ಹೀಗಾಗಿ ರಾಜ್ಯ ಸರ್ಕಾರ ಈಗಿರುವ ತಾತ್ಕಾಲಿಕ ಸಮಸ್ಯೆ ಬಗೆಹರಿಸಿ ಕೂಡಲೇ ಮೇಕೆದಾಟು ಯೋಜನೆ ಜಾರಿಗೆ ಮುಂದಾಗಬೇಕು ಎಂದರು.
ಮೇಕೆದಾಟು ಯೋಜನೆ ಜಾರಿ ಸಂಬಂಧ ಜನವರಿ ಮೊದಲನೇ ವಾರದಲ್ಲಿ ಕಾಂಗ್ರೆಸ್‌ ಪಕ್ಷವು ಪಾದಯಾತ್ರೆ ನಡೆಸಲಿದೆ, ಹಾಗಾಗಿ ಬೆಂಗಳೂರಿನ ಜನತೆ ಹಾಗೂ ಎಲ್ಲಾ ನಾಗರಿಕರು ನಮ್ಮ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕಾಂಗ್ರೆಸ್‌ ಮುಖಂಡ ಶಫಿ ಅಹಮದ್‌, ರಾಧಕೃಷ್ಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!