ಗ್ರಾಮೀಣರ ವೈದ್ಯಕೀಯ ಸೇವೆಗೆ ಸಿದ್ಧಾರ್ಥ ಸಂಸ್ಥೆ ಆದ್ಯತೆ

ಉತ್ತಮ ಕಾರ್ಯಕ್ಕೆ ಯದುವೀರ್‌ ಶ್ಲಾಘನೀಯ

144

Get real time updates directly on you device, subscribe now.

ತುಮಕೂರು: ಗ್ರಾಮಾಂತರ ಪ್ರದೇಶದ ಜನ ಸಮುದಾಯಕ್ಕೆ ಆರೋಗ್ಯಶಿಕ್ಷಣ ನೀಡಬೇಕೆಂಬ ಮೈಸೂರು ಮಹಾರಾಜ ಮನೆತನದ ಪರಿಕಲ್ಪೆಯನ್ನು ಇಂದಿನ ಕಾಲದಲ್ಲಿ ಸಾಕಾರಗೊಳಿಸುತ್ತಿರುವ ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆ ರಾಜಾಡಳಿತ ಮರುಕಳಿಸುವ ರೀತಿಯಲ್ಲಿ ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಪ್ರಶಂಸೆ ವ್ಯಕ್ತಪಡಿಸಿದರು.
ನಗರದ ಅಗಳಕೋಟೆಯಲ್ಲಿನ ಡಾ.ಹೆಚ್‌.ಎಂ.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಸಿದ್ದಾರ್ಥ ಅಡ್ವಾನ್ನಸ್ಡ್ ಹಾರ್ಟ್‌ ಸೆಂಟರ್‌ ವರ್ಷಾಚರಣೆ ಸವಿ ನೆನಪಿಗಾಗಿ ಸಾಹೇ ವಿಶ್ವವಿದ್ಯಾಲಯದ ಮುಂಭಾಗ ಗಿಡ ನೆಟ್ಟು ನಂತರ ವೇದಿಕೆಯಲ್ಲಿ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಒಂದು ಸಂಸ್ಥೆ ಸಾಮಾನ್ಯವಾಗಿ ಒಂದು ವರ್ಷದಲ್ಲಿ ಸಾಧನೆ ಮಾಡುವುದು ತುಂಬಾ ವಿರಳವಾಗಿರುತ್ತದೆ, ಆದರೆ ಸಿದ್ದಾರ್ಥ ಕಾರ್ಡಿಯಾಕ್‌ ಸಂಸ್ಥೆಯ ಕಾರ್ಯಗಳನ್ನು ಗಮನಿಸುತ್ತಿದ್ದರೆ ಸಾಕಷ್ಟು ಸಾಧನೆಗಳು ನಮ್ಮ ಕಣ್ಣ ಮುಂದೆ ಬರುತ್ತಿವೆ. ಬ್ರಿಟಿಷರ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಇದ್ದಂತಹ ಉತ್ತಮ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯ ಮಾದರಿಯನ್ನು ಸಿದ್ದಾರ್ಥ ಸಂಸ್ಥೆಯು ಅಳವಡಿಸಿಕೊಂಡಿರುವುದು ಸಂತೋಷದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಭಾರತದ ದ್ವಿತೀಯ ಮತ್ತು ತೃತೀಯ ದರ್ಜೆಯ ನಗರಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತಹ ಸೌಲಭ್ಯ ಕಡಿಮೆ ಆಗಿರುವುದರಿಂದ ಎರಡನೆ ಮತ್ತು ಮೂರನೇ ಮಟ್ಟದ ಆರೋಗ್ಯಚಿಕಿತ್ಸಾ ಕೇಂದ್ರಗಳು ಹೆಚ್ಚಿನದಾಗಿ ಆರಂಭವಾಗಬೇಕು. ಹುಟ್ಟುವ ಮಕ್ಕಳಿಗೆ ಹೃದಯದ ಖಾಯಿಲೆಗಳು ಯಾರು ಕೂಡ ನಿರೀಕ್ಷೇ ಮಾಡಿರುವುದಿಲ್ಲ, ಅಂತಹ ಖಾಯಿಲೆಗಳಿಗೆ ಸಿದ್ದಾರ್ಥ ಸಂಸ್ಥೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವ ವಿಷಯ ಕೇಳಿ ಸಂತೋಷವಾಯಿತು ಎಂದು ಯದುವೀರ್‌ ಶುಭ ಹಾರೈಸಿದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಮೈಸೂರು ಸಂಸ್ಥಾನ ಇಡೀ ದೇಶದಲ್ಲಿ ಹೆಸರುವಾಸಿಯಾಗಿರುವ ರಾಜಮನೆತನ, ಮೈಸೂರು ಸಂಸ್ಥಾನ ಜನ ಸಮುಯದಾಯಕ್ಕೆ ನೀಡಿದ ಕೊಡುಗೆ ಬಹುಶಃ ಯಾವುದೇ ಸಂಸ್ಥಾನ ನೀಡಲು ಸಾಧ್ಯವಿಲ್ಲ, ಆರೋಗ್ಯ ಕ್ಷೇತ್ರದಲ್ಲಿ ಸಂಸ್ಥಾನ ಮಾಡಿದ ಸೇವೆ ಈಗಲೂ ಸಹ ಹೋಬಳಿ ಮಟ್ಟದಲ್ಲಿನ ಆಸ್ಪತ್ರೆಗಳೇ ಸಾಕ್ಷಿ, ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೆ ಕೊಡುಗೆ ನೀಡಿದ್ದಾರೆ. ಮೈಸೂರು ರಾಜಮನೆತನದ ಸೇವೆಗಳು ನನಗೆ ಸ್ಪೂರ್ತಿಯಾಗಿದ್ದು ಸಿದ್ದಾರ್ಥ ಎಜುಕೇಷನ್‌ ಸೊಸೈಟಿಯನ್ನು ಸೇವೆಯ ದಿಸೆಯಲ್ಲಿ ಕೊಂಡೊಯ್ಯುವ ನನ್ನ ಕನಸು ಇಂದು ನನಸಾಗಿದೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ಅದರಲ್ಲೂ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ಸಂಸ್ಥೆ ಶ್ರಮಿಸುತ್ತಿರುವುದು ನನಗೆ ಹೆಮ್ಮೆ ಎನಿಸಿದೆ ಎಂದರು.
ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‌ಸೆಂಟರ್‌ನ ಮೇಲ್ವಿಚಾರಕ ಹಾಗೂ ಕಾರ್ಡಿಯಾಕ್‌ ಫ್ರಾಂಟಿಡಾ ಸಂಸ್ಥೆಯ ನಿರ್ದೇಶಕ ಡಾ.ತಮೀಮ್‌ ಅಹಮದ್‌ ಮಾತನಾಡಿ, ತುಮಕೂರಿನಿಂದ ಶಿವಮೊಗ್ಗ, ದಾವಣೆಗೆರೆ, ಮೈಸೂರು ಮಾರ್ಗಮಧ್ಯೆ ಹೃದಯಕ್ಕೆ ಸಂಬಂಧಿಸಿದ ಯಾವುದೇರೀತಿಯ ಆಸ್ಪತ್ರೆಗಳಿಲ್ಲ, ಆದರೆ ತುಮಕೂರಿನಂತ ಪ್ರದೇಶದಲ್ಲಿ ವಿಶ್ವಮಟ್ಟದ ಆರೋಗ್ಯ ಸೇವೆ ನೀಡಲಾಗುತ್ತಿದೆ, ಹೃದಯ ಸಂಕೀರ್ಣ ರೋಗಗಳಿಗೆ ಪರಿಹಾರ ಸೂಚಿಸುವ ನುರಿತ ವೈದ್ಯರ ತಂಡ ಆಸ್ಪತ್ರೆಯಲ್ಲಿದೆ ಎಂದು ತಮ್ಮ ಒಂದು ವರ್ಷದ ಅನುಭವ ಹಂಚಿಕೊಂಡರು.
ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಕನ್ನಿಕಾ ಪರಮೇಶ್ವರ್‌, ಸಾಹೇ ವಿವಿ ಉಪಕುಲಪತಿ ಡಾ.ಪಿ.ಬಾಲಕೃಷ್ಣ ಶೆಟ್ಟಿ, ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲ ಡಾ.ಪ್ರಭಾಕರ್‌, ಕುಲಸಚಿವ ಡಾ.ಎಂ.ಝೆಡ್‌.ಕುರಿಯನ್‌, ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸುಶಿಲ್‌ಚಂದ್ರ ಮಹಾಪಾತ್ರ, ಡೆಂಟಲ್‌ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪ್ರವೀಣ್‌ ಕುಡುವ, ಬೇಗೂರು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ವಾಸುದೇವ್‌, ಸಾಹೇ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ನಿಯಂತ್ರಕ ಡಾ.ಜಿ.ಎಂ.ಶಿವಕುಮಾರಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!