ಶಿರಾ: ನಾವುಗಳು ಅಂದರೆ ಒಬ್ಬರು ಎಂಪಿ, ಇಬ್ಬರು ಶಾಸಕರು, ಇಬ್ಬರು ನಿಗಮ ಮಂಡಲಿ ಅಧ್ಯಕ್ಷರು ಅಧಿಕಾರಕ್ಕೆ ಬಂದ ಮೇಲೆ ಶಿರಾ ನಗರಸಭೆಯ ಮೊದಲ ಚುನಾವಣೆ ನಡೆಯುತ್ತಿದೆ, ನಗರದ ಜನರು ಕೂಡಾ ಬದಲಾವಣೆ ನಿರೀಕ್ಷೆ ಮಾಡುತ್ತಿದ್ದು, ಈ ಬಾರಿ ಬಿಜೆಪಿ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೇಂದ್ರ ಮಂತ್ರಿ ಮತ್ತು ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಅವರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆ ಚುನಾವಣೆ ಕುರಿತು ಈಗಷ್ಟೇ ಕಾರ್ಯಕರ್ತರ ಸಭೆ ನಡೆಸಿ, ಅಭಿಪ್ರಾಯ ಪಡೆಯಲಾಗಿದೆ. ಬಿಜೆಪಿ ಪಕ್ಷ ನಗರಸಭೆ ಚುನಾವಣೆ ತಯಾರಿಯಲ್ಲಿದೆ. ಇಬ್ಬರು ಶಾಸಕರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರು.
ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸುವ ಮೂಲಕ, ಒಂದು ಧರ್ಮವನ್ನು ಓಲೈಸುವ ರಾಜಕೀಯ ಮಾಡುತ್ತಿದ್ದರು, ಅದಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ. ನಗರೋತ್ಥಾನ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಾಹಿತಿ ಇದೆ. ನಿರ್ಮಾಣ ಆಗದ ಶೌಚಾಲಯಗಳಿಗೆ ಬಿಲ್ ಪಾವತಿಸಿರುವ ದಾಖಲೆಗಳಿವೆ. ಅಧಿಕಾರಿಗಳಿಗೆ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ. 94ಸಿಸಿ ಯಲ್ಲಿ ಹಕ್ಕುಪತ್ರಗಳನ್ನು ಕೊಡುವ ಪ್ರಾಮಾಣಿಕ ಪ್ರಯತ್ನ ಆಗಿಲ್ಲ ಎಂದು ಟೀಕಿಸಿದರು.
ನಮ್ಮ ಶಾಸಕರು ಆಯ್ಕೆಯಾದ ನಂತರ ನಡೆದಿರುವ ಬೆಳವಣಿಗೆಗಳನ್ನು ಜನರು ಗಮನಿಸಿದ್ದಾರೆ. ಅಭಿವೃದ್ಧಿ ಕಾರಣಕ್ಕಾಗಿ ಜನರು ಬಿಜೆಪಿ ಆಯ್ಕೆ ಮಾಡಲಿದ್ದಾರೆ. ಇದೇ ರೀತಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಲೋಕೇಶ್ ಅತ್ಯಧಿಕ ಮತಗಳಿಂದ ಜಯಗಳಿಸಲಿದ್ದಾರೆ. ಚಿತ್ರದುರ್ಗದಲ್ಲೂ ಬಿಜೆಪಿ ಅಭ್ಯರ್ಥಿ ಜಯಗಳಿಸಲಿದ್ದಾರೆ ಎಂದು ನುಡಿದರು.
ಕಳೆದ ಸರ್ಕಾರದ ಕಾಲದಲ್ಲಿ ಅನುಮೋದನೆಗೊಂಡಿದ್ದ ಪಟ್ಟಿಯಂತೆ ನಿವೇಶನ ಹಂಚದೇ, ಶಿರಾದಲ್ಲಿ ಹೊಸದಾಗಿ ಅರ್ಜಿ ಕರೆಯಲಾಗಿದೆ. ಶೌಚಾಲಯವೇ ಇಲ್ಲದೇ ಬಿಲ್ ಮಾಡಿರುವ ದಾಖಲೆ ಇದ್ದರೂ ನಿಮ್ಮ ಸರ್ಕಾರ ಸುಮ್ಮನಿರುವುದೇಕೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಂಸದರ ಪರವಾಗಿ ಉತ್ತರಿಸಿದ ಶಾಸಕ ಚಿದಾನಂದ ಎಂ.ಗೌಡ, ಹಳೆಯ ಪಟ್ಟಿಯಂತೆ ನಿವೇಶನ ರಹಿತರ ಪರಿಶೀಲನೆ ನಡೆಸಿದ ವೇಳೆ, ಸಾರ್ವಜನಿಕರಿಂದ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಹೊಸದಾಗಿ ಅರ್ಜಿ ಕರೆಯುವ ತೀರ್ಮಾನ ಕೈಗೊಳ್ಳಲಾಯಿತು. ನಮ್ಮ ಬಳಿ ಇರುವ ದಾಖಲೆಗಳಿಗೆ ಪೂರಕವಾಗಿ ತನಿಖೆ ನಡೆಸಲು ಸೂಚನೆ ನೀಡಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಪಡೆದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.
ತಾಲ್ಲೂಕು ಮಟ್ಟದ ಕೆಡಿಪಿ ಸಭೆಯನ್ನೇ ನಡೆಸದೇ ಇರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಸಕ ಸಿ.ಎಂ.ರಾಜೇಶ್ ಗೌಡ, ಎರಡು ಬಾರಿ ಸಭೆ ಕರೆಯಲು ಸೂಚನೆ ನೀಡಿದ್ದರೂ, ಕೊರೊನಾ ಕಾರಣ ನಿಗದಿತ ಸಮಯಕ್ಕೆ ಸಭೆ ನಡೆಸಲಾಗಿಲ್ಲ. ಆದರೆ ಜಿಲ್ಲಾ ಮಟ್ಟದಲ್ಲಿ ನಡೆದ ಎಲ್ಲಾ ಕೆಡಿಪಿ ಸಭೆಗಳಲ್ಲಿ ಪಾಲ್ಗೊಂಡು ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಪರಾಮರ್ಶೆ ನಡೆಸಿದ್ದೇನೆ ಎಂದು ಉತ್ತರಿಸಿದರು.
ನಿಮಗ ಮಂಡಲಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ, ತಾಪಂ ಮಾಜಿ ಉಪಾಧ್ಯಕ್ಷ ರಂಗನಾಥಗೌಡ, ಪಕ್ಷದ ತಾಲ್ಲೂಕು ಅಧ್ಯಕ್ಷ ರಂಗಸ್ವಾಮಿ, ವಿಜಯರಾಜ್, ಮಾಜಿ ಅಧ್ಯಕ್ಷ ಬಸವರಾಜು, ಮುಖಂಡ ನೇರಳಗುಡ್ಡ ಶಿವಕುಮಾರ್, ನಿರಂಜನ್, ಮಾಲಿ ಮರಿಯಪ್ಪ, ನಂದೀಶ್, ಲಕ್ಷ್ಮೀಶ್ ಮತ್ತಿತರರು ಇದ್ದರು.
ಬಿಜೆಪಿಗೆ ಶಿರಾ ನಗರಸಭೆ ಅಧಿಕಾರ: ನಾರಾಯಣಸ್ವಾಮಿ ವಿಶ್ವಾಸ
Get real time updates directly on you device, subscribe now.
Next Post
Comments are closed.