ತುಮಕೂರು: ಜಿಲ್ಲೆಯಲ್ಲಿ ಕೋವಿಡ್- 19 ಹರಡದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ವೀಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಸಭೆಯಲ್ಲಿ ಮಾತನಾಡಿ, ಈಗಾಗಲೇ ಬೇರೆ ರಾಜ್ಯ, ಜಿಲ್ಲೆಗಳಲ್ಲಿ ಕೋವಿಡ್-19 ಹರಡುತ್ತಿರುವುದು ಕಂಡು ಬಂದಿದ್ದು, ಜಿಲ್ಲೆಯಲ್ಲಿಯೂ ಕೋವಿಡ್ ಪ್ರಕರಣ ಹೆಚ್ಚುವ ಸಾಧ್ಯತೆಯಿದೆ, ಹಾಗಾಗಿ ಕೋವಿಡ್ ಹರಡದಂತೆ ಎಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕೋವಿಡ್-19 ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಕೋವಿಡ್ ಸೋಂಕು ದೃಢಪಟ್ಟವರಿಗೆ ಸೂಕ್ತ ಚಿಕಿತ್ಸೆ ನೀಡುವುದರೊಂದಿಗೆ ಅವರನ್ನು ಐಸೋಲೇಟ್ ಮಾಡಬೇಕು, ಅಲ್ಲದೆ ಕೋವಿಡ್ ಪಾಸಿಟಿವ್ ದೃಢಪಟ್ಟ ಸೋಂಕಿತರ ಪತ್ತೆ ಹಚ್ಚಿ ಅವರನ್ನು ಪರೀಕ್ಷೆಗೆ ಒಳಪಡಿಸಿ ಐಸೊಲೇಟ್ ಮಾಡಬೇಕು ಎಂದು ನಿರ್ದೇಶಿಸಿದರು.
ಕೋವಿಡ್ ಪ್ರಕರಣ ಹೆಚ್ಚು ಕಂಡು ಬಂದ ಪ್ರದೇಶಗಳಲ್ಲಿ ಹೆಚ್ಚು ಕೋವಿಡ್ ಪರೀಕ್ಷೆ ನಡೆಸಬೇಕು, ಅಲ್ಲದೆ ಅಂತಹ ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶವನ್ನಾಗಿಸಬೇಕು ಎಂದು ಸೂಚಿಸಿದರು.
ಕೋವಿಡ್ ಹರಡದಂತೆ ಎಲ್ಲಾ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸಬೇಕು, ನಿರ್ಲಕ್ಷ್ಯದಿಂದ ಹೆಚ್ಚು ಪ್ರಕರಣ ಕಂಡು ಬಂದರೆ ಅಂತಹ ವ್ಯಾಪ್ತಿಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ವರಿಕೆ ನೀಡಿದರು.
ಜಿಲ್ಲೆಯಲ್ಲಿ ಮಂಗಳವಾರ, ಬುಧವಾರ ಮತ್ತು ಗುರುವಾರ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದ್ದು, ನೂರರಷ್ಟು ಲಸಿಕಾಕರಣ ಯಶಸ್ವಿಗೊಳಿಸಬೇಕು. ಶೇ.100 ರಷ್ಟು ಲಸಿಕಾಕರಣ ಮಾಡಲೇಬೇಕು. ಲಸಿಕೆಯಿಂದ ಯಾರೂ ಬಿಟ್ಟು ಹೋಗಬಾರದು, ಅರಿವು ಮೂಡಿಸುವ ಮೂಲಕ ಅರ್ಹರಿಗೆ ಲಸಿಕೆ ನೀಡಬೇಕು ಎಂದು ಸೂಚಿಸಿದರು.
ವಿಧಾನ ಪರಿಷತ್ ಚುನಾವಣಾ ಸಂಬಂಧ ಡಿಸೆಂಬರ್ 7 ರಂದು ಸಂಜೆ 4 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ನಿಗಾವಹಿಸಬೇಕು. ಮತದಾನದ ದಿನದಂದು ಮತಗಟ್ಟೆಗಳಲ್ಲಿ ಬ್ಯಾಲೆಟ್ ಬಾಕ್ಸ್ ತೆರೆಯುವ ಮತ್ತು ಮತದಾನ ಮುಗಿದ ಮೇಲೆ ಬ್ಯಾಲೆಟ್ ಬಾಕ್ಸ್ ಸೀಲ್ ಮಾಡುವ ಹಾಗೂ ಮತದಾರರು ಬಂದು ಮತದಾನ ಮಾಡುವ ಕುರಿತು ವೀಡಿಯೋ ಮಾಡುವ ಬಗ್ಗೆ ಎಲ್ಲಾ ವೀಡಿಯೋಗ್ರಾಫರ್‌ಗಳಿಗೆ ಆಯಾ ತಹಸೀಲ್ದಾರ್ ಗಳು ತರಬೇತಿ ನೀಡಬೇಕು. ಮತದಾರರು ಮತದಾನ ಮಾಡುವುದನ್ನು ವೀಡಿಯೋ ಮಾಡುವಂತಿಲ್ಲ. ನಿಯಮ ಉಲ್ಲಂಘನೆಯಾಗದಂತೆ ವೀಡಿಯೋ ಮಾಡಬೇಕು, ಅಂದರೆ ಮತದಾರರು ಆಗಮಿಸುವ ವೇಳೆ ಮಾತ್ರ ವೀಡಿಯೋ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಅಜಯ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಕೋವಿಡ್ ಹರಡದಂತೆ ಕಟ್ಟೆಚ್ಚರ ವಹಿಸಿ: ಡೀಸಿ
Get real time updates directly on you device, subscribe now.
Prev Post
Comments are closed.