ತುಮಕೂರು: ಜಾತ್ಯತೀತ ಸಂಘಟನೆಗಳ ಒಕ್ಕೂಟ ಮತ್ತು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ನಗರದ ಟೌನ್ ಹಾಲ್ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ 65ನೇ ಪರಿನಿರ್ವಾಣ ದಿನ ಆಚರಿಸಲಾಯಿತು.
ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜೆ.ಕುಮಾರ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿ ಮಾತನಾಡಿ, ಡಿ.6 ರಂದು ಭಾರತವೂ ಸೇರಿದಂತೆ ಇಡೀ ವಿಶ್ವದಾದ್ಯಂತ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇನ್ನು 15 ವರ್ಷಗಳ ಕಾಲ ಜೀವಂತವಾಗಿ ಇದ್ದಿದ್ದರೆ ಈ ನಮ್ಮ ಸಮಾಜದಲ್ಲಿ ಪ್ರತಿಯೊಂದು ಜಾಗದಲ್ಲೂ ಸಮಾನತೆ ಹರಿದಾಡುತ್ತಿತ್ತು, ಬುದ್ಧ, ಬಸವಣ್ಣ ಅದೇ ರೀತಿ ಅಂಬೇಡ್ಕರ್ ಅವರೂ ಇತಿಹಾಸ ಪುರುಷರು, ಅವರಲ್ಲಿದ್ದಂತಹ ಜ್ಞಾನ ಇಡೀ ವಿಶ್ವದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳನ್ನು ಅಂಬೇಡ್ಕರ್ ಅವರ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ, ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಇನ್ನೂ 15 ವರ್ಷಗಳ ಕಾಲ ಅಂಬೇಡ್ಕರ್ ಅವರು ನಮ್ಮ ಜೊತೆ ಇದ್ದಿದ್ದರೆ ಇಡೀ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿರುತ್ತಿತ್ತು, ಅಂಬೇಡ್ಕರ್ ಕಂಡ ಕನಸು ನನಸಾಗುತ್ತಿತ್ತು ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಶತಮಾನ ದಿನೋತ್ಸವವನ್ನು ಭಾರತವಷ್ಟೇ ಅಲ್ಲ ವಿಶ್ವದಾದ್ಯಂತ ಗೌರವ ಸಲ್ಲಿಸುವ ಮೂಲಕ ಪೂಜಿಸುತ್ತಿದ್ದಾರೆ ಎಂದರು.
ಕೆಲವು ಜಾತಿವಾದಿ ಸಂಘಟನೆಗಳು ಅಂಬೇಡ್ಕರ್ ಅವರನ್ನು ಒಂದೇ ಜಾತಿಗೆ ಸೀಮಿತ ಮಾಡುತ್ತಿರುವುದು ಖಂಡನೀಯ, ಕಾರ್ಮಿಕರಿಗೆ, ದಲಿತರಿಗೆ, ಹಿಂದುಳಿದವರಿಗೆ, ಮುಸ್ಲಿಂರಿಗೆ ರೈತರಿಗೆ, ಮಹಿಳೆಯರಿಗೆ ಎಲ್ಲರಿಗೂ ಸಂವಿಧಾನದ ಹಕ್ಕನ್ನು ಕೊಟ್ಟಿದ್ದಾರೆ, ಸರ್ವಸಮಾನವಾಗಿ ಬದುಕುವಂತಹ ಹಕ್ಕನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾನವರಾಗಿ ಬದುಕು ಎಂದು ಸಂವಿಧಾನ ಕೊಟ್ಟಿದ್ದು, ಈ ಸಂವಿಧಾನವನ್ನು ಇಂದು ತಿರುಚುವ ಕೆಲಸ ಮಾಡುತ್ತಾ ಹುನ್ನಾರ ಮಾಡುತ್ತಿದ್ದಾರೆ, ಇದು ಖಂಡನೀಯ ಎಂದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಆಚರಿಸದೇ ಇರುವುದು ಅಂಬೇಡ್ಕರ್ ಅವರಿಗೆ ಮಾಡುತ್ತಿರುವ ಅಪಮಾನ, ಇನ್ನು ಮುಂದಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಗೌರವಯುತವಾಗಿ ಸಾಂಕೇತಿಕವಾಗಿಯಾದರೂ ಆಚರಿಸಲು ಆದೇಶಿಸಬೇಕು ಎಂದು ಒತ್ತಾಯಿಸಿದರು.
ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವ ಎಂಬ ಮೂಲಭೂತ ತತ್ವಗಳನ್ನು ನೀಡಿದಂತಹ ಮಹಾನ್ ಚೇತನ, ಅವರ ಆದರ್ಶ, ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಯುವ ಘಟಕದ ಜಿಲ್ಲಾಧ್ಯಕ್ಷ ಕೆ.ಗೋವಿಂದರಾಜು ಮಾತನಾಡಿ, ಇಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 65ನೇ ಪರಿನಿರ್ವಾಣ ದಿನ ಆಚರಿಸುವ ಮೂಲಕ ಜಗತ್ತಿನ ಅತೀ ಶ್ರೇಷ್ಠ ಮಾನವತಾವಾದಿಯನ್ನು ಸ್ಮರಣೆ ಮಾಡುತ್ತಿದ್ದೇವೆ, ಅವರ ಆದರ್ಶ, ಸಿದ್ಧಾಂತಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕಿದೆ ಎಂದರು.
ಬೇರೆ ಬೇರೆ ದೇಶಗಳಲ್ಲಿ ಆ ದೇಶದ ಮಹಾನ್ ಪುರುಷರನ್ನು ಸ್ಮರಣೆ ಮಾಡಲಾಗುತ್ತದೆ, ಆದರೆ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ, ಅವರನ್ನು ಇಡೀ ವಿಶ್ವವೇ ನೆನಪು ಮಾಡಿಕೊಳ್ಳುತ್ತಿದೆ, ಅಂಬೇಡ್ಕರ್ ಅವರ ಬಾಲ್ಯದಲ್ಲಿ ಶೋಷಣೆ ಎನ್ನುವುದು ಕಾಲ್ಪನಿಕವಾಗಿರಲಿಲ್ಲ, ಅದನ್ನು ಸ್ವತಹ ಅವರೆ ಅನುಭವಿಸಿ ಬಂದಿದ್ದರಿಂದ ಶೋಷಿತರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಶ್ರಮಿಸಿದರು ಎಂದರು.
ಸರಳ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ನರಸಿಂಹರಾಜು, ಮಂಜುನಾಥ್, ಮಾಜಿ ಸದಸ್ಯ ರಮೇಶ್, ಮಾಜಿ ಉಪಮೇಯರ್ ಹನುಮಂತರಾಯಪ್ಪ, ನಿಧಿಕುಮಾರ್, ಗೋವಿಂದರಾಜು, ಡಾ.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಎಂ.ರಾಜೇಂದ್ರ, ಟಿ.ಕೆ.ನರಸೀಯಪ್ಪ, ಲಕ್ಷ್ಮೀನಾರಾಯಣ್, ಜಿ.ಮಾರುತಿ, ರಜನೀಕಾಂತ್, ಟಿ.ಮನು, ಗಂಗಾಧರ್, ಹೆಚ್.ಬಿ.ರಾಜೇಶ್, ಅತೀಕ್ ಉರ್ ರೆಹಮಾನ್, ಶರೀಫ್, ನದೀಮ್, ಕೃಷ್ಣಮೂರ್ತಿ, ಶಿವಾಜಿ, ಆಟೋಶಿವರಾಜ್, ಟಿ.ಎನ್.ಮಧು, ಜಿ.ಆರ್.ಸುರೇಶ್, ನಿರಂಜನ್, ಸುನೀಲ್, ಕುಚ್ಚಂಗಿ ಶಿವರಾಜ್ ಇತರರು ಭಾಗವಹಿಸಿದ್ದರು.
ಡಾ.ಅಂಬೇಡ್ಕರ್ ಸಮಾನತೆಯ ಹರಿಕಾರ: ಕುಮಾರ್
Get real time updates directly on you device, subscribe now.
Next Post
Comments are closed.