ಕಾಂಗ್ರೆಸ್ ನವರು ಚಕ್ರವ್ಯೂಹಕ್ಕೆ ಸಿಲುಕಿಸಿ ಷಡ್ಯಂತ್ರ ಮಾಡಿ ಸೋಲಿಸಿದ್ರು: ಹೆಚ್.ಡಿ.ಡಿ

ಅನಿಲ್ ಗೆಲ್ಲಿಸಿ ದ್ರೋಹ ಬಗೆದವರಿಗೆ ಪಾಠ ಕಲಿಸಿ

167

Get real time updates directly on you device, subscribe now.

ತುರುವೇಕೆರೆ: ಜೆಡಿಎಸ್ ಪಕ್ಷಕ್ಕೆ ವಿಶೇಷ ರಾಜಕೀಯ ಶಕ್ತಿ ತುಂಬುತ್ತಾ ಮುನ್ನಡೆಸುತ್ತಿರುವ ತುಮಕೂರು ಜಿಲ್ಲೆಯನ್ನು ನಾನು ಎಂದಿಗೂ ಮರೆಯಲಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದರು.
ಪಟ್ಟಣದ ಚೌದ್ರಿ ಕನ್ವೆಂಷನ್ ಹಾಲ್ ನಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ತುಮಕೂರಿನಿಂದ ಸಂಸತ್ ಚುನಾವಣೆಗೆ ಸ್ಪರ್ಧಿಸಲು ನನಗೆ ಇಷ್ಟವಿರಲಿಲ್ಲ, ಆದರೂ ಕಾಂಗ್ರೆಸ್ ನವರು ನನ್ನನ್ನು ಒಪ್ಪಿಸಿ ಕಣಕ್ಕಿಳಿಸುವ ಮೂಲಕ ಚಕ್ರವ್ಯೂಹಕ್ಕೆ ಸಿಲುಕಿಸಿ ಷಡ್ಯಂತ್ರ ಮಾಡಿ ನನ್ನನ್ನು ಸೋಲಿಸಿದರು, ನಾನು ಹೋರಾಟದಿಂದ ಬಂದವನು ನನ್ನ ರೈತ ಹಾಗೂ ಶೋಷಿತರ ಪರವಾದ ಹೋರಾಟ ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ, ಕೆ.ಎನ್.ರಾಜಣ್ಣ ನನ್ನಿಂದ ರಾಜಕೀಯ ಲಾಭ ಪಡೆದು ಸಂಸತ್ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದೆ ಎಂದು ಬೀಗುತ್ತಿದ್ದಾರೆ. ನಮ್ಮ ಪಕ್ಷದ ವಿಧಾನಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್ ಅವರನ್ನು ಗೆಲ್ಲಿಸುವ ಮೂಲಕ ನನಗೆ ದ್ರೋಹ ಬಗೆದವರಿಗೆ ತಕ್ಕ ಪಾಠ ಕಲಿಸಿ ಎಂದು ಮತದಾರರನ್ನು ಮನವಿ ಮಾಡಿದರು.
ತುಮಕೂರು ಜಿಲ್ಲೆಗೆ ಹೇಮಾವತಿ ತರಲು ಮಾಡಿದ ಹೋರಾಟ ನನ್ನದಾಗಿತ್ತು, ತುರುವೇಕೆರೆಗೂ ನನಗೂ ಅವಿನಾಭಾವ ಸಂಬಂಧವಿದೆ. ತುರುವೇಕೆರೆ ಕ್ಷೇತ್ರದ ಜನತೆ ಜೆಡಿಎಸ್ ಬೆಂಬಲಕ್ಕಿದ್ದಾರೆ. ಸಂಸತ್ ಚುನಾವಣೆಯಲ್ಲಿ ಅತಿ ಹೆಚ್ಚು ಮತ ನೀಡಿದ ತುರುವೇಕೆರೆ ಕ್ಷೇತ್ರದ ಜನತೆಗೆ ನಾನು ಆಬಾರಿಯಾಗಿರುತ್ತೇನೆ, ಕುಮಾರಸ್ವಾಮಿ ರಾಜ್ಯ ಪ್ರವಾಸದಲ್ಲಿದ್ದಾರೆ ನಾನು ತುಮಕೂರಿನ ಎಲ್ಲಾ ತಾಲೂಕುಗಳ ಪ್ರವಾಸ ಮಾಡುವ ಅನಿಲ್ ಕುಮಾರ್ ಪರ ಮತಯಾಚನೆ ಮಾಡುವ ಜವಾಬ್ದಾರಿ ನನ್ನದಾಗಿದೆ ಎಂದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರನ್ನು ಪ್ರಧಾನಿ ಮೋದಿಯವರೇ ಅತ್ಯಂತ ಗೌರವದಿಂದ ಕಾಣುತ್ತಾರೆ, ದೇವೇಗೌಡರಿಂದ ಉಪಕಾರ ಪಡೆದ ಕೆ.ಎನ್.ರಾಜಣ್ಣ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಅತ್ಯಂತ ನೋವಿನ ಸಂಗತಿ, ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಡಿಸಿಸಿ ಬ್ಯಾಂಕ್ ನಿಂದ ಸಾಲ ಕೊಡಿಸುವುದಾಗಿ ಗಿಮಿಕ್ ಮಾಡುತ್ತಿದ್ದಾರೆ, ಸಾಲವನ್ನು ರಾಜಣ್ಣ ಮನೆಯಿಂದ ತಂದು ಕೊಡುತ್ತಾರಾ ಎಂಬುದನ್ನು ಜಿಲ್ಲೆಯ ಜನತೆ ಅರಿಯಬೇಕು ಎಂದರು.
ಅಭ್ಯರ್ಥಿ ಅನಿಲ್ ಕುಮಾರ್ ಮಾತನಾಡಿ, ಮಾಜಿ ಪ್ರಧಾನಿಗಳಾದ ದೇವೇಗೌಡರು ನನ್ನ ಪರವಾಗಿ ಮತಯಾಚನೆ ಮಾಡುತ್ತಿರುವುದು ನನ್ನ ಸುಕೃತ ಎಂದು ಭಾವಿಸಿದ್ದೇನೆ, ಜಿಲ್ಲೆಯ ಮತದಾರ ಬಂಧುಗಳು ನನಗೆ ಮತ ನೀಡಿ ಗೆಲ್ಲಿಸಿ ಸೇವೆ ಮಾಡಲು ಅವಕಾಶ ಕಲ್ಪಸಿಕೊಡಬೇಕೆಂದು ಮನವಿ ಮಾಡಿದರು.
ಶಾಸಕ ಗೌರಿಶಂಕರ್ ಮಾತನಾಡಿ, ಸದ್ಯ ಎದುರಾಗಿರುವ ವಿಧಾನಪರಿಷತ್ ಚುನಾವಣೆ ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ, ಮಾಜಿ ಪ್ರಧಾನಿ ಸೋಲಿಸಿದವ ನಾನು ಎನ್ನುವವರಿಗೆ ಜಿಲ್ಲೆಯ ಮತದಾರ ತಕ್ಕ ಉತ್ತರ ನೀಡಲಿದ್ದಾನೆ, ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಅನಿಲ್ ಕುಮಾರ್ ಜಯ ಸಾಧಿಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಗಣ್ಯರು ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಡಾ.ಬಾಬಾ ಸಾಹೇಬ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಜಿಲ್ಲಾಧ್ಯಕ್ಷ ಆಂಜನಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಸ್ವಾಮಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಪ್ರುಲ್ಲಾಖಾನ್, ಸಿ.ಎಸ್.ಪುರ ಮೂರ್ತಿ, ಎ.ಬಿ.ಜಗದೀಶ್, ರಾಜೀವ್ ಕೃಷ್ಣಪ್ಪ, ಗ್ರಾಪಂ ಅಧ್ಯಕ್ಷೆ ಬೇಬಿ ತ್ಯಾಗರಾಜ್, ಎಪಿಎಂಸಿ ಸದಸ್ಯ ವಿಜಯೇಂದ್ರ, ಎಂ.ಎನ್.ಚಂದ್ರೇಗೌಡ, ಬೆಳ್ಳಿಲೋಕೇಶ್, ಲೀಲಾವತಿ ಗಿಡ್ಡಯ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!