ತುರುವೇಕೆರೆ: ಇತಿಹಾಸ ಪ್ರಸಿದ್ಧ ಶ್ರೀ ಬೇಟೆರಾಯಸ್ವಾಮಿ ದೇವಾಲಯದ ಆಗಮಿಕರಾಗಿದ್ದ ಶ್ರೀ ಟಿ.ಬಿ.ಶ್ರೀನಿವಾಸ್ ಪ್ರಸಾದ್ ಅವರು ವಿಧಿವಶರಾಗಿದ್ದಾರೆ. ಅವರು ದೇವಾಲಯದ ಆಗಮಿಕರಾಗಿ ನಾಡಿನ ಮೂಲೆ ಮೂಲೆಗಳಲ್ಲಿರುವ ಭಕ್ತಾದಿಗಳಿಗೆ ಚಿರಪರಿಚಿತರು. ರಾಷ್ಟ್ರೀಯ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ಅವರು ಎಪ್ಪತ್ತರ ದಶಕದಲ್ಲಿ ತಾಲ್ಲೂಕಿನ ಪತ್ರಿಕೋದ್ಯಮದಲ್ಲಿ ಒಂದಿಷ್ಟು ಕ್ರಾಂತಿಯನ್ನೇ ಮಾಡಿದ್ದರು ಎಂಬುದು ಬಹುತೇಕರಿಗೆ ಗೊತ್ತಿಲ್ಲ.
ಸ್ವಾತಂತ್ರ್ಯ ನಂತರ ಭಾರತದಲ್ಲಿ ಭಾರತೀಯ ಭಾಷಾ ಪತ್ರಿಕೋದ್ಯಮ ಕ್ಷಿಪ್ರ ಹಾಗೂ ಮಹತ್ವದ ಬೆಳವಣಿಗೆ ಕಂಡಿತು. ಇಂತಹ ಆಶಾದಾಯಕ ಪರಿಸ್ಥಿತಿಯಲ್ಲಿಯೂ ಸಹ ತಾಲ್ಲೂಕಿನಿಂದ ಯಾವುದೇ ಪತ್ರಿಕೆ ಪ್ರಕಟಣೆಗೊಂಡ ಉಲ್ಲೇಖ ಎಲ್ಲೂ ಕಂಡುಬರುವುದಿಲ್ಲ. ಹಿರಿಯ ಪತ್ರಕರ್ತರಾದಿಯಾಗಿ ಯಾರಿಗೂ ಅಂತಹ ಪತ್ರಿಕೆಯೊಂದು ಅಸ್ತಿತ್ವದಲ್ಲಿದ್ದ ಬಗ್ಗೆ ಯವುದೇ ಮಾಹಿತಿಯಿಲ್ಲ. ತಾಳಕೆರೆ ಸುಬ್ರಹ್ಮಣ್ಯಂರಂತಹ ಘಟಾನುಘಟಿಗಳು ಹುಟ್ಟಿದ ಈ ತಾಲ್ಲೂಕಿನಲ್ಲಿ, ಸ್ಯಾತಂತ್ಯ್ರಕ್ಕಾಗಿ ಮಹತ್ವದ ಕೊಡುಗೆ ನೀಡಿದ, ಪತ್ರಿಕೋದ್ಯಮದ ಅಪಾರ ಹಿನ್ನಲೆ ಮತ್ತು ಅನುಭವವಿದ್ದ ಮಾ.ನ.ಚೌಡಪ್ಪನವರ ಗಾಢ ಪ್ರಭಾವವಿದ್ದ ಈ ತಾಲ್ಲೂಕಿನಲ್ಲಿ ಯಾವುದೇ ಪತ್ರಿಕೆ ಪ್ರಾರಂಭವಾದ ಉಲ್ಲೇಖವಿಲ್ಲದಿರುವುದು ನಿಜಕ್ಕೂ ಆಶ್ಚರ್ಯವೆನಿಸುತ್ತದೆ.
ಸ್ವಾತಂತ್ರ್ಯ ನಂತರ ಸುಮಾರು ಮೂರು ದಶಕಗಳ ಕಾಲ ತಾಲ್ಲೂಕಿನಲ್ಲಿ ಯಾರೊಬ್ಬರೂ ಪತ್ರಿಕೆ ಹೊರತರಲು ಪ್ರಯತ್ನ ನಡೆಸಿದ ಉಲ್ಲೇಖಗಳಿಲ್ಲ. ಬೇರೆ ಎಲ್ಲೆಡೆ ಪತ್ರಿಕೋದ್ಯಮ ಹೊಸ ಹೊಸ ಆಯಾಮಗಳನ್ನು ಕಂಡುಕೊಳ್ಳುತ್ತಿದ್ದ ಸಮಯದಲ್ಲಿ, ಸಾವಿರಾರು ಸಣ್ಣ ಪತ್ರಿಕೆಗಳು, ಮಧ್ಯಮ ಗಾತ್ರದ ಪತ್ರಿಕೆಗಳು ಬೆಳಕು ಕಾಣುತ್ತಿದ್ದ ಸಂದರ್ಭದಲ್ಲಿ ತುರುವೇಕೆರೆ ತಾಲ್ಲೂಕು ಮಾತ್ರ ಆ ಎಲ್ಲಾ ಬೆಳವಣಿಗೆಗಳಿಂದ ದೂರ ನಿಂತಿದ್ದು ಅಚ್ಚರಿಯೇ ಎನಿಸುತ್ತದೆ.
1979ರಲ್ಲಿ ಪ್ರಕಟಣೆ ಪ್ರಾರಂಭಿಸಿದ ‘ವಿದ್ಯಾತೀರ್ಥ’ ತಾಲ್ಲೂಕಿನ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ನನ್ನ ಅನಿಸಿಕೆ. ಟಿ.ಬಿ.ಶ್ರೀನಿವಾಸ್ ಪ್ರಸಾದ್ ಪ್ರಕಾಶಕರಾಗಿ, ಸಂಪಾದಕರಾಗಿ ಈ ಪತ್ರಿಕೆಯನ್ನು ಹೊರತಂದರು. ಈ ಪತ್ರಿಕೆ ಮೊದಲು ತುಮಕೂರಿನ ಜನರಲ್ ಏಜೆನ್ಸಿಯಲ್ಲಿ, ನಂತರ ಕೃಷ್ಣಾ ಪವರ್ ಪ್ರೆಸ್ ನಲ್ಲಿ ಮುದ್ರಣಗೊಳ್ಳುತ್ತಿತ್ತು. ವಾರಪತ್ರಿಕೆಯಾಗಿ ಹೊರಬಂದ ವಿದ್ಯಾತೀರ್ಥ ತಾಲ್ಲೂಕಿನಲ್ಲಿ ಸಣ್ಣದೊಂದು ಸಂಚಲನವನ್ನು ಮೂಡಿಸಿದ್ದು ವಿದ್ಯಾರ್ಥಿಯಾಗಿದ್ದ ನನಗಿನ್ನೂ ನೆನಪಿದೆ. ದುರದೃಷ್ಟವಶಾತ್ ಈ ಪತ್ರಿಕೆ ಹೆಚ್ಚು ಕಾಲ ಬದುಕಲಿಲ್ಲ. ಸಂಪಾದಕ ಶ್ರೀನಿವಾಸ ಪ್ರಸಾದ್ ಆ ಕ್ಲಿಷ್ಟಕರ ಪರಿಸ್ಥಿತಿಯ ನೆನಪುಗಳನ್ನು ಹಿಂದೊಮ್ಮೆ ನನ್ನಲ್ಲಿ ಹೇಳಿಕೊಂಡಿದ್ದರು. ಪತ್ರಿಕೆ ನಿಲ್ಲಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿಯ ಬಗ್ಗೆ ಅವರು ವಿಷಾಧ ವ್ಯಕ್ತಪಡಿಸಿದ್ದರು.
ಅವರ ಪ್ರಕಾರ ಪತ್ರಿಕೆ ನಿಂತದ್ದು ಹಣಕಾಸಿನ ಅಡಚಣೆಯಿಂದ ಅಲ್ಲ, ರಾಜಕೀಯದ ಒತ್ತಡಗಳಿಂದ! ಪ್ರಕಾಶಕನೂ, ಸಂಪಾದಕನೂ ಒಬ್ಬನೇ ಆಗಿರುವ ಸಣ್ಣ ಪತ್ರಿಕೆಗಳು ಸಾಮಾನ್ಯವಾಗಿ ಎದುರಿಸುವ ಅಪಾಯ ಇದೇ! ರಾಜಕೀಯ ಹಿತಾಸಕ್ತಿಗಳಿಗಾಗಿ ಪತ್ರಿಕೆಯೊಂದು ಬಲಿಯಾದದ್ದು ತೀರಾ ದುರದೃಷ್ಟದ ಸಂಗತಿ, ಅವರಿಗೆ ಸದ್ಗತಿ ಸಿಗಲಿ.
ಆಗಮಿಕ ಟಿ.ಬಿ.ಶ್ರೀನಿವಾಸ್ ಪ್ರಸಾದ್ ಇನ್ನಿಲ್ಲ
Get real time updates directly on you device, subscribe now.
Prev Post
Next Post
Comments are closed.