ತುಮಕೂರು: ಜಿಲ್ಲೆಯ ವಿವಿಧ ಠಾಣೆಗಳಲ್ಲಿ ನಮೂದಾಗಿದ್ದ 473 ಕಳವು ಪ್ರಕರಣ ಪತ್ತೆ ಹಚ್ಚಿ, 9.5 ಕೋಟಿ ಮೌಲ್ಯದ ಕಳವು ಮಾಲುಗಳನ್ನು ವಾರಸುದಾರರಿಗೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ವಿತರಣೆ ಮಾಡಿದರು.
ಸ್ವತ್ತು ವಿತರಿಸಿ ಮಾತನಾಡಿದ ಐಜಿಪಿ ಚಂದ್ರಶೇಖರ್, ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳು ಕೆಲಸ ಮಾಡುತ್ತಿರುವುದರಿಂದ ಹಲವು ಪ್ರಕರಣ ಬೇಧಿಸಿದ್ದಾರೆ, ಎಸ್ಪಿ ರಾಹುಲ್ ನೇತೃತ್ವದಲ್ಲಿ ಉತ್ತಮ ಬಾಂಧವ್ಯವನ್ನು ಅಧಿಕಾರಿಗಳು, ಸಿಬ್ಬಂದಿ ಹೊಂದಿದ್ದಾರೆ ಎಂದರು.
ಕಳ್ಳತನ ಎಷ್ಟೇ ಆದರೂ ಅದನ್ನು ಬೇಧಿಸಲು ಪೊಲೀಸರು ಸಮರ್ಥರಿದ್ದಾರೆ, ಅದಕ್ಕಾಗಿ ಈ ರೀತಿ ಸ್ವತ್ತು ಪ್ರದರ್ಶನ ಮಾಡುವ ಮೂಲಕ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ, ಕಳ್ಳತನದಲ್ಲಿ ಕಳೆದುಕೊಂಡ ವಸ್ತುವಿನ ಬಾಂಧವ್ಯ ಮರಳಿ ನೀಡುತ್ತಿರುವ ಸಂತೋಷವಿದೆ ಎಂದರು.
ಕೋವಿಡ್, ಲಾಕ್ ಡೌನ್ ನಂತಹ ಸಂದರ್ಭದಲ್ಲಿ ಗುಜರಾತ್, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶದ ಕೆಲವೆಡೆ ಕ್ಯಾಂಪ್ ಮಾಡಿ ಕಳ್ಳತನ ಪ್ರಕರಣ ಪತ್ತೆ ಹಚ್ಚಲು ಶ್ರಮಿಸಿದ್ದಾರೆ, ಪೊಲೀಸ್ ಸಿಬ್ಬಂದಿ ಇಚ್ಛಾಶಕ್ತಿಯಿಂದ ಅಪರಾಧಿಗಳ ಪತ್ತೆಗೆ ಕಾರಣವಾಗಿದೆ ಎಂದರು.
ಜಿಲ್ಲೆಯಲ್ಲಿ ಇದ್ದ ಸರಗಳ್ಳತನ ಪ್ರಕರಣವನ್ನು ಪೊಲೀಸರ ಚಾಣಾಕ್ಷತೆಯಿಂದ ಬೇಧಿಸಲಾಗಿದೆ, ತರಬೇತಿಯಲ್ಲಿರುವ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಟಿ.ಮೂರ್ತಿ, ಪಿ.ಮೂರ್ತಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಇವರ ಶ್ರಮದಿಂದ ದೊಡ್ಡ ಸರಗಳ್ಳತನ ಮಾಡುವ ಗ್ಯಾಂಗ್ ಬಂಧಿಸಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮ ಯಶಸ್ವಿಗೊಳಲು ಕಾರಣರಾದ ಪೊಲೀಸ್ ಕಾನ್‌ಸ್ಟೇಬಲ್ ಮತ್ತು ಅಧಿಕಾರಿಗಳು, ಅಪರಾಧ ಪ್ರಕರಣಗಳ ಪತ್ತೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದ ಅವರು, ನಗರದಲ್ಲಿ ಸರಗಳ್ಳತನ ಗ್ಯಾಂಗ್ ಬಂಧಿಸಿದ್ದಾರೆ ಎಂದು ಹೇಳಿದರು.
ತುಮಕೂರು ಪೊಲೀಸರಿಗೆ ಯಾವ ರಾಜ್ಯ, ಜಿಲ್ಲೆಯ ಗಡಿ ಇಲ್ಲ, ಮಾಹಿತಿ ಸಿಕ್ಕಿದರೆ ಅಪರಾಧ ಪ್ರಕರಣ ಪತ್ತೆ ಹಚ್ಚಲು ಹೊರಡುವಂತಿದ್ದಾರೆ, ಕುಖ್ಯಾತ ಸ್ಥಳಗಳಲ್ಲಿ ಅಪರಾಧಿಗಳ ಮಧ್ಯೆ ನಮ್ಮ ಪ್ರಕರಣಗಳಲ್ಲಿ ಬೇಕಾಗಿರುವವರನ್ನು ಬಂಧಿಸುವ ಧೈರ್ಯ ತೋರಿರುವುದಕ್ಕೆ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.
ನಗರಕ್ಕೆ ಬರುತ್ತಿರುವ ಗಾಂಜಾ ಪೂರೈಕೆದಾರರ ಮೇಲೆ ಶೀಘ್ರ ದಾಳಿ ಮಾಡಿ ಅವರ ಆಸ್ತಿ ಜಪ್ತಿ ಮಾಡುವ ಮೂಲಕ ಸರ್ಜಿಕಲ್ ಸ್ಟ್ರೈಕ್ ಮಾಡುವುದಾಗಿ ಹೇಳಿದ ಅವರು, ಪೊಲೀಸರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು.
ಈ ವೇಳೆ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಪೊಲೀಸರ ಕಠಿಣ ಶ್ರಮದಿಂದ ಕಳವು ಪ್ರಕರಣ ಪತ್ತೆ ಹಚ್ಚಲಾಗಿದೆ, ಲಾಕ್ ಡೌನ್ ಸಮಯದಲ್ಲಿಯೂ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಿ ಕಳವು ಪ್ರಕರಣ ಪತ್ತೆ ಹಚ್ಚಿದ್ದಾರೆ ಎಂದು ಪ್ರಶಂಸಿಸಿದರು.
ಎಎಸ್ಪಿ ಟಿ.ಜೆ.ಉದೇಶ್, ಡಿವೈಎಸ್ಪಿಗಳಾದ ಶ್ರೀನಿವಾಸ್, ರಮೇಶ್, ರಾಮಕೃಷ್ಣಯ್ಯ, ಗೋವಿಂದಯ್ಯ, ಕುಮಾರಪ್ಪ ಸೇರಿದಂತೆ ಸಬ್ ಇನ್‌ಸ್ಪೆಕ್ಟರ್ ಮತ್ತು ಸರ್ಕಲ್ ಇನ್ ಸ್ಪೆಕ್ಟರ್ ಗಳು ಉಪಸ್ಥಿತರಿದ್ದರು, ಅಪರಾಧ ಪತ್ತೆಯಲ್ಲಿ ಅತ್ಯುತ್ತಮ ಸಾಧನ ತೋರಿದ ತಂಡಗಳಿಗೆ ಐಜಿಪಿ ಚಂದ್ರಶೇಖರ್ ಪ್ರಸಂಶನ ಪತ್ರ ವಿತರಿಸಿದರು.
2020-21ನೇ ಸಾಲಿನಲ್ಲಿ ದಾಖಲಾಗಿದ್ದ 507 ಪ್ರಕರಣಗಳಲ್ಲಿ 473 ಪ್ರಕರಣದಲ್ಲಿನ 11 ಕೆ.ಜಿ.900 ಗ್ರಾಂ ಚಿನ್ನ, 17ಕೆ.ಜಿ ಬೆಳ್ಳಿ, 147 ದ್ವಿಚಕ್ರವಾಹನ, 28 ಇತರೆ ವಾಹನ, 50 ಮೊಬೈಲ್, 2 ಕೋಟಿ 91 ಲಕ್ಷ ನಗದನ್ನು ಒಟ್ಟು ಪ್ರಕರಣಗಳಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, ವಾರಸುದಾರರಿಗೆ ಹಿಂದುರಿಗಿಸಿದ್ದಾರೆ.
Comments are closed.