ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ

ಅಧಿಕಾರಿಗಳಿಂದ ಬ್ರಹ್ಮಾಂಡ ಭ್ರಷ್ಟಚಾರ ಆರೋಪ

233

Get real time updates directly on you device, subscribe now.

ತುಮಕೂರು: ಇಲ್ಲಿನ ಹೇಮಾವತಿ ನಾಲಾ ವಲಯದ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ.
ನಗರದ ಕುಣಿಗಲ್‌ ರಸ್ತೆಯಲ್ಲಿರುವ ಹೇಮಾವತಿ ನಾಲಾ ಕಚೇರಿ ಆವರಣದಲ್ಲಿರುವ ವಿಶೇಷ ಭೂಸ್ವಾಧೀನಾಧಿಕಾರಿ ಕವಿತಾ ಅವರ ಕಚೇರಿ ಮೇಲೆ ಎಸಿಬಿ ಕೇಂದ್ರ ವಲಯ ಎಸ್ಪಿ ಕಲಾಕೃಷ್ಣಸ್ವಾಮಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿಯವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಗಳಾದ ವೀರೇಂದ್ರ, ಎಸ್‌.ವಿಜಯಲಕ್ಷ್ಮಿ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದು, ದಾಖಲಾತಿಗಳ ತಪಾಸಣೆ ನಡೆಸಿದರು.
ಹೇಮಾವತಿ ನಾಲಾ ವಲಯದಲ್ಲಿ ಸ್ವಾಧೀನ ಪಡಿಸಿಕೊಂಡ ರೈತರ ಜಮೀನುಗಳಿಗೆ ಸಕಾಲಕ್ಕೆ ಪರಿಹಾರ ಕೊಡದೆ ವಿನಾ ಕಾರಣ ವಿಳಂಬ ಮಾಡಿರುವುದು, ಹಿರಿತನ ಪರಿಗಣಿಸದಿರುವುದು, ಹಣ ಕೊಟ್ಟವರಿಗೆ ಮತ್ತು ಶಿಫಾರಸ್ಸು ಮಾಡಿಸಿದವರಿಗೆ ಪರಿಹಾರ ವಿತರಣೆ ಮಾಡುವ ಮೂಲಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ ಹಲವು ದಾಖಲಾತಿಗಳ ಪರಿಶೀಲನೆ ನಡೆಸಿದ ಎಸಿಬಿ ಅಧಿಕಾರಿಗಳು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ರೈತರಿಗೆ ಪರಿಹಾರ ನೀಡುವಲ್ಲಿ ಮೀನಾಮೇಷ ಎಣಿಸುತ್ತಾ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿರುವ ಭೂಸ್ವಾಧೀನಾಧಿಕಾರಿಗಳ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿರುವುದು ಸ್ವಾಗತಾರ್ಹ ಎಂದು ರೈತ ಮುಖಂಡ ಆನಂದ್‌ ಪಟೇಲ್‌ ಹೇಳಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲೇಬೇಕು ಎಂದು ಒತ್ತಾಯಿಸಿದ್ದಾರೆ.
ರೈತರ ಭೂಮಿಯನ್ನು ನೀರಾವರಿ ಯೋಜನೆಗಾಗಿ ವಶಪಡಿಸಿಕೊಂಡು 10-12 ವರ್ಷವಾದರೂ ಪರಿಹಾರ ಕೊಟ್ಟಿಲ್ಲ, ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಲು ಕೇವಲ ನೋಟೀಸ್‌ ಕೊಟ್ಟಿರುವುದನ್ನು ಹೊರತುಪಡಿಸಿದರೆ ಅವಾರ್ಡ್‌ ವರೆಗೂ ಕಾಯದೆ ಗುತ್ತಿಗೆದಾರರಿಗೆ ಜಾಗವನ್ನು ಕೆಲಸ ಮಾಡಲು ಹಸ್ತಾಂತರ ಮಾಡಿದ್ದಾರೆ.
ನೀರಾವರಿ ಇಲಾಖೆಯಿಂದ ಹಣವನ್ನು ಗುತ್ತಿಗೆದಾರರಿಗೆ ಹಣ ಕೊಡುತ್ತಾರೆ, ಆದರೆ ಭೂಮಿ ಕಳೆದುಕೊಂಡ ರೈತನಿಗೆ ಪರಿಹಾರ ಕೊಡಲು ಮುಂದಾಗುತ್ತಿಲ್ಲ, ಭೂಸ್ವಾಧೀನಾಧಿಕಾರಿ ಕೇವಲ 3-6 ತಿಂಗಳ ಇದ್ದು, ಅಲ್ಲಿಂದ ಬೇರೆಡೆ ವರ್ಗಾವಣೆಗೊಳ್ಳುತ್ತಾರೆ. ಹೀಗಾಗಿ ರೈತರಿಗೆ ತೀವ್ರ ಸಮಸ್ಯೆ ಉಂಟಾಗಿದೆ, ಈ ಬಗ್ಗೆ ರೈತ ಸಂಘಟನೆಗಳು ಹೋರಾಟ ಮಾಡಿ ಸರ್ಕಾರದ ಗಮನಕ್ಕೆ ತಂದಾಗ ಅಲ್ಪಸ್ವಲ್ಪ ಹಣ ಬಿಡುಗಡೆ ಮಾಡಿದರು, ಆ ಹಣದಲ್ಲಿ ರೈತರಿಂದ ಶೇ.10 ರಷ್ಟು ಕಮೀಷನ್‌ ಪಡೆದು ಪರಿಹಾರ ಹಣ ಬಿಡುಗಡೆ ಮಾಡಿದ್ದಾರೆ, ಈ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಮುಂದೆ ರೈತರ ಪರಿಹಾರಕ್ಕಾಗಿ ಹಲವು ಬಾರಿ ಪ್ರತಿಭಟನೆ ಮಾಡಿದ್ದೇವೆ, ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಬಿಲ್‌ ಕೊಡಲು ಹಣ ಇದೆ, ಆದರೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಲು ಇವರಿಗೆ ಹಣ ಇಲ್ಲ, ಈ ಅಧಿಕಾರಿಗಳ ಧೋರಣೆಯಿಂದಾಗಿ ರೈತರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ ಎಂದರು.
ಎಸಿಬಿ ಅಧಿಕಾರಿಗಳು ಕೂಲಂಕುಷವಾಗಿ ತನಿಖೆ ನಡೆಸಿ ಈ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಬಯಲಿಗೆಳೆದು ರೈತರಿಗೆ ನ್ಯಾಯ ಒದಗಿಸಿಕೊಡುವ ಜತೆಗೆ ಶೀಘ್ರವಾಗಿ ಪರಿಹಾರ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

Get real time updates directly on you device, subscribe now.

Comments are closed.

error: Content is protected !!