ಸುತ್ತೋಲೆ ವಾಪಸ್ ಗೆ ಖಾಸಗಿ ಶಾಲೆಗಳ ಒತ್ತಾಯ

233

Get real time updates directly on you device, subscribe now.

ತುಮಕೂರು: ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ವರ್ಗಾವಣೆ ಪತ್ರವನ್ನು ಆಡಳಿತ ಮಂಡಳಿಯ ಅನುಮತಿ ಇಲ್ಲದೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ನೀಡಬಹುದು ಎಂಬ ಸರಕಾರದ ಸುತ್ತೊಲೆಯನ್ನು ಕೂಡಲೇ ಹಿಂಪಡೆಯ ಬೇಕು, ಇಲ್ಲದಿದ್ದಲ್ಲಿ ಶಿಕ್ಷಣ ಸಚಿವರ ಮನೆಯ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ರೂಪ್ಸಾ ಅಧ್ಯಕ್ಷ ಹಾಲೇನೂರು ಲೇಪಾಕ್ಷ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಕಾರ 03-05-2021 ರಂದು ಹೊರಡಿಸಿರುವ ಸುತ್ತೋಲೆ ನಿಜಕ್ಕೂ ಖಾಸಗಿ ಶಾಲೆಗಳ ಹಕ್ಕುಗಳನ್ನು ಕಸಿಯುವ ಹುನ್ನಾರವಾಗಿದೆ, ಸುಪ್ರಿಂಕೋರ್ಟ್‌ ಮತ್ತು ರಾಜ್ಯ ಹೈಕೋರ್ಟ್‌ ಖಾಸಗಿ ಶಾಲೆಗಳಲ್ಲಿ ಮಕ್ಕಳ ಶುಲ್ಕ ಕಟ್ಟಿದ್ದರೆ ಆಡಳಿತ ಮಂಡಳಿ ಪೋಷಕರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂದು ಆದೇಶ ನೀಡಿದ್ದರು, ಖಾಸಗಿ ಶಾಲೆಗಳ ಆಡಳಿತ ಮಂಡಳಿ ಇದುವರೆಗೂ ಅಂತಹ ಕಾನೂನು ಕ್ರಮಕ್ಕೆ ಮುಂದಾಗಿಲ್ಲ,ಅಲ್ಲದೆ ಆರ್‌ಟಿಇ ಅಕ್ಟ್ 1983ರ ಕಲಂ 106/2 ಬಿಯನ್ನು ತಪ್ಪಾಗಿ ಗ್ರಹಿಸಿ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.
ಸರಕಾರ ಶಾಲಾ ಮಕ್ಕಳ ಟಿಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ಸುತ್ತೋಲೆ ಅವೈಜ್ಞಾನಿಕ, ನ್ಯಾಯಾಲಯಗಳ ಆದೇಶಗಳಿಗೆ ವಿರುದ್ಧವಾಗಿದೆ, ಸರಕಾರವೇ ಶೇ.15 ರಷ್ಟು ಶುಲ್ಕ ಕಡಿತ ಮಾಡಿ ಪಡೆಯುವಂತೆ ಆದೇಶ ನೀಡಿದೆ, ಪೋಷಕರು ಬಾಕಿ ಉಳಿಸಿಕೊಂಡಿರುವ ಶುಲ್ಕು ಪಾವತಿಸಿದರೆ ಅವರ ವರ್ಗಾವಣೆ ಪತ್ರ ನೀಡಲು ನಮ್ಮ ಅಭ್ಯಂತರವಿಲ್ಲ, ಆದ್ದರಿಂದ ಡಿಸೆಂಬರ್‌ 15 ರೊಳಗೆ ಸುತ್ತೊಲೆಯನ್ನು ಶಿಕ್ಷಣ ಇಲಾಖೆ ವಾಪಸ್‌ ಪಡೆಯದಿದ್ದರೆ ಶಿಕ್ಷಣ ಸಚಿವರ ಮನೆ ಮುಂದೆ ಎಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಸರಕಾರ ಖಾಸಗಿ ಶಾಲೆಗಳನ್ನು ಮಾನ್ಯತೆ ನವೀಕರಣ ಮತ್ತು ಉನ್ನತ್ತೀಕರಣದ ಹೆಸರಿನಲ್ಲಿ ಅನಗತ್ಯ ಕಿರುಕುಳ ನೀಡಲಾಗುತ್ತಿದೆ, ಕೇಂದ್ರ ಸರಕಾರ ಕೋವಿಡ್‌ ಹಿನ್ನೆಲೆಯಲ್ಲಿ ಸಿಬಿಎಸ್ಸಿ ಮತ್ತು ಐಸಿಎಸ್‌ಸಿ ಶಾಲೆಗಳಿಗೆ ಐದು ವರ್ಷಗಳಿಗೆ ಯಾವುದೇ ನಿಬಂಧನೆ ಇಲ್ಲದೆ ನವೀಕರಣಕ್ಕೆ ಅವಕಾಶ ನೀಡಿದೆ, ಇದೇ ಮಾನದಂಡವನ್ನು ರಾಜ್ಯ ಪಠ್ಯಕ್ರಮದ ಶಾಲೆಗಳಿಗೂ ವಿಸ್ತರಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ರೂಪ್ಸಾ ಅಧ್ಯಕ್ಷ ಲೇಪಾಕ್ಷ ತಿಳಿಸಿದರು.
ಸರಕಾರ 2019- 20 ಮತ್ತು 2020- 21 ನೇ ಸಾಲಿನ ಸುಮಾರು 750 ಕೋಟಿ ರೂ. ಆರ್‌ಟಿಇ ಹಣವನ್ನು ಖಾಸಗಿ ಶಾಲೆಗಳಿಗೆ ನೀಡಬೇಕಾಗಿದೆ, ತುಮಕೂರು ಜಿಲ್ಲೆಗೆ ಸುಮಾರು 15 ಕೋಟಿಯಷ್ಟು ಹಣ ಬಾಕಿ ಬರಬೇಕಾಗಿದೆ. ಸಾಲ ಮಾಡಿ ಶಿಕ್ಷಕರಿಗೆ ವೇತನ ನೀಡಬೇಕಾಗಿದೆ, ನವೀಕರಣಕ್ಕೆ ಫೈರ್‌ ಸೇಪ್ಟಿ ಮತ್ತಿತರ ಷರತ್ತುಗಳ ವಿಧಿಸಿರುವ ಪರಿಣಾಮ ಅರ್ಧದಷ್ಟು ನವೀಕರಣ ಬಾಕಿ ಇದೆ, ಹಾಗಾಗಿ ಸುಮಾರು 8-10 ಸಾವಿರ ಶಾಲೆಗಳು ಮಾನ್ಯತೆ ನವೀಕರಣ ಆಗದ ಸ್ಥಿತಿಯಲ್ಲಿವೆ, ಹಾಗಾಗಿ ಸರಕಾರ ಯಾವುದೇ ಷರತ್ತು ವಿಧಿಸದೆ ನವೀಕರಣ ಮತ್ತು ಉನ್ನತ್ತೀಕರಣ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂಬುದು ರೂಪ್ಸಾದ ಒತ್ತಾಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೂಪ್ಸಾ ತುಮಕೂರು ಜಿಲ್ಲಾ ಪದಾಧಿಕಾರಿಗಳಾದ ಶ್ರೀನಿವಾಸ್‌, ಪ್ರಕಾಶ್ ಕುಮಾರ್‌, ಪ್ರದೀಪಕುಮಾರ್‌, ಚಂದ್ರಶೇಖರ್‌, ನಯಾಜ್‌ ಅಹಮದ್‌, ಸ್ವಾಮಿ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!