ಹಣೆ ಬರಹ ಬರೆಯಲಿದ್ದಾನೆ ಮತದಾರ

ಎಂ ಎಲ್ ಸಿ ಚುನಾವಣೆ ಮತದಾನ- 338 ಮತ ಕೇಂದ್ರದಲ್ಲಿ ಸಕಲ ಸಿದ್ಧತೆ

341

Get real time updates directly on you device, subscribe now.

ತುಮಕೂರು: ತುಮಕೂರು ವಿಧಾನ ಪರಿಷತ್‌ ಚುನಾವಣೆಯ ಮತದಾನ ನಡೆಯಲಿದೆ, ಇದರ ಮಧ್ಯೆ ಪ್ರಮುಖ ಮೂರು ಪಕ್ಷಗಳಿಂದ ಸ್ಪರ್ಧೆಗೆ ಇಳಿದಿರುವ ಅಭ್ಯರ್ಥಿಗಳು ಕಳೆದ ಒಂದು ತಿಳಿಗಳಿಂದ ಭರ್ಜರಿ ಪ್ರಚಾರ ನಡೆಸಿದ್ದಾರೆ, ಸಭೆ, ಸಮಾರಂಭ ನಡೆಸಿ ಆರೋಪ ಪ್ರತ್ಯಾರೋಪದ ಸುರಿಮಳೆಯನ್ನೂ ಸುರಿಸಿದ್ದಾರೆ, ಮರದಾರರನ್ನು ಸೆಳೆಯಲು ಎಲ್ಲಾ ರೀತಿಯ ತಂತ್ರ ಪ್ರತಿತಂತ್ರವನ್ನು ಮಾಡಿ ಮುಗಿಸಿದ್ದಾರೆ, ಹಣದ ಹೊಳೆಯೂ ಹರಿದಿದ್ದು, ಮತದಾರ ತಮ್ಮ ಅಂತಿಮ ಮುದ್ರೆ ಒತ್ತಲಿದ್ದಾನೆ.
ಪ್ರಮುಖವಾಗಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿರುವ ಆರ್‌.ರಾಜೇಂದ್ರ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ, ತಮ್ಮ ತಂದೆ ಕೆ.ಎನ್‌.ರಾಜಣ್ಣ ಅವರು ಮಾಡಿರುವ ಜನಪರ ಹಾಗೂ ಸಾಮಾಜಿಕ ಕಾರ್ಯಗಳು ಮತ್ತು ಸ್ವತಃ ರಾಜೇಂದ್ರ ಅವರೇ ಕೋವಿಡ್‌ ಲಾಕ್ ಡೌನ್ ಟೈಂನಲ್ಲಿ ಆಹಾರ ಕಿಟ್‌, ಊಟ ವಿತರಣೆ ಜೊತೆಗೆ ರೈತರಿಂದ ತರಕಾರಿ ಖರೀದಿಸಿ ಬಡವರ ಸೇವೆ ಮಾಡಿದ್ದು ಈ ಚುನಾವಣೆಯಲ್ಲಿ ಪ್ಲಸ್‌ ಪಾಯಿಂಟ್‌ ಆಗಲಿದೆ. ಅಲ್ಲದೆ ಇಡೀ ಜಿಲ್ಲೆಯಲ್ಲಿ ಸಂಚರಿಸಿ ತಾವು ಗೆದ್ದರೆ ಮಾಡಬಹುದಾದ ಕಾರ್ಯಗಳ ಬಗ್ಗೆ ಮತದಾರರಿಗೆ ಮನಮುಟ್ಟುವಂತೆ ತಿಳಿಸಿದ್ದು, ಮತದಾರರು ಕೂಡ ಇವರ ಪರ ಒಲವು ಹೊಂದಿದ್ದಾರೆ ಎನ್ನಲಾಗಿದೆ.
ಇನ್ನು ಪ್ರಮುಖ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಪರಮೇಶ್ವರ್‌ ಸೇರಿದಂತೆ ಜಿಲ್ಲೆಯ ಎಲ್ಲಾ ನಾಯಕರು ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ರಾಜೇಂದ್ರ ಅವರ ಗೆಲುವಿಗೆ ಮತಯಾಚನೆ ಮಾಡಿದ್ದಾರೆ, ಜಿಲ್ಲೆಯ ನಾಯಕರಲ್ಲಿ ಇದ್ದ ಆಂತರಿಕ ಭಿನ್ನಮತವನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ರಾಜೇಂದ್ರ ಪರ ಕೆಲಸ ಮಾಡಿದ್ದಾರೆ.
ಇನ್ನು ಬಿಜೆಪಿಯಿಂದ ಲೋಕೇಶ್ ಗೌಡ ಅವರು ಸ್ಪರ್ಧೆ ಮಾಡಿದ್ದು, ಇವರಿಗೆ ಸಚಿವ ಮಾಧುಸ್ವಾಮಿ ಬಲವಿದೆ, ಅಲ್ಲದೆ ಎಲ್ಲಾ ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಿ ಮತಯಾಚನೆ ಮಾಡಿದ್ದಾರೆ, ಅಭಿವೃದ್ಧಿ ಮಂತ್ರ ಜಪಿಸುತ್ತಲೇ ಲೋಕೇಶ್ ಗೌಡ ಅವರು ಮತಯಾಚನೆ ಮಾಡಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಜೆಡಿಎಸ್‌ ಅಭ್ಯರ್ಥಿಯಾಗಿ ಅನಿಲ್ ಕುಮಾರ್‌ ಸ್ಪರ್ಧೆ ಮಾಡಿದ್ದು, ತಮ್ಮ ಸರ್ಕಾರಿ ನೌಕರಿ ತ್ಯಜಿಸಿ ಎಂ ಎಲ್ ಸಿ ಚುನಾವಣಾ ಅಖಾಡಕ್ಕೆ ಇಳಿದು ಸಾಕಷ್ಟು ಸುದ್ದಿಯಾಗಿದ್ದರು, ಅಲ್ಲದೆ ವರಿಷ್ಠ ದೇವೇಗೌಡ ಅವರು ಅನಿಲ್ ಕುಮಾರ್‌ ಅವರನ್ನು ಆಯ್ಕೆ ಮಾಡಿ ಕಣಕ್ಕಿಳಿಸಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಇಡೀ ಜಿಲ್ಲೆ ತುಂಬಾ ಪ್ರವಾಸ ಮಾಡಿ ತಮ್ಮ ಅಭ್ಯರ್ಥಿ ಗೆಲುವಿಗೆ ಮತಯಾಚನೆ ಮಾಡಿದ್ದಾರೆ, ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದವರಿಗೆ ಪಾಠ ಕಲಿಸಿ ಎನ್ನುವ ಮೂಲಕ ರಾಜಣ್ಣನ ವಿರುದ್ಧ ಸಮರ ಸಾರಿದ್ದರು, ದೇವೇಗೌಡರ ಆಶೀರ್ವಾದದಿಂದ ಕಣಕ್ಕಿಳಿದಿರುವ ಅನಿಲ್ ಕುಮಾರ್‌ ಕೂಡ ಗೆಲುವಿನ ನಿರೀಕ್ಷೆಯಲ್ಲೇ ಮೊದಲ ಚುನಾವಣೆ ಎದುರಿಸುತ್ತಿದ್ದಾರೆ.
ಇನ್ನು ಚುನಾವಣೆಯಲ್ಲಿ ಯಾರಿಗೆ ಯಾರು ಕೈ ಕೊಡುತ್ತಾರೋ, ಯಾರ ಪರವಾಗಿ ಮತ ಚಲಾಯಿಸುವಂತೆ ಪ್ರೇರೇಪಿಸುತ್ತಾರೋ, ಯಾವ ನಾಯಕರ ಮನಸ್ಸಲ್ಲಿ ಏನೇನಿದೆಯೋ ಗೊತ್ತಿಲ್ಲ, ಒಳ ಏಟು ಕೊಡುವ ಆಟವೂ ನಡೆಯದೇ ಇರದು, ಇದೆಲ್ಲದರ ಮಧ್ಯೆಮತದಾರನ ಮನದಲ್ಲಿ ಯಾರತ್ತ ಒಲವಿದೆಯೋ, ಯಾವ ಅಭ್ಯರ್ಥಿ ಪರ ಮತದಾರರ ತೀರ್ಪು ಇರಲಿದೆಯೋ ಗೊತ್ತಿಲ್ಲ, ಅಂತಿಮವಾಗಿ ಮತದಾರ ಇಂದು ತಮ್ಮ ಹಕ್ಕು ಚಲಾಯಿಸುವ ಮೂಲಕ ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾನೆ.

Get real time updates directly on you device, subscribe now.

Comments are closed.

error: Content is protected !!