ಮತ ಪೆಟ್ಟಿಗೆ ಸೇರಿದ ಅಭ್ಯರ್ಥಿಗಳ ಭವಿಷ್ಯ

ವಿಧಾನ ಪರಿಷತ್‌ ಚುನಾವಣೆ ಸುಸೂತ್ರ- ಶೇ.99.78ರಷ್ಟು ಮತದಾನ

278

Get real time updates directly on you device, subscribe now.

ತುಮಕೂರು: ವಿಧಾನ ಪರಿಷತ್‌ ಚುನಾವಣಾ ಜಾತ್ರೆ ಮುಗಿದಿದೆ, ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಅಭ್ಯರ್ಥಿಗಳ ಹಣ ಬರಹ ಬರೆದಿದ್ದಾರೆ, ಅಭ್ಯರ್ಥಿಗಳ ಭವಿಷ್ಯ ಈಗ ಮತ ಪೆಟ್ಟಿಗೆ ಸೇರಿದ್ದು, ಡಿ.14 ರಂದು ಭವಿಷ್ಯ ಹೊರ ಬೀಳಲಿದೆ.
ತುಮಕೂರು ನಗರ ಸೇರಿಂದತೆ ಜಿಲ್ಲೆಯ 338 ಮತ ಕೇಂದ್ರದಲ್ಲಿ ಸುಸೂತ್ರವಾಗಿ ಮತದಾನ ನಡೆದಿದೆ, ಎಲ್ಲಿಯೂ ಯಾವ ಅವಘಡ ನಡೆಯದಂತೆ ಚುನಾವಣೆ ನಡೆದು ಶೇ.99.78 ರಷ್ಟು ಮತದಾನವಾಗಿದೆ.
ತುಮಕೂರಿನ ಮಹಾನಗರ ಪಾಲಿಕೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಸಂಸದ ಜಿ.ಎಸ್‌.ಬಸವರಾಜು, ಶಾಸಕ ಜ್ಯೋತಿಗಣೇಶ್‌, ಮಹಾನಗರ ಪಾಲಿಕೆ ಮೇಯರ್‌ ಬಿ.ಜಿ.ಕೃಷ್ಣಪ್ಪ ಮತದಾನ ಮಾಡಿದರು. ಮಹಾನಗರ ಪಾಲಿಕೆ ಸದಸ್ಯರು ಸಾಲಾಗಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ಮತದಾನಕ್ಕೂ ಮುನ್ನಾ ತುಮಕೂರು ತಾಲ್ಲೂಕು ಗೂಳೂರು ಗ್ರಾಮ ಪಂಚಾಯ್ತಿ ಮತಗಟ್ಟೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌. ಪಾಟೀಲ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮತದಾನ ಪೂರ್ಣಗೊಂಡ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಕರ್ನಾಟಕ ವಿಧಾನ ಪರಿಷತ್ ಗೆ ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ.99.78 ರಷ್ಟು ಮತದಾನವಾಗಿದೆ, ಜಿಲ್ಲಾದ್ಯಂತ ಶಾಂತಿಯುತ ಮತದಾನವಾಗಿದ್ದು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಶೇ.99.39, ತಿಪಟೂರು- ಶೇ.99.77, ತುರುವೇಕೆರೆ- ಶೇ.99.76, ಕುಣಿಗಲ್‌- ಶೇ.99.62, ತುಮಕೂರು- ಶೇ.100, ಕೊರಟಗೆರೆ- ಶೇ.99.75, ಗುಬ್ಬಿ- ಶೇ.99.68, ಶಿರಾ- ಶೇ.100, ಪಾವಗಡ- ಶೇ.99.83, ಮಧುಗಿರಿ- ಶೇ.99.84 ಸೇರಿದಂತೆ ಒಟ್ಟಾರೆ ಶೇ.99.78 ರಷ್ಟು ಮತದಾನವಾಗಿದೆ ಎಂದರು.
ಜಿಲ್ಲೆಯ 338 ಮತದಾನ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ 8 ರಿಂದ 4 ಗಂಟೆಯವರೆಗೂ ನಡೆದ ಚುನಾವಣೆಯಲ್ಲಿ 2621 ಪುರುಷರು ಹಾಗೂ 2938 ಮಹಿಳೆಯರು ಸೇರಿದಂತೆ 5559 ಅರ್ಹ ಮತದಾರರಲ್ಲಿ 2610 ಪುರುಷರು (ಶೇ.99.58) ಹಾಗೂ 2937 ಮಹಿಳೆಯರು (ಶೇ.99.97) ಸೇರಿದಂತೆ 5547 ಮತದಾರರು ಮತದಾನ ಮಾಡಿದ್ದಾರೆ.
ಮತದಾನ ಮಾಡಿದ 5547 ಮತದಾರರ ಪೈಕಿ 8 ಪುರುಷರು ಹಾಗೂ 5 ಮಹಿಳೆಯರು ಸೇರಿದಂತೆ 13 ಮಂದಿ ವಿಕಲಚೇತನರು ಸೇರಿದ್ದಾರೆ.
ತಾಲ್ಲೂಕುವಾರು ಮತದಾನ ಮಾಡಿದ ವಿವರ ಇಂತಿದ್ದು, ಕಂಸಿನಲ್ಲಿ ಮತದಾನ ಮಾಡಿದ ಪುರುಷರು ಹಾಗೂ ಮಹಿಳೆಯರ ವಿವರ ನೀಡಲಾಗಿದೆ. ಚಿಕ್ಕನಾಯಕನಹಳ್ಳಿ- 492 (ಪುರುಷರು-238, ಮಹಿಳೆಯರು-254), ತಿಪಟೂರು- 437 (ಪು-208, ಮ-229), ತುರುವೇಕೆರೆ- 412 (ಪು-192, ಮ-220), ಕುಣಿಗಲ್‌- 522 (ಪು-245, ಮ-277), ತುಮಕೂರು- 786 (ಪು-379, ಮ-407), ಕೊರಟಗೆರೆ- 406 (ಪು-196, ಮ-210), ಗುಬ್ಬಿ- 622 (ಪು-297, ಮ-325), ಶಿರಾ- 658 (ಪು-302, ಮ-356), ಪಾವಗಡ- 577 (ಪು-257, ಮ-320), ಮಧುಗಿರಿ- 635 (ಪು-296, ಮ-339).
ಜಿಲ್ಲೆಯ ತುಮಕೂರು ಹಾಗೂ ಶಿರಾ ತಾಲ್ಲೂಕಿನಲ್ಲಿ ಶೇ.100 ರಷ್ಟು ಮತದಾನವಾಗಿದ್ದು, ಗುಬ್ಬಿ ತಾಲ್ಲೂಕು ಹೊರತುಪಡಿಸಿ ಉಳಿದೆಲ್ಲಾ ತಾಲ್ಲೂಕುಗಳಲ್ಲಿ ಶೇ.100 ರಷ್ಟು ಮಹಿಳಾ ಮತದಾರರು ಮತದಾನ ಮಾಡಿರುವುದು ವಿಶೇಷವಾಗಿದೆ.
ಪ್ರತಿ ಮತಗಟ್ಟೆಯಲ್ಲಿ ಮತದಾರರನ್ನು ಹಾಗೂ ಚುನಾವಣಾ ಸಿಬ್ಬಂದಿಯನ್ನು ಕೋವಿಡ್‌ ನಿಯಮಾವಳಿಯನ್ವಯ ಥರ್ಮಲ್‌ ಸ್ಕ್ಯಾನಿಂಗ್‌ ತಪಾಸಣೆಗೊಳಪಡಿಸಲು ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗಿತ್ತು. ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತ ಮತದಾನ ಪ್ರಕ್ರಿಯೆ ನಡೆಸುವ ನಿಟ್ಟಿನಲ್ಲಿ ಪ್ರತಿ ಮತದಾನ ಕೇಂದ್ರಗಳಿಗೂ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.
ವಿಧಾನ ಪರಿಷತ್‌ ಚುನಾವಣೆ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ಮತದಾನ ಕೇಂದ್ರಗಳಿಗೆ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿ, ಸೂಕ್ಷ್ಮ ಮತಗಟ್ಟೆ ವೀಕ್ಷಕರು, ಮತದಾರರನ್ನು ಗುರುತು ಹಚ್ಚುವ ಅಧಿಕಾರಿಗಳು ಸೇರಿದಂತೆ ಒಟ್ಟು 1200 ಅಧಿಕಾರಿ, ಸಿಬ್ಬಂದಿ ನೇಮಕ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!