ಸೇವಾ ಭದ್ರತೆ ಕಲ್ಪಿಸಲು ಅತಿಥಿ ಉಪನ್ಯಾಸಕರ ಒತ್ತಾಯ

355

Get real time updates directly on you device, subscribe now.

ತುಮಕೂರು: ಸೇವಾ ಭದ್ರತೆ ಸೇರಿದಂತೆ ಅತಿಥಿ ಉಪನ್ಯಾಸಕರ ವಿವಿಧ ಭರವಸೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ನಗರದ ಪದವಿ ಕಾಲೇಜಿನಲ್ಲಿ ತರಗತಿ ಬಹಿಷ್ಕರಿಸಿದ ಅತಿಥಿ ಉಪನ್ಯಾಸಕರು, ದಶಕಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಸರ್ಕಾರ ಇದುವರೆಗೆ ಯಾವುದೇ ಸೇವಾ ಭದ್ರತೆ ಒದಗಿಸಿಲ್ಲ, ಕಳೆದ ವರ್ಷದವರೆಗೂ ಒಂಭತ್ತು ತಿಂಗಳವರೆಗೆ ನೀಡುತ್ತಿದ್ದ ಸಂಬಳವನ್ನು ಮೂರು ತಿಂಗಳಿಗೊಮ್ಮೆ, ಕಾಂಟ್ರಾಕ್ಟ್ ರಿನೀವಲ್‌ ಮಾಡುವ ಮೂಲಕ ಅತಿಥಿ ಉಪನ್ಯಾಸಕರನ್ನು ಅತಂತ್ರಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಬಾರಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದಾಗಲೂ ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತದೆ ಹೊರತು ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸಿಲ್ಲ, ಅತಿಥಿ ಉಪನ್ಯಾಸಕರನ್ನು ಕಡೆಗಣಿಸುತ್ತಿದ್ದು, ರಾಜ್ಯದಲ್ಲಿರುವ ಎಲ್ಲಾ ಅತಿಥಿ ಉಪನ್ಯಾಸಕರ ಸಂಘಗಳು ಒಗ್ಗೂಡಿ ತರಗತಿ ಬಹಿಷ್ಕಾರಕ್ಕೆ ಕರೆ ನೀಡಿದ್ದು, ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವವರೆಗೆ ತರಗತಿಗೆ ಹಾಜರಾಗುವುದಿಲ್ಲ ಎಂದು ಅತಿಥಿ ಉಪನ್ಯಾಸಕ ಅಂಜನಮೂರ್ತಿ ತಿಳಿಸಿದರು.
ಸೇವಾ ಭದ್ರತೆ, ವೇತನ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿಲ್ಲ, ಸರ್ಕಾರ ಸರಿಯಾಗಿ ಸ್ಪಂದಿಸುವವರೆಗೆ ನಿರಂತರವಾಗಿ ಹೋರಾಟ ಮಾಡುವುದಾಗಿ ತಿಳಿಸಿದ ಅವರು, ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆಗೆ ಸ್ಪಂದಿಸದೇ ಹೋದರೇ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಳೆದ ವರ್ಷ 9 ತಿಂಗಳ ಅವಧಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡಿದ್ದ ಸರ್ಕಾರ ಈ ವರ್ಷದ ಅವಧಿಯಲ್ಲಿ ಬರೀ ತಿಂಗಳಿಗೆ ಮಾತ್ರ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡಿದ್ದು, ಯಾವುದೇ ಜೀವನ ಭದ್ರತೆ ಇಲ್ಲದೆ ಅತಿಥಿ ಉಪನ್ಯಾಸಕರು ಬದುಕುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ, ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಸಂಬಳ ನೀಡುವ ಮೂಲಕ ಅತಂತ್ರ ಪರಿಸ್ಥಿತಿ ನಿರ್ಮಾಣ ಮಾಡಿದ್ದು, ತಿಂಗಳಿಗೊಮ್ಮ ವೇತನ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವವರೆಗೆ ಹೋರಾಟ ಮುಂದುವರೆಯಲಿದ್ದು, ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸುವ ಕಡೆ ಸರ್ಕಾರ ಗಮನ ಹರಿಸಬೇಕು, ಅತಿಥಿ ಉಪನ್ಯಾಸಕರನ್ನು ಗುಲಾಮರಂತೆ ನೋಡುವುದನ್ನು ಬಿಟ್ಟು ಗೌರವಯುತವಾಗಿ ನಡೆಸಿಕೊಳ್ಳಬೇಕೆಂದು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಿ.ಕೆ.ಮಂಜುನಾಥ್‌, ಚೇತನ್‌, ಗೀತಾ, ಮಲ್ಲಿಕಾರ್ಜುನ್‌, ಅರುಣ್ ಕುಮಾರ್‌ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!