ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ: ಶೆಟ್ಟಿಗಾರ್

361

Get real time updates directly on you device, subscribe now.

ತುಮಕೂರು: ಸಂವಿಧಾನದಲ್ಲಿ ಉಲ್ಲೇಖವಾಗಿರುವ ಮಾನವ ಹಕ್ಕುಗಳನ್ನು ರಕ್ಷಿಸಬೇಕಾದುದು ಪ್ರತಿಯೊಬ್ಬ ನಾಗರಿಕನ ಹೊಣೆಯಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್‌ ತಿಳಿಸಿದರು.
ನಗರದ ವಿದ್ಯೋದಯ ಕಾನೂನು ಕಾಲೇಜಿನ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ವಿದ್ಯೋದಯ ಕಾನೂನು ಕಾಲೇಜು, ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ, ತುಮಕೂರು ಘಟಕ ಹಾಗೂ ನಚಿಕೇತ ಅಗ್ನಿ ಫೌಂಡೇಷನ್ ನ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಾನವ ಹಕ್ಕುಗಳ ಪರಿದಿಯು ವ್ಯಾಪಕವಾದ ಸ್ವರೂಪದ್ದಾಗಿದ್ದು, ಅದರಲ್ಲಿ ನಾಗರಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಹಕ್ಕುಗಳು ಒಳಗೊಂಡಿವೆ, 1993ರಲ್ಲಿ ಅನುಷ್ಠಾನಕ್ಕೆ ಬಂದ ಪೊಟೆಕ್ಷನ್‌ ಆ್ಯಕ್ಟ್ ಅನ್ವಯ ಜೀವನ, ಸಮಾನತೆ, ಸ್ವಾತಂತ್ರ್ಯ ಹಾಗೂ ಘನತೆಯ ಹಕ್ಕುಗಳನ್ನು ಕಲ್ಪಿಸಲಾಗಿದೆ. ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಪರರ ಹಕ್ಕುಗಳನ್ನು ಸಹ ಗೌರವಿಸುವ ಹಾಗೂ ರಕ್ಷಿಸುವ ಮಾನವೀಯತೆ ನಾವೆಲ್ಲಾ ರೂಢಿಸಿಕೊಳ್ಳಬೇಕು ಎಂದರು.
ಉಪ ವಿಭಾಗಾಧಿಕಾರಿ ವಿ.ಅಜಯ್‌ ಮಾತನಾಡಿ, ಮಾನವ ಹಕ್ಕುಗಳ ದಿನಾಚರಣೆಯು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ದಿನವೂ ಆಚರಣೆಯಲ್ಲಿರಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅವಧಿಯಲ್ಲಿದ್ದರೂ ಸಿ್ತ್ರೕಯರು ಅವರ ಸ್ವಾತಂತ್ರ್ಯ ಹಾಗೂ ತಮ್ಮ ಅಭಿವ್ಯಕ್ತಿಯನ್ನು ಪೂರ್ಣ ಪ್ರಮಾಣದಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದೇ ಇರುವ ಸ್ಥಿತಿಯಲ್ಲಿದ್ದಾರೆ. ಲಿಂಗ, ಜಾತಿ, ಧರ್ಮ, ವ್ಯಕ್ತಿತ್ವ ಸೇರಿದಂತೆ ಯಾವುದೇ ವಿಷಯಗಳ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ನೇರವಾಗಿ ಖಂಡಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಶೋಷಿತರು, ದಮನಿತ ಸಮುದಾಯ, ಅನಕ್ಷರಸ್ಥರಿಗೆ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮನವರಿಕೆ ಮಾಡಬೇಕು. ಮುಂದಿನ ದಿನಗಳಲ್ಲಿ ಅಸಮಾನತೆ, ಲೈಂಗಿಕ ಶೋಷಣೆಯಂತಹ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಮನೆ ಗೋಪಾಲಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಮ್ಮ ಜವಾಬ್ದಾರಿ ಅಧಿಕಾರ ಎಂದು ಭಾವಿಸಿ ದರ್ಪಿಸುವವರ ಸಂಖ್ಯೆ ಹೆಚ್ಚಾಗಿದ್ದು, ಅಂತಹವರಿಗೆ ಮಾನವ ಹಕ್ಕುಗಳ ಕುರಿತು ಶಿಕ್ಷಣ ನೀಡುವ ಕಾರ್ಯಗಳಾಗಬೇಕು. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದರಲ್ಲದೆ, ಜನಸಾಮಾನ್ಯರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಸಾಮಾಜಿಕ ಜವಾಬ್ದಾರಿ ವಕೀಲರ ಮೇಲಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಕೀಲನು ಸಂವಿಧಾನ ರಕ್ಷಿಸುವ ರಕ್ಷಕನಾಗಬೇಕು. ಅಂತಹ ಹಕ್ಕುಗಳಿಗೆ ಚ್ಯುತಿ ತರುವ ಯಾವುದೇ ಕೃತ್ಯ ಎಸಗಿದವರನ್ನು ವಿರೋಧಿಸಿ ನ್ಯಾಯ ಪಡೆದುಕೊಳ್ಳುವ ಅವಕಾಶ ಪ್ರತಿಯೊಬ್ಬರಿಗೂ ಕಲ್ಪಿಸಬೇಕು ಎಂದು ತಿಳಿಸಿದರು.
ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಜಿಲ್ಲಾಧ್ಯಕ್ಷ ಲೋಕೇಶ್‌ ಮಾತನಾಡಿ, ಪ್ರತಿಯೊಬ್ಬರನ್ನು ಮಾನವರಂತೆ ಕಾಣುವುದು ಹಾಗೂ ಗೌರವಿಸುವುದು ನಮ್ಮ ಸಂಸ್ಕೃತಿ, ನಮ್ಮ ಸಂಸ್ಕೃತಿ ಅರ್ಥ ಮಾಡಿಕೊಂಡರೆ ಸಂವಿಧಾನದ ಮಹತ್ವ ತಾನಾಗಿಯೇ ಅರ್ಥವಾಗುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಭ್ರಷ್ಟಾಚಾರ ಪ್ರೋತ್ಸಾಹಿಸುವ ಘಟನೆಗಳನ್ನು ಪ್ರಶ್ನಿಸುವ ಪ್ರವೃತ್ತಿ ಪ್ರಬುದ್ಧತೆ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಅವರವರ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದರು.
ನಂತರ ಕಾರ್ಯಕ್ರಮದಲ್ಲಿ ವಿದ್ಯೋದಯ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎ.ನಾರಾಯಣ ಸ್ವಾಮಿ ಅವರು ಮಾನವ ಹಕ್ಕುಗಳ ಮಹತ್ವ ಹಾಗೂ ಅದರ ಅನುಷ್ಠಾನ ಕುರಿತು ಉಪನ್ಯಾಸ ನೀಡಿದರು.
ಇದಕ್ಕೂ ಮುನ್ನ ಡಿಸೆಂಬರ್‌ 8ರಂದು ತಮಿಳುನಾಡಿನ ನೀಲಗಿರಿ ಜಿಲ್ಲೆ ಸಮೀಪ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಹಾಗೂ ಸಿಬ್ಬಂದಿಗಳಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.
ನಂತರ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಏರ್ಪಡಿಸಿದ್ದ ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶಮಾ ಸೈದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಶ್ರೀನಿವಾಸ್‌, ಶಿರಸ್ತೇದಾರ್‌ ನಟರಾಜು, ಕಾನೂನು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!