ಮಕ್ಕಳಿಗೆ ಮೊಟ್ಟೆ ಜೊತೆ ಮಾಂಸ ಕೊಡಿ

ಸರ್ಕಾರಕ್ಕೆ ಬಹುಜನ ಸಮಾಜ ಪಾರ್ಟಿ ಮುಖಂಡರ ಒತ್ತಾಯ

445

Get real time updates directly on you device, subscribe now.

ತುಮಕೂರು: ಸರಕಾರ ಒತ್ತಡಕ್ಕೆ ಮಣಿದು ಬಿಸಿಯೂಟದೊಂದಿಗೆ ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ಯೋಜನೆ ಕೈಬಿಡಬಾರದು, ಮೊಟ್ಟೆಯ ಜೊತೆಗೆ ವಾರಕ್ಕೆ ಎರಡು ದಿನ ಮಾಂಸವನ್ನು ನೀಡಬೇಕೆಂದು ಬಹುಜನ ಸಮಾಜ ಪಾರ್ಟಿಯ ರಾಜ್ಯ ಪ್ರಧಾನಕಾರ್ಯದರ್ಶಿ ಗುರುಮೂರ್ತಿ ಸರಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಅಂಬೇಡ್ಕರ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರಕಾರ ವಿಶ್ವಸಂಸ್ಥೆ ಯೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ದೇಶದಲ್ಲಿ ಅಪೌಷ್ಠಿಕತೆ ಹೋಗಲಾಡಿಸಲು ಅಪೌಷ್ಠಿಕತೆ ಇರುವ ಮಕ್ಕಳಿಗೆ ಮೊಟ್ಟೆ ನೀಡುವುದು ಕಡ್ಡಾಯವಾಗಿದೆ, ಆದರೆ ಕೆಲ ಮಠಾಧೀಶರು ಮತ್ತು ಮನುವಾದಿಗಳು ಬಡವರು, ದಲಿತರು, ಹಿಂದುಳಿದ ಸಮುದಾಯಕ್ಕೆ ಸೇರಿದ ಮಕ್ಕಳು ಪೌಷ್ಠಿಕವಾಗಿ ಇದ್ದರೆ ಓದು ಬರಹ ಕಲಿತು, ನಮಗೆ ಪೈಪೋಟಿ ನೀಡುತ್ತಾರೆ ಎಂಬ ಭಯದಿಂದ ಮಕ್ಕಳಿಗೆ ಮೊಟ್ಟೆ ಕೊಡುವುದನ್ನು ನಿಲ್ಲಿಸುವಂತೆ ಸರಕಾರದ ಮೇಲೆ ಒತ್ತಡ ತರುತ್ತಿದ್ದಾರೆ, ಇದು ಖಂಡನೀಯ, ಒಂದು ವೇಳೆ ಸರಕಾರ ಬಾಹ್ಯ ಒತ್ತಡಕ್ಕೆ ಮಣಿದು ಮೊಟ್ಟೆ ಕೊಡುವುದನ್ನು ನಿಲ್ಲಿಸಿದರೆ ಬಿಎಸ್‌ಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದರು.
ಕೊರೊನದಿಂದ ಕಳೆದ ಎರಡು ವರ್ಷಗಳಿಂದ ಸರಿಯಾಗಿ ಹಾಸ್ಟೆಲ್ ಗಳು ನಡೆದಿಲ್ಲ, ಪ್ರಸ್ತುತ ಹಾಸ್ಟೆಲ್ ಗಳು ಆರಂಭವಾಗಿವೆ. ಹಾಸ್ಟೆಲ್‌ ಸೇರಲು ಅರ್ಜಿ ಸಲ್ಲಿಸಿದ ಎಲ್ಲರಿಗೂ ಪ್ರವೇಶ ನೀಡಬೇಕೆಂಬ ನಿಯಮವಿದ್ದರೂ ಸರಕಾರ ಮ್ಯಾನೇಜ್‌ ಮೆಂಟ್‌ ಕೋಟಾ ಅಡಿ ಕಾಲೇಜುಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳ ಪ್ರವೇಶ ನೀಡಲು ನಿರಾಕರಿಸುತ್ತಿದೆ, ಸರಕಾರವೇ ಮ್ಯಾನೇಜ್‌ಮೆಂಟ್‌ ಕೋಟಾದ ಶುಲ್ಕ ಭರಿಸುತ್ತಿರುವ ಸಂದರ್ಭದಲ್ಲಿ ಆ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ನಿರಾಕರಿಸುವುದು ಸರಿಯಲ್ಲ, ಕೂಡಲೇ ಆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ನೀಡಬೇಕೆಂದು ಬಹುಜನ ಸಮಾಜ ಪಾರ್ಟಿ ಒತ್ತಾಯಿಸುತ್ತದೆ ಎಂದರು.
ಜಿಲ್ಲೆಯಲ್ಲಿ ಆಶ್ರಯ ನಿವೇಶನ, ಬಗರ್‌ ಹುಕ್ಕುಂ ಸಾಗುವಳಿ ಚೀಟಿಗಾಗಿ ಸಾವಿರಾರು ಜನ ದಲಿತರು, ಬಡವರು, ಹಿಂದುಳಿದ ವರ್ಗಗಳ ಕುಟುಂಬಗಳು ಅರ್ಜಿ ಸಲ್ಲಿಸಿ, ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಕಳೆದ 15-20 ವರ್ಷಗಳಲ್ಲಿ ಒಬ್ಬರಿಗೆ ಒಂದು ಆಶ್ರಯ ನಿವೇಶನ ನೀಡಿಲ್ಲ, ಸ್ಮಶಾನಗಳಿಗೆ ಭೂಮಿ ಕಾಯ್ದಿರಿಸಿಲ್ಲ, ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತದೆ ಎಂದು ಗುರುಮೂರ್ತಿ ತಿಳಿಸಿದರು.
ತುಮಕೂರು ವಿವಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಿವಿಯಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಲ್ಯಾಪ್‌ಟಾಪ್‌ ವಿತರಿಸಲು ಸುಮಾರು 9 ಕೋಟಿ ಹಣ ಮೀಸಲಿರಿಸಿದೆ, ಆದರೆ ಇದುವರೆಗೂ ಆ ಹಣವನ್ನು ಖರ್ಚು ಮಾಡಿಲ್ಲ, ಪ್ರಸ್ತುತ ಕೊರೊನ ಮಹಾಮಾರಿ ಚಾಲ್ತಿಯಲ್ಲಿರುವ ಪರಿಣಾಮ ಯಾವಾಗ ಬೇಕಾದರೂ ಲಾಕ್ ಡೌನ್‌ ಘೋಷಣೆಯಾಗಿ, ಭೌತಿಕ ತರಗತಿಗಳು ಬಂದ್‌ ಆಗಬಹುದು, ಆಗ ವಿದ್ಯಾರ್ಥಿಗಳು ಆನ್ ಲೈನ್‌ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ, ಈ ಹಿನ್ನೆಲೆಯಲ್ಲಿ ವಿವಿ ಕೂಡಲೇ ಲ್ಯಾಪ್‌ಟಾಪ್‌ ವಿತರಿಸಲು ಕ್ರಮ ಕೈಗೊಳ್ಳಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ ಎಂದರು.
ಬಿಎಸ್‌ಪಿ ಜಿಲ್ಲಾಧ್ಯಕ್ಷ ರಾಜಸಿಂಹ ಮಾತನಾಡಿ, ತುರುವೇಕೆರೆ ತಾಲೂಕಿನ ದಂಡಿನಶಿವರ ಗ್ರಾಮದ ಬಳಿ 23-09- 2021ರಂದು ತುರುವೇಕೆರೆ ಕೆಎಸ್‌ಆರ್‌ಟಿಸಿ ಡಿಪೋ ನಿರ್ವಾಹಕಿಯೊಬ್ಬರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ದಲಿತ ಸಮುದಾಯಕ್ಕೆ ಸೇರಿದ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದು ಸಾರ್ವಜನಿಕರೇ ಆಕೆಯ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರೂ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕರು ಕ್ರಮ ಕೈಗೊಳ್ಳದೆ ಮೀನಾಮೇಷ ಎಣಿಸುತ್ತಿದ್ದಾರೆ, ಅಲ್ಲದೆ ಅಂಬೇಡ್ಕರ್‌ ಜಯಂತಿ ಮಾಡಿದ ಕೆಎಸ್‌ಆರ್‌ಟಿಸಿ ನೌಕರರಿಗೆ ಅನಗತ್ಯವಾಗಿ ನೊಟೀಸ್‌ ನೀಡಿ ಕಿರುಕುಳ ನೀಡುತ್ತಿದ್ದಾರೆ, ಕ್ಷಲ್ಲಕ ಕಾರಣಗಳಿಗೆ ಪರಿಶಿಷ್ಟ ಜಾತಿ, ವರ್ಗ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ನೌಕರರನ್ನು ಸೇವೆಯಿಂದ ಅಮಾನತು, ವಜಾದಂತಹ ಶಿಕ್ಷೆ ನೀಡುತ್ತಿದ್ದಾರೆ, ಈ ಬಗ್ಗೆ ಹಲವು ಬಾರಿ ಮನವಿ ಮಡಿದ್ದರೂ ಕೆಎಸ್‌ಆರ್‌ಟಿಸಿ ಡೀಸಿ ಬಸವರಾಜು ನಿರ್ಲಕ್ಷ ಧೋರಣೆ ತಾಳುತ್ತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಬಿಎಸ್‌ಪಿ ರಾಜ್ಯ ಖಜಾಂಚಿ ಕೆ.ಸಿ.ಹನುಮಂತರಾಯಪ್ಪ, ರುದ್ರಪ್ಪ, ರಾಜ್ಯ ಕಾರ್ಯದರ್ಶಿ ಸೂಲಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ, ಮುಖಂಡರಾದ ಸಿದ್ದಲಿಂಗಯ್ಯ, ರಂಗಯ್ಯ, ಮಂಜುನಾಥ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!