ಕೇಂದ್ರ ಸರ್ಕಾರದ ವಿರುದ್ಧ ರೈತರ ವಿಜಯೋತ್ಸವ

255

Get real time updates directly on you device, subscribe now.

ತುಮಕೂರು: ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್‌ ತೆಗೆದುಕೊಂಡು ರೈತರ ಮುಂದೆ ಮಂಡಿಯೂರಿದ ಕೇಂದ್ರ ಸರ್ಕಾರದ ವಿರುದ್ಧ ರೈತರು ಗಳಿಸಿದ ಚಾರಿತ್ರಿಕ ಗೆಲುವನ್ನು ನಗರದ ಬಿ.ಎಸ್.ಎನ್.ಎಲ್‌ ಕಚೇರಿ ಎದುರು ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಆಚರಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಸಂಯುಕ್ತ ಹೋರಾಟ ಕರ್ನಾಟಕದ ತುಮಕೂರು ಸಮಿತಿಯ ಸಂಚಾಲಕ ಯತಿರಾಜು ಮಾತನಾಡಿ, ರೈತರು ಮತ್ತು ಎಲ್ಲಾ ವರ್ಗಗಳ ಜನರು ಒಗ್ಗೂಡಿ ನಡೆಸಿದ ಹೋರಾಟ ಜಯ ಗಳಿಸಿದೆ. ಕೇಂದ್ರ ಸರ್ಕಾರ ಲಿಖಿತ ರೂಪದಲ್ಲಿ ಎಲ್ಲಾ ಬೇಡಿಕೆಗಳಿಗೆ ಒಪ್ಪಿಕೊಂಡಿದೆಯೆಂದು ನೀಡಿರುವುದರಿಂದ ಚಳವಳಿ ಸ್ಥಗಿತಗೊಳಿಸಿದೆ, ಆದರೆ ನಂಬಲನರ್ಹವಾದ ಕೇಂದ್ರ ಸರ್ಕಾರವು ಮಾತನ್ನು ಕೃತಿಗೆ ಇಳಿಸುವವರೆಗೂ ಹೋರಾಟ ನಿಲ್ಲುವುದಿಲ್ಲ, ಜೊತೆಗೆ ಕೃಷಿ ಕಾಯ್ದೆಗಳು ರಾಜ್ಯಗಳ ನಿರ್ಧಾರ, ಕೇಂದ್ರ ಸರ್ಕಾರ ಕೈಹಾಕಬಾರದು ಮತ್ತು ಕನಿಷ್ಟ ಬೆಂಬಲ ಬೆಲೆಯ ಕುರಿತು ಕಾನೂನು ರೂಪಿಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರು ಮತ್ತು ಜಿಲ್ಲಾ ಅಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ದೇಶದ ರೈತ ಚಳವಳಿಯ ಇತಿಹಾಸದಲ್ಲಿ ಮೂರು ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಐತಿಹಾಸಿಕ ಗೆಲುವನ್ನು ಸಾಧಿಸಿದ್ದಾರೆ. 700ಕ್ಕೂ ಹೆಚ್ಚು ರೈತರು ಹುತಾತ್ಮರಾಗಿ ಹಠಮಾರಿ ಸರ್ಕಾರವನ್ನು ಮಣಿಸಿದ್ದಾರೆ. ಹುತಾತ್ಮರಿಗೆ ಪರಿಹಾರ ನೀಡಲು, ದೇಶದಾದ್ಯಂತ ರೈತರ ಮೇಲಿನ ಮೊಕದ್ದಮೆ ಹಿಂತೆಗೆದುಕೊಳ್ಳುತ್ತೇವೆಂದು ಸರ್ಕಾರ ಘೋಷಿಸಿದೆ. ಸರ್ಕಾರ ಮಾತಿಗೆ ತಪ್ಪಿದರೆ ರೈತರ ಹೋರಾಟ ಮುಂದುವರೆಯುತ್ತದೆ ಎಂದರು.
ರೈತ ಕೃಷಿ ಕಾರ್ಮಿಕ ಸಂಘಟನೆ ಜಿಲ್ಲಾ ಸಂಚಾಲಕ ಎಸ್‌.ಎನ್‌.ಸ್ವಾಮಿ ಮಾತನಾಡಿ, ಅತ್ಯಂತ ದಮನಕಾರಿ, ಅಮಾನವೀಯ ಫ್ಯಾಸಿಸ್ಟ್ ಸರ್ಕಾರಕ್ಕೆ ರೈತರು ಮೂಗುದಾರ ಹಾಕಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಮಾಡಿದ ಎಲ್ಲಾ ಅಪ್ರಪಚಾರಗಳಿಗೂ ಸರಿಯಾದ ಉತ್ತರ ಕೊಡುತ್ತಾ ಅತ್ಯಂತ ಸಂಘಟಿತವಾಗಿ ಹಾಗೂ ಒಟ್ಟುಗೂಡಿ ಹೋರಾಟ ಬಲಿಷ್ಠವಾಗಿ ಕಟ್ಟಿದ್ದರಿಂದ ಯಶಸ್ಸು ಗಳಿಸಲು ಸಾಧ್ಯವಾಗಿದೆ, ರೈತರ ಜೊತೆಗೆ ಕಾರ್ಮಿಕರು ಹಾಗೂ ಇನ್ನಿತರ ವಿಭಾಗದ ಜನರು ಸೇರಿಕೊಂಡಿದ್ದು ಅನನ್ಯವಾದದು ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಅಜ್ಜಪ್ಪ ಮಾತನಾಡಿ, ರಾಜ್ಯ ಸರ್ಕಾರವೂ ಕೂಡಲೇ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್‌ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಎಐಕೆಎಸ್‌ನ ಕಂಬೇಗೌಡ, ಸಿಐಟಯು ವತಿಯಿಂದ ಪ್ರಕಾಶ್‌, ಎಐಟಿಯುಸಿ ಪರವಾಗಿ ಗಿರೀಶ್‌, ಎಐಯುಟಿಯುಸಿ ಪರವಾಗಿ ಮಂಜುಳಾ ಗೋನವಾರ ಮಾತನಾಡಿದರು. ಕರ್ನಾಟಕ ರಾಜ್ಯ ರೈತ ಸಂಘದ ರವೀಶ್‌, ಗಂಗಹನುಮಯ್ಯ, ಲೋಕೇಶ್‌, ಸುಬ್ರಹ್ಮಣ್ಯ, ಎಐಟಿಯುಸಿಯ ಕಾಂತರಾಜು, ಎಐಎಂಎಸ್‌ಎಸ್‌ನ ರತ್ನಮ್ಮ, ಆರ್.ಕೆ.ಎಸ್ ನ ನವೀನ್‌ ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!