ತುಮಕೂರು: ನಾಟಕ ಕರ್ನಾಟಕ ರಂಗಾಯಣ ಬಿ.ವಿ.ಕಾರಂತರ ಕನಸಿನ ಕೂಸು ಎಂದು ತುಮಕೂರು ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಶಾಲಿನಿ ಬಣ್ಣಿಸಿದರು.
ತುಮಕೂರಿನ ವಿವಿ ಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಶಿವಮೊಗ್ಗ ರಂಗಾಯಣದ ಕಾಲೇಜು ರಂಗೋತ್ಸವದ ನಾಟಕದ ತಾಲೀಮಿಗೆ ಚಾಲನೆ ನೀಡಿ ಮಾತನಾಡಿ, ಮೈಸೂರಿನಲ್ಲಿ ಆರಂಭವಾದ ರಂಗಾಯಣ ಈಗ ಬೇರೆ ಬೇರೆ ಜಿಲ್ಲೆಗಳಲ್ಲೂ ವಿಸ್ತರಿಸಿದೆ. ಈಗಾಗಲೇ ಹಲವಾರು ರಂಗ ಚಟುವಟಿಕೆಗಳಿಂದ ರಾಜ್ಯದ ಗಮನ ಸೆಳೆದಿರುವ ರಂಗಾಯಣದವರು ಕಾಲೇಜು ರಂಗೋತ್ಸವಕ್ಕೆ ನಮ್ಮ ಕಾಲೇಜನ್ನು ಆಯ್ಕೆ ಮಾಡಿಕೊಂಡಿರುವುದು ಖುಷಿಯ ಸಂಗತಿ ಎಂದರು.
ಈಗಾಗಲೇ ಶಿವಮೊಗ್ಗ ರಂಗಾಯಣದವರು ಕಳೆದ ಕೆಲ ವರ್ಷಗಳಿಂದ ಕಾಲೇಜು ಯುವ ರಂಗೋತ್ಸವ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದ ಅವರು ಕೋವಿಡ್ ಕಾರಣದಿಂದ ಕಳೆದ 2 ವರ್ಷಗಳಿಂದ ಕಾಲೇಜು ರಂಗೋತ್ಸವ ನಡೆದಿರಲಿಲ್ಲ. ಈಗ ಮತ್ತೆ ಕಾಲೇಜು ರಂಗೋತ್ಸವ ಆರಂಭವಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.
ತುಮಕೂರಿನ ಯೂನಿವರ್ಸಿಟಿಯ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಯುವ ಜನೋತ್ಸವದಲ್ಲಿ ಹಲವಾರು ಪ್ರಶಸ್ತಿ ಗೆದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಳೆದ ಎರಡು ವರ್ಷಗಳ ಕೆಳಗೆ ರಂಗೋತ್ಸವದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದನ್ನು ನೋಡಿದರೆ ಎಷ್ಟು ಕ್ರಿಯಾಶೀಲರು ಎಂಬುದು ವೇದ್ಯವಾಗುತ್ತದೆ ಎಂದರು.
ಮಕ್ಕಳ ವಿಕಾಸಕ್ಕೆ ರಂಗಭೂಮಿ ತನ್ನದೇ ಆದ ಕೊಡುಗೆ ನೀಡುತ್ತದೆ ಎಂದ ಅವರು ಈ ನಿಟ್ಟಿನಲ್ಲಿ ಕಾಲೇಜು ರಂಗೋತ್ಸವದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಮತ್ತಷ್ಟು ಪ್ರಜ್ವಲಿಸಲಿ ಎಂದು ಆಶಿಸಿದರು.
ರಂಗಭೂಮಿಗೆ ಜಿಲ್ಲೆ ತನ್ನದೇ ಕೊಡುಗೆ ನೀಡಿದೆ, ಗುಬ್ಬಿ ವೀರಣ್ಣ ಕಂಪನಿ ದೊಡ್ಡ ಕೊಡುಗೆ ನೀಡಿದೆ, ಹಾಗೆಯೇ ಈ ವಿಜ್ಞಾನ ಕಾಲೇಜು ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ನಾಟಕದಲ್ಲಿ ತೊಡಗಿಕೊಳ್ಳಲಿ ಎಂದರು.
ಇದೇ ಕಾಲೇಜಿನಲ್ಲಿ ಓದುತ್ತಿದ್ದ ಶ್ರೀನಿವಾಸಮೂರ್ತಿ ಅವರು ಈ ನಾಟಕ ನಿರ್ದೇಶಿಸುತ್ತಿದ್ದು ಅವರ ಗರಡಿಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಭವಿಷ್ಯ ಸಿಗಲಿ ಎಂದು ಹಾರೈಸಿದರು.
ತುಮಕೂರು ವಿವಿ ಕಾಲೇಜು ಅನೇಕ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸದಾ ಮುಂದಿದೆ, ಈ ರೀತಿಯ ಎಲ್ಲಾ ಚಟುವಟಿಕೆಗಳಿಗೆ ನಮ್ಮ ವಿವಿಯ ಕುಲಪತಿಗಳ ಪ್ರೋತ್ಸಾಹವೇ ಪ್ರೇರಕ ಶಕ್ತಿ ಎಂದರು.
ಶಿವಮೊಗ್ಗ ರಂಗಾಯಣ ಕಾಲೇಜು ರಂಗೋತ್ಸವದ ತುಮಕೂರು ಜಿಲ್ಲಾ ಸಂಯೋಜಕ ಉಗಮ ಶ್ರೀನಿವಾಸ್ ಮಾತನಾಡಿ ಶಿವಮೊಗ್ಗ ರಂಗಾಯಣ ವ್ಯಾಪ್ತಿಯ ಐದು ಜಿಲ್ಲೆಗಳಲ್ಲಿ ಈ ನಾಟಕಗಳು ನಡೆಯುತ್ತಿವೆ, ರಂಗಭೂಮಿಗೆ 5 ಜಿಲ್ಲೆಯ 15 ಕಾಲೇಜಿನಿಂದ 300 ಮಂದಿ ವಿದ್ಯಾರ್ಥಿಗಳು ಈ ಕಾಲೇಜು ರಂಗೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ 15 ಮಂದಿ ನಿರ್ದೇಶಕರು ಈ ರಂಗೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಜನವರಿ 3 ರಿಂದ ಐದು ದಿನಗಳ ಕಾಲ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕೋತ್ಸವ ನಡೆಯಲಿದ್ದು ಆ ಮೂರು ನಾಟಕಗಳಲ್ಲಿ ಒಂದು ನಾಟಕವನ್ನು ಶಿವಮೊಗ್ಗ ರಂಗಾಯಣದಲ್ಲಿ ಪ್ರದರ್ಶಿಸಲಾಗುವುದು ಎಂದರು.
ತುಮಕೂರು ರಂಗಭೂಮಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ, ಗುಬ್ಬಿ ವೀರಣ್ಣನವರಿಂದ ಮೊದಲಗೊಂಡು ಈಗಿನ ಹೊಸ ಕಾಲದ ರಂಗಕರ್ಮಿಗಳು ಸಾಕಷ್ಟು ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ಪೌರಾಣಿಕ ರಂಗಭೂಮಿಯ ತವರೂರು ಎಂಬ ಖ್ಯಾತಿಗೆ ತುಮಕೂರು ಭಾಜನವಾಗಿದೆ ಎಂದರು.
ಶಿವಮೊಗ್ಗ ರಂಗಾಯಣ ವ್ಯಾಪ್ತಿಗೆ ಒಳಪಡುವ ತುಮಕೂರು ಜಿಲ್ಲೆಯಲ್ಲಿ ಈಗ ರಂಗಾಯಣ ನಾಟಕೋತ್ಸವ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ತುಮಕೂರಿನಲ್ಲೇ ಬಯಲಸೀಮೆ ರಂಗಾಯಣ ಸ್ಥಾಪಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ನಾಟಕದ ನಿರ್ದೇಶಕ ಶ್ರೀನಿವಾಸಮೂರ್ತಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು ಅಭಿನಯಿಸುತ್ತಿರುವ ವೀರ ವನಿತೆ ಒನಕೆ ಓಬವ್ವ ನಾಟಕದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ರಂಗಾಯಣ ಬಿ.ವಿ. ಕಾರಂತರ ಕೂಸು: ಶಾಲಿನಿ
Get real time updates directly on you device, subscribe now.
Prev Post
Next Post
Comments are closed.