ತುಮಕೂರು: ತುಮಕೂರು ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಇಂದು ಹೊರ ಬೀಳಲಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ, ನಾವು ಗೆಲ್ಲಲೇ ಬೇಕು ಎಂದು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದರು.
ಇದೀಗ ಅಭ್ಯರ್ಥಿಗಳ ಭವಿಷ್ಯ ಹೊರ ಬೀಳಲು ಕ್ಷಣಗಣನೆ ಆರಂಭವಾಗಿದೆ, ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲೋದು ಎಂದು ಪಕ್ಷಗಳ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ, ಕಾಂಗ್ರೆಸ್ ಪಕ್ಷದವರು ಆರ್.ರಾಜೇಂದ್ರ ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ, ಇನ್ನು ಬಿಜೆಪಿ ಅಭ್ಯರ್ಥಿ ಲೋಕೇಶ್‌ಗೌಡ ಗೆಲ್ಲುತ್ತಾರೆ ಎಂಬುದು ಬಿಜೆಪಿ ಕಾರ್ಯಕರ್ತರ ವಿಶ್ವಾಸ, ನಮ್ಮ ಅಭ್ಯರ್ಥಿ ಅನಿಲ್ ಕುಮಾರ್ ವಿಜಯ ಪತಾಕೆ ಹಾರಿಸಲಿದ್ದಾರೆ ಎಂಬ ಭರವಸೆಯಲ್ಲಿದ್ದಾರೆ ಜೆಡಿಎಸ್ ಕಾರ್ಯಕರ್ತರು.
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ, ಕೆಲವರು ನಮ್ಮ ಅಭ್ಯರ್ಥಿಯೇ ಗೆಲ್ಲೋದು ಎಂದು ಬೆಟ್ಟಿಂಗ್ ಕಟ್ಟುತ್ತಿದ್ದಾರೆ, ಇದರ ಮಧ್ಯೆ ಅಭ್ಯರ್ಥಿಗಳ ನಮ್ಮ ಭವಿಷ್ಯ ಏನಾಗಲಿದೆಯೇ ಎಂಬ ಆತಂಕದಲ್ಲಿಯೇ ಮತ ಎಣಿಕೆಯತ್ತ ಎದುರು ನೋಡುತ್ತಿದ್ದಾರೆ.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದೆ, ಮತ ಎಣಿಕೆಗೆ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ, ನಿಯೋಜನೆಗೊಂಡಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಎಣಿಕಾ ಕೇಂದ್ರದಲ್ಲಿ ಹಾಜರಿರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ನಿರ್ದೇಶನ ನೀಡಿದ್ದಾರೆ.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಸಲು ಕೈಗೊಂಡಿರುವ ಪೂರ್ವ ಸಿದ್ಧತೆ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಮತ ಎಣಿಕಾ ಕೇಂದ್ರದಲ್ಲಿ ಡಿಸೆಂಬರ್ 14ರ ಬೆಳಗ್ಗೆ 6.30 ಗಂಟೆಯೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ನೀಡಿರುವ ಗುರುತಿನ ಚೀಟಿಯೊಂದಿಗೆ ಹಾಜರಿರಬೇಕೆಂದು ಎಣಿಕಾ ಏಜೆಂಟ್ ಹಾಗೂ ಮತ ಎಣಿಕೆಗೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮತ ಪೆಟ್ಟಿಗೆಗಳು ಭದ್ರವಾಗಿರುವ ಭದ್ರತಾ ಕೊಠಡಿಯನ್ನು ಬೆಳಗ್ಗೆ 7.30 ಗಂಟೆಗೆ ತೆರೆದು 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎರಡು ಕೊಠಡಿಗಳಲ್ಲಿ 14 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಪ್ರತಿ ಟೇಬಲ್ ಗೂ ತಲಾ ಒಬ್ಬ ಸೂಪರ್ ವೈಸರ್, ಎಣಿಕಾ ಸಹಾಯಕ ಹಾಗೂ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ. ಮತ ಎಣಿಕೆಗಾಗಿ 42 ಅಧಿಕಾರಿ, ಸಿಬ್ಬಂದಿ ಹಾಗೂ ಪೊಲೀಸ್ ಭದ್ರತೆಗಾಗಿ ಸುಮಾರು 100 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಮತ ಎಣಿಕಾ ಕೇಂದ್ರದೊಳಗೆ ಬಾಲ್ ಪಾಯಿಂಟ್ ಪೆನ್ ಹೊರತುಪಡಿಸಿ ಇಂಕ್, ಇತರೆ ಪೆನ್ ಗಳನ್ನು ತರಲು ಅವಕಾಶವಿರುವುದಿಲ್ಲ. ಅಲ್ಲದೆ ಮೊಬೈಲ್, ಕ್ಯಾಮೆರಾ, ಐಪ್ಯಾಡ್, ಬ್ಲೇಡ್, ಚಾಕು, ಬೀಡಿ, ಸಿಗರೇಟು, ಬೆಂಕಿಪೊಟ್ಟಣ, ಪಾನ್ ಮಸಾಲ, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಯಾವುದೇ ಪೊಟ್ಟಣ, ಬಾಕ್ಸ್ ಹಾಗೂ ಎಲ್ಲಾ ಅಪಾಯಕರ, ವಿಧ್ವಂಸಕ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಎಣಿಕಾ ಕೇಂದ್ರದೊಳಗೆ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ, ಎಣಿಕಾ ಕೇಂದ್ರ ಪ್ರವೇಶಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಅಭ್ಯರ್ಥಿಗಳು, ಚುನಾವಣಾ ಏಜೆಂಟರು, ಮತ ಎಣಿಕೆ ಏಜೆಂಟರು ತಮಗೆ ಅಗತ್ಯವಿರುವ ಕುಡಿಯುವ ನೀರು, ಉಪಹಾರ, ಇತ್ಯಾದಿಗಳನ್ನು ತಾವೇ ಒದಗಿಸಿಕೊಳ್ಳಬೇಕು. ಯಾವುದೇ ವ್ಯಕ್ತಿಯು ಮತ ಎಣಿಕಾ ಕಾರ್ಯ, ಚುನಾವಣಾ ಕಾರ್ಯಕ್ಕೆ ತೊಂದರೆ ಉಂಟು ಮಾಡಿದಲ್ಲಿ, ಅಸಭ್ಯವಾಗಿ ವರ್ತಿಸಿದಲ್ಲಿ ಕಾನೂನು ರೀತ್ಯಾ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಮತ ಎಣಿಕಾ ಪ್ರಕ್ರಿಯೆ ಸುಗಮವಾಗಿ ನಡೆಸುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಒದಗಿಸಲು ನಿಯೋಜಿಸಲಾಗಿರುವ ಅಧಿಕಾರಿ, ಸಿಬ್ಬಂದಿಗೆ ಕರ್ತವ್ಯದ ಬಗ್ಗೆ ನಿರ್ದೇಶನ ನೀಡಿದರು.
ಒಟ್ಟಾರೆ ಇಂದು ಎಂಎಲ್‌ಸಿ ಚುನಾವಣೆಯ ಮತ ಎಣಿಕೆ ನಡೆಯಲಿದೆ, ಮತದಾರ ಯಾರತ್ತ ಒಲವು ತೋರಿದ್ದಾನೆ, ಯಾರಿಗೆ ಹೆಚ್ಚು ಮತ ನೀಡಿ ಗೆಲುವಿಗೆ ಮುನ್ನುಡಿ ಬರೆದಿದ್ದಾನೆ ಎಂಬುದಕ್ಕೆ ಇಂದು ಉತ್ತರ ಸಿಗಲಿದೆ, ಯಾರಿಗೆ ಜಯ, ಯಾರು ಗೆಲುವಿನ ನಗೆ ಬೀರಲಿದ್ದಾರೆ ಎಂಬುದಕ್ಕೆ ಇಂದು ಸಂಜೆ ವೇಳೆಗೆ ಫಲಿತಾಂಶದ ಮೂಲಕ ಉತ್ತರ ದೊರೆಯಲಿದೆ.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ- ಅಭ್ಯರ್ಥಿಗಳ ಎದೆಯಲ್ಲಿ ಢವಢವ
ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
Get real time updates directly on you device, subscribe now.
Prev Post
Next Post
Comments are closed.