ಶಿಂಷಾ ನದಿ ಪಾತ್ರದಲ್ಲಿ ಕಾವೇರಿ ನದಿ ಉತ್ಸವ ಡಿ.22ಕ್ಕೆ

242

Get real time updates directly on you device, subscribe now.

ತುಮಕೂರು: ಕೇಂದ್ರ ಜಲಶಕ್ತಿ ಮಂತ್ರಾಲಯದ ನಿರ್ದೇಶನದನ್ವಯ ಡಿಸೆಂಬರ್‌ 22ರಂದು ಜಿಲ್ಲೆಯ ಕುಣಿಗಲ್‌ ತಾಲ್ಲೂಕು ಶ್ರೀಯಡಿಯೂರು ಕ್ಷೇತ್ರದ ಶಿಂಷಾ ನದಿ ಪಾತ್ರದಲ್ಲಿ ಕಾವೇರಿ ನದಿ ಉತ್ಸವ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಭಾರತ ಸ್ವಾತಂತ್ರ್ಯದ 75 ವರ್ಷಗಳ ನೆನಪಿಗಾಗಿ ದೇಶದಾದ್ಯಂತ ಆಚರಿಸಲಾಗುತ್ತಿರುವ ಆಜಾದಿ ಕ ಅಮೃತ ಮಹೋತ್ಸವದ ಅನುಮೋದಿತ ಥೀಮ್ ಗಳಲ್ಲೊಂದಾದ ನದಿಗಳ ಉತ್ಸವ ಕಾರ್ಯಕ್ರಮದಡಿ ಕಾವೇರಿ ನದಿ ಉತ್ಸವ ಆಚರಿಸಲಾಗುತ್ತಿದೆ. ನದಿಗಳಲ್ಲಿ ಸ್ವಚ್ಛತೆ ಕಾಪಾಡುವ ಹಾಗೂ ಸಾರ್ವಜನಿಕರಲ್ಲಿ ನದಿಗಳ ಸಂರಕ್ಷಣೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಗಂಗಾ ಉತ್ಸವ-2021 ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಉತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗಂಗಾ ಉತ್ಸವದ ರೀತಿಯಲ್ಲಿ ಭಾರತದ ಇತರೆ ನದಿಗಳ ಉತ್ಸವ ಆಚರಿಸಿ ಯಶಸ್ವಿಗೊಳಿಸಲು ಬಯಸಿರುವ ಹಿನ್ನೆಲೆಯಲ್ಲಿ ಡಿಸೆಂಬರ್‌ 22 ರಂದು ವಿವಿಧ ಇಲಾಖೆಗಳ ಸಹಕಾರದಲ್ಲಿ ಕಾವೇರಿ ನದಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನದಿ ಉತ್ಸವದ ಪ್ರಯುಕ್ತ ಅಂದು ಬೆಳಗ್ಗೆ ಯೋಗ ಹಾಗೂ ಧ್ಯಾನ ಕಾರ್ಯಕ್ರಮ, ಶಾಲಾ ಮಕ್ಕಳಿಗಾಗಿ ಚಿತ್ರಕಲೆ, ರಂಗೋಲಿ, ರಸಪ್ರಶ್ನೆ ಸ್ಪರ್ಧೆ, ಸಸಿ ನೆಡುವ ಕಾರ್ಯಕ್ರಮ, ನದಿ ಪಾತ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮ, ನದಿಗಳ ಸಂರಕ್ಷಣೆ ಕುರಿತು ಸಂಗೀತ, ನೃತ್ಯ ಕಾರ್ಯಕ್ರಮ, ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರು, ಪರಿಸರ ಸಂರಕ್ಷಣೆ ಮಾಡುವವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರಲ್ಲದೆ, ಸಂಜೆ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಹಾಗೂ ದೀಪೋತ್ಸವ ಕಾರ್ಯಕ್ರಮ ಏರ್ಪಡಿಸಬೇಕೆಂದು ಸೂಚಿಸಿದರು.
ಕಾವೇರಿ ನದಿ ಉತ್ಸವ ಕಾರ್ಯಕ್ರಮದ ಯಶಸ್ವಿಗಾಗಿ ಕಾವೇರಿ ನೀರಾವರಿ ನಿಗಮವನ್ನು ನೋಡಲ್‌ ಏಜೆನ್ಸಿಯಾಗಿ ನೇಮಕ ಮಾಡಲಾಗಿದ್ದು, ಕಾವೇರಿ ನದಿ ಉತ್ಸವ ಕಾರ್ಯಕ್ರಮ ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಬೇಕೆಂದು ಕಾವೇರಿ ನೀರಾವರಿ ನಿಗಮ ಹೇಮಾವತಿ ನಾಲಾ ವಲಯದ ಅಧೀಕ್ಷಕ ಇಂಜಿನಿಯರ್‌ ಎಂ.ವರದಯ್ಯ ಅವರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪೂರವಾಡ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಯಡಿಯೂರು ಹೇಮಾವತಿ ನಾಲಾ ವಲಯದ ಕಾರ್ಯನಿರ್ವಾಹಕ ಇಂಜಿನಿಯರ್‌ ಜಯರಾಮಯ್ಯ, ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ನಂಜಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್‌, ಪಾಲಿಕೆ ಆರೋಗ್ಯಾಧಿಕಾರಿ ರಕ್ಷಿತ್‌, ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಆಯುಕ್ತ ವೇಣುಗೋಪಾಲ್‌, ಪ್ರಾದೇಶಿಕ ಅರಣ್ಯ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ: ಎಸ್‌.ರಮೇಶ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕಿ ಆರ್‌. ರೂಪಕಲಾ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!