ತುಮಕೂರು: ಬಹಳ ಕುತೂಹಲ ಕೆರಳಿಸಿದ್ದ ತುಮಕೂರು ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ವಿಜಯ ಪತಾಕೆ ಹಾರಿಸಿದ್ದಾರೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ಇತ್ತು, ಅಂತಿಮವಾಗಿ ಫಲಿತಾಂಶ ಹೊಬಿದ್ದಿದ್ದು, ಆರ್.ರಾಜೇಂದ್ರ ಗೆಲುವಿನ ನಗೆ ಬೀರಿದ್ದಾರೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ತಮ್ಮ ಅಭ್ಯರ್ಥಿಗಳ ಸೋಲಿನಿಂದ ತೀವ್ರ ಮುಖಭಂಗವಾಗಿದೆ.
ಮೊದಲ ಪ್ರಾಶಸ್ತ್ಯದಲ್ಲಿ 2250 ಮತ ಪಡೆದ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಮ್ಯಾಜಿಕ್ ನಂಬರ್ 2661 ತಲುಪಲು 411 ಮತಗಳ ಕೊರತೆ ಉಂಟಾಯಿತು. ಕಡಿಮೆ ಮತಗಳಿಸಿದ ಅಭ್ಯರ್ಥಿಗಳನ್ನು ಸ್ಪರ್ಧೆಯಿಂದ ಒಬ್ಬೊಬ್ಬರನ್ನಾಗಿ ಎಲಿಮಿನೇಟ್ ಮಾಡುವ ಮೂಲಕ ಅವರ ಮತಪತ್ರದಲ್ಲಿದ್ದ ಎರಡನೇ ಪ್ರಾಶಸ್ತ್ಯದ ಮತ ಎಣಿಕೆಗೆ ಪರಿಗಣಿಸಲಾಯಿತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿಲ್ಕುಮಾರ್ ಪಡೆದಿದ್ದ ಮತಪತ್ರದಲ್ಲಿನ ಎರಡನೇ ಪ್ರಾಶಸ್ತ್ಯದ ಮತ ಎಣಿಸಲಾಯಿತು. ಆರ್.ರಾಜೇಂದ್ರ ಮ್ಯಾಜಿಕ್ ಸಂಖ್ಯೆ ತಲುಪಿದರೂ ಎಣಿಕೆ ನಿಲ್ಲಿಸದೆ ಜೆಡಿಎಸ್ ಅಭ್ಯರ್ಥಿಯ ಎಲ್ಲಾ ಮತಗಳನ್ನು ಎಣಿಸಲಾಯಿತು. ಬಳಿಕ ಆರ್.ರಾಜೇಂದ್ರಗೆ 306 ಎರಡನೇ ಪ್ರಾಶಸ್ತ್ಯ ಮತ ದೊರೆತರೆ, ಲೋಕೇಶ್ ಗೆ 293 ಮತ ಬಂದವು. ಇದರೊಂದಿಗೆ 2556 ಮತಗಳಿಸಿದರಾದರೂ ರಾಜೇಂದ್ರ ಮ್ಯಾಜಿಕ್ ನಂಬರ್ ತಲುಪಲಿಲ್ಲ. ಬಳಿಕ ಶೇ.50 ಪ್ಲಸ್ 1 ಮತ ಪಡೆಯಲು ಲೋಕೇಶ್ ಗೌಡರನ್ನು ಎಲಿಮಿನೇಟ್ ಮಾಡಲು ನಿರ್ಧರಿಸಲಾಯಿತು. ಅವರಲ್ಲಿನ 579 ಎರಡನೇ ಪ್ರಾಶಸ್ತ್ಯ ಮತಗಳು ರಾಜೇಂದ್ರಗೆ ಬಂದಿದ್ದು ಒಟ್ಟು 3135 ಮತ ಪಡೆದರು. ಹೆಚ್ಚುವರಿವಾಗಿ 474 ಮತ ಅವರ ಖಾತೆಗೆ ಸೇರಿದವು. ಅಂತಿಮವಾಗಿ ಆರ್.ರಾಜೇಂದ್ರ 1085 ಅಂತರದಿಂದ ಗೆಲುವಿನ ನಗೆ ಬೀರಿದರು.
ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಫಲಿತಾಂಶ ಹೊರ ಬೀಳುತ್ತಿದ್ದಂತೆ ಮತ ಎಣಿಕೆ ನಡೆಯುತ್ತಿದ್ದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರ ಹಷೋದ್ಘಾರ ಮುಗಿಲು ಮುಟ್ಟಿತ್ತು, ಜೊತೆಗೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು, ಗೆಲುವು ಪಡೆದ ರಾಜೇಂದ್ರ ಅವರಿಗೆ ಜಯಕಾರ ಕೂಗಿ ಸಂಭ್ರಮಿಸಿದರು.
ನಂತರ ರಾಜೇಂದ್ರ ಅವರಿಗೆ ತಂದೆ ರಾಜಣ್ಣ, ತಾಯಿ ಶಾಂತಲ, ಸಹೋದರ ಸೇರಿದಂತೆ ಮುಖಂಡರಾದ ಟಿ.ಬಿ.ಜಯಚಂದ್ರ ಮುಂದಾದವರು ಶುಭಕೋರಿದರು. ನಂತರ ರಾಜೇಂದ್ರ ಅವರನ್ನು ತೆರೆದ ವಾಹನದಲ್ಲಿ ಟೌನ್ ಹಾಲ್ ಸರ್ಕಲ್ ವರೆಗೆ ಮೆರವಣಿಗೆ ಮಾಡಲಾಯಿತು, ಕಾರ್ಯಕರ್ತರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿತ್ತು.
ಒಗ್ಗಟ್ಟಿನ ಮಂತ್ರ ವರ್ಕೌಟ್
ಜಿಲ್ಲಾ ಕಾಂಗ್ರೆಸ್ ಒಡೆದ ಮನೆಯಾಗಿತ್ತು, ನಮ್ಮದೊಂದು ಗುಂಪು, ನಿಮ್ಮದೊಂದು ಗುಂಪು ಎಂಬಂತಿದ್ದ ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದರು, ನಮ್ಮಲ್ಲಿ ಯಾವುದೇ ಒಡಕಿಲ್ಲ, ನಾವೆಲ್ಲಾ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ಎಲ್ಲಾ ನಾಯಕರು ಪ್ರಚಾರ ನಡೆಸಿ ಮತಯಾಚನೆ ಮಾಡಿದ್ದರು, ಈ ಒಗ್ಗಟ್ಟಿನ ಮಂತ್ರ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೈ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಇನ್ನು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ತಮ್ಮ ಮಗನನ್ನು ಈ ಬಾರಿಯ ಎಂ.ಎಲ್.ಸಿ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲೇಬೇಕು ಎಂಬ ಹಠಕ್ಕೆ ಬಿದ್ದು ಚುನಾವಣೆ ಎದುರಿಸಿದರು, ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಗನ ಪರ ಪ್ರಚಾರಕ್ಕೆ ಕರೆದೊಯ್ದರು, ಇದರ ಮಧ್ಯೆ ಜೆಡಿಎಸ್ ಅಭ್ಯರ್ಥಿ ಪರ ದೇವೇಗೌಡರೇ ಬಂದು ಪ್ರಚಾರ ಮಾಡಿ ಕಾಂಗ್ರೆಸ್ ಸೋಲಿಗೆ ಚಕ್ರವ್ಯೂಹ ರಚಿಸಿದರೂ ರಾಜಣ್ಣ ಅವರು ಆ ಚಕ್ರವ್ಯೂಹ ಬೇದಿಸಿ ಮಗನಿಗೆ ವಿಜಯ ಮಾಲೆ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಳೇಟಿಗೆ ಲೋಕೇಶ್ ಗೌಡ ಬಲಿ
ಹೌದು, ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಹೊಸ ಮುಖ ಲೋಕೇಶ್ ಗೌಡ ಅವರು ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗಮನ ಸೆಳೆದರು, ಇನ್ನು ಪ್ರಚಾರ ಕಾರ್ಯದಲ್ಲಿ ಮಿಂಚಿನಂತೆ ಸಂಚರಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದರು, ಇವರಿಗೆ ಮಾಧುಸ್ವಾಮಿಯ ಸಂಪೂರ್ಣ ಬೆಂಬಲ ಆಶೀರ್ವಾದ ಇತ್ತು, ಆದರೆ ಕೆಲ ಬಿಜೆಪಿ ನಾಯಕರೇ ಇವರ ಬೆಂಬಲಕ್ಕೆ ಬರದೇ ಕಾಂಗ್ರೆಸ್ ಗೆ ಅನುಕೂಲ ಮಾಡುವ ಕೆಲಸ ಮಾಡಿ ಬಿಟ್ಟರು, ಆ ಮೂಲಕ ಗೆಲ್ಲಬೇಕಾಗಿದ್ದ ಬಿಜೆಪಿ ಅಭ್ಯರ್ಥಿಯನ್ನು ಒಳೇಟಿನ ಮೂಲಕ ಬಿಜೆಪಿ ನಾಯಕರೇ ಅಡ್ಡಡ್ಡ ಮಲಗಿಸಿ ಬಿಟ್ಟಿದ್ದಾರೆ, ಗೆಲುವಿನ ಕನಸಿನೊಂದಿಗೆ ಅಖಾಡಕ್ಕೆ ಇಳಿದಿದ್ದ ಲೋಕೇಶ್ ಗೌಡರಿಗೆ ತಮ್ಮ ಪಕ್ಷದ ನಾಯಕರ ಕುತಂತ್ರ ತಿಳಿಯದೇ ನಂಬಿ ಕೆಟ್ಟೆ ಎಂಬಂತಾಗಿದೆ, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ ಅಷ್ಟೆ.
ಹರಕೆಯ ಕುರಿಯಾದ್ರಾ ಅನಿಲ್?
ಎಂ.ಎಲ್.ಸಿ ಎಲೆಕ್ಷನ್ ಗೆ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಕುತೂಹಲದ ಮಧ್ಯೆ ತಮ್ಮ ಅಧಿಕಾರಿ ಹುದ್ದೆ ತ್ಯಜಿಸಿ ದಿಡೀರ್ ಜೆಡಿಎಸ್ ಪಕ್ಷ ಸೇರಿ ನಾನೇ ಅಭ್ಯರ್ಥಿ ಎಂದು ಹೇಳುವ ಮೂಲಕ ಅನಿಲ್ ಕುಮಾರ್ ಚರ್ಚೆಗೆ ಗ್ರಾಸವಾಗಿದ್ದರು, ಇವರ ಪರ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ಅವರೇ ಪ್ರಚಾರ ಕಾರ್ಯ ಕೈಗೊಂಡಾಗ ಜೆಡಿಎಸ್ ಅಭ್ಯರ್ಥಿ ಗೆಲುವು ನಿಶ್ಚಿತ ಎಂಬ ಮಾತುಗಳು ಕೇಳಿ ಬಂದವು, ದೇವೇಗೌಡರು ಪ್ರಚಾರ ಮಾಡಿದ ಕಡೆಯಲ್ಲಾ ಎಂಪಿ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದವರಿಗೆ ಪಾಠ ಕಲಿಸಬೇಕು ಅಂದ್ರೆ ನಮ್ಮ ಅಭ್ಯರ್ಥಿ ಅನಿಲ್ ಗೆಲ್ಲಿಸಿ ಎಂದು ಮನವಿ ಮಾಡುತ್ತಿದ್ದರು, ಆದರೆ ಮತದಾರ ಮಾತ್ರ ದೇವೇಗೌಡರ ಮನವಿಗೂ ಮಣೆ ಹಾಕದೇ ಕೈ ಅಭ್ಯರ್ಥಿಯತ್ತ ಒಲವು ತೋರಿಸಿದ್ದಾನೆ, ಜೆಡಿಎಸ್ ಅಭ್ಯರ್ಥಿ ಸೋಲಿಗೆ ವರಿಷ್ಠರೇ ಕಾರಣ, ಅನಿಲ್ಕುಮಾರ್ನನ್ನು ಚುನಾವಣೆಗೆ ನಿಲ್ಲಿಸಿ ಹರಕೆ ಕುರಿ ಮಾಡಿ ಬಿಟ್ಟರು ಎಂದು ಜೆಡಿಎಸ್ ಕಾರ್ಯಕರ್ತರೇ ಮಾತನಾಡುವಂತಾಗಿದೆ.
ಋಣ ತೀರಿಸಿದ್ರಾ ಜಿ.ಎಸ್.ಬಿ?
ಕಳೆದ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಹೆಚ್.ಡಿ.ದೇವೇಗೌಡರನ್ನೇ ಸೋಲಿಸಿ ಗೆದ್ದು ಬೀಗಿದ್ದರು ಬಿಜೆಪಿ ಜಿ.ಎಸ್.ಬಸವರಾಜು, ಆದರೆ ಜಿ.ಎಸ್.ಬಿ ಗೆಲುವಿನಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಪಾತ್ರ ಪ್ರಮುಖವಾಗಿತ್ತು, ದೇವೇಗೌಡರನ್ನು ಸೋಲಿಸಿದ್ದು ನಾನೇ ಎಂದು ರಾಜಣ್ಣ ಹತ್ತಾರು ಬಾರಿ ಹೇಳಿಕೊಂಡಿದ್ದರು, ತಮ್ಮ ಗೆಲುವಿಗೆ ಸಹಾಯ ಹಸ್ತ ಚಾಚಿದ್ದ ರಾಜಣ್ಣರ ಬಗ್ಗೆ ಜಿ.ಎಸ್.ಬಿ ಗೆ ವಿಶ್ವಾಸ ಹೆಚ್ಚಾಯಿತು, ನಿಮಗೂ ನಾವು ಮುಂದೆ ಸಹಾಯ ಮಾಡುವ ಭರವಸೆಯೂ ವ್ಯಕ್ತವಾಗಿತ್ತು, ಇದೀಗ ಎಂ.ಎಲ್.ಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸದೆ ಕಾಂಗ್ರೆಸ್ ಅಭ್ಯರ್ಥಿ, ರಾಜಣ್ಣ ಅವರ ಪುತ್ರ ರಾಜೇಂದ್ರ ಅವರ ಗೆಲುವಿಗೆ ಜಿ.ಎಸ್.ಬಿ ಸಹಾಯ ಮಾಡುವ ಮೂಲಕ ಋಣ ಸಂದಾಯ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಪಕ್ಷಕ್ಕೆ ದ್ರೋಹ ಮಾಡಲ್ಲ ಎಂದು ಹೇಳುತ್ತಲೇ ಜಿ.ಎಸ್.ಬಿ ಕಾಂಗ್ರೆಸ್ ಅಭ್ಯರ್ಥಿ ಕೈ ಮೇಲಾಗುವಂತೆ ಮಾಡಿದ್ದಾರೆ ಎಂಬ ಮಾತುಗಳು ಬಿಜೆಪಿ ಕಾರ್ಯಕರ್ತರಿಂದಲೇ ಕೇಳಿ ಬರುತ್ತಿವೆ.
Comments are closed.