ದೇವೇಗೌಡರದ್ದು ಸ್ವಾರ್ಥ ರಾಜಕಾರಣ: ರಂಗಣ್ಣಗೌಡ

383

Get real time updates directly on you device, subscribe now.

ಕುಣಿಗಲ್‌: ಇನ್ನು ಮುಂದೆ ಜೆಡಿಎಸ್ ನ ದೇವೆಗೌಡರು ಪ್ರಯೋಗಿಸುವ ಒಕ್ಕಲಿಗ ಜಾತಿ ಆಧಾರಿತ ಮತಯಾಚನೆ ನಡೆಯುವುದಿಲ್ಲ ಎಂಬುದು ತುಮಕೂರು ಜಿಲ್ಲೆ ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ ಸ್ಪಷ್ಟ ಸಂದೇಶ ನೀಡಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಂಗಣ್ಣಗೌಡ ಹೇಳಿದರು.
ಬುಧವಾರ ಸಂಸದರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ನ ವರಿಷ್ಠ ದೇವೇಗೌಡರು ಪ್ರತಿ ಚುನಾವಣೆಯಲ್ಲೂ ಒಕ್ಕಲಿಗರ ಹೆಸರಲ್ಲಿ ಸ್ವಾರ್ಥ ರಾಜಕಾರಣ ಮಾಡುತ್ತಾ ಜಾತಿ ರಾಜಕೀಯ ನಡೆಸುತ್ತಾರೆ. ಈ ಬಾರಿ ವಿಧಾನ ಪರಿಷತ್‌ ತುಮಕೂರು ಜಿಲ್ಲೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಪ.ಪಂಗಡದ ಅಭ್ಯರ್ಥಿ ಕಣಕ್ಕಿಳಿದಿದ್ದು ಅವರನ್ನು ಮಣಿಸಲು ತಮ್ಮ ಒಕ್ಕಲಿಗ ಮತಯಾಚಣೆ ತಂತ್ರ ಪ್ರಯೋಗಿಸಿದರು, ಆದರೆ ಅದು ಫಲ ನೀಡಿಲ್ಲ, ಮತದಾರರು ಜಾಗೃತರಾಗಿ ರಾಜೇಂದ್ರರಂತಹ ಒಳ್ಳೆ ಅಭ್ಯರ್ಥಿಯ ಆಯ್ಕೆಮಾಡಿದ್ದಾರೆ. ತಾಲೂಕಿನಲ್ಲೂ ಪ್ರಚಾರ ನಡೆಸಿದ ದೇವೇಗೌಡರು ಒಕ್ಕಲಿಗ ಮತ ಸೆಳೆಯಲು ಯತ್ನಿಸಿದರು, ಆದರೆ ಶಾಸಕ ಡಾ.ರಂಗನಾಥ, ಸಂಸದ ಡಿ.ಕೆ.ಸುರೇಶ್ ರವರ ಸಂಘಟಿತ ಯತ್ನದಿಂದ ಅದು ಪ್ರಯೋಜನ ನೀಡದೆ ತಾಲೂಕಿನಲ್ಲಿ ಅತಿಹೆಚ್ಚು ಮತ ಕಾಂಗ್ರೆಸ್‌ ಅಭ್ಯರ್ಥಿ ಪಾಲಾಯಿತು. ಇನ್ನಾದರೂ ಜೆಡಿಎಸ್ ನ ವರಿಷ್ಠ ದೇವೇಗೌಡರು ಒಕ್ಕಲಿಗರ ಮುಂದಿಟ್ಟುಕೊಂಡು ರಾಜಕಾರಣದಲ್ಲಿ ಜಾತಿ ರಾಜಕೀಯ ಮಾಡಬಾರದು ಎಂದರು.
ತಾಲೂಕು ಕಾಂಗ್ರೆಸ್‌ ವಕ್ತಾರ ಬೇಗೂರು ನಾರಾಯಣ ಮಾತನಾಡಿ, ಜೆಡಿಎಸ್ ನ ದೇವೇಗೌಡರ ತಂತ್ರ ಜಿಲ್ಲೆಯಲ್ಲಿ ನಡೆಯಲಿಲ್ಲ. ಇದು 2023ರ ಚುನಾವಣೆಯ ದಿಕ್ಸೂಚಿ, ಮುಂದಿನ ಚುನಾವಣೆಗಳಲ್ಲಿ ದೇವೇಗೌಡರ ಒಕ್ಕಲಿಗ ಜಾತಿ ಆಧಾರಿತ ರಾಜಕಾರಣಕ್ಕೆ ಯಾವುದೆ ಕಾರಣಕ್ಕೂ ಮನ್ನಣೆ ಸಿಗದು ಎಂಬುದನ್ನು ತಾಲೂಕು ಸೇರಿದಂತೆ ಜಿಲ್ಲೆಯ ಮತದಾರರು ತೋರಿಸಿದ್ದಾರೆ. ತಾಲೂಕಿನಲ್ಲಿ ರಾಜೇಂದ್ರರವರ ಪರ ಹೆಚ್ಚಿನ ಮತ ಲಭಿಸುವ ಜೊತೆಯಲ್ಲಿ ಶಾಸಕ ಡಾ.ರಂಗನಾಥ ಪರ ಶೇ.60 ರಷ್ಟು ಮತದಾರರಿದ್ದಾರೆ ಎಂಬುದು ಸಾಬೀತಾಗಿದೆ. ಇದು ಪಕ್ಷದೊಳಗಿನ ಕೆಲ ಕಿಡಿಗೇಡಿ ಕಾರ್ಯಕರ್ತರು ಅರಿತುಕೊಳ್ಳಬೇಕು. ಚುನಾವಣೆ ಒಂದೇ ಆದರೂ ತಾಲೂಕಿನಲ್ಲಿ ಡಾ.ರಂಗನಾಥ ರವರ ಸಾಮರ್ಥ್ಯ ಏನೆಂದು ತೋರಿಸಿದೆ ಎಂದರು.
ವಿಎಸ್‌ಎಸ್‌ಎನ್‌ ಅಧ್ಯಕ್ಷ ಬೋರೇಗೌಡ ಮಾತನಾಡಿ, ತಾಲೂಕು ಸೇರಿದಂತೆ ಜಿಲ್ಲೆಯ ಪ್ರಜ್ಞಾವಂತ ಮತದಾರರು ಯಾವುದೇ ಆಮೀಷ, ಜಾತಿ ರಾಜಕಾರಣದ ತಂತ್ರಕ್ಕೆ ಬಲಿಯಾಗದೆ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಅತ್ಯಲ್ಪ ಅಂತರದಿಂದ ಸೋತಿದ್ದ ರಾಜೇಂದ್ರ ರಾಜಣ್ಣನವರನ್ನು ಗೆಲ್ಲಿಸುವ ಮೂಲಕ ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ ಎಂದರು. ಮುಖಂಡರಾದ ಚಂದ್ರಶೇಖರ್‌, ಹಾಲುವಾಗಿಲುಸ್ವಾಮಿ, ಕುಮಾರ, ಹುಚ್ಚೇಗೌಡ, ಪಾರ್ಥಸಾರಥಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!