ರಸ್ತೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಆಕ್ರೋಶ

427

Get real time updates directly on you device, subscribe now.

ಕುಣಿಗಲ್‌: ಪುರಸಭೆ ವತಿಯಿಂದ ಆರ್‌ಎಂಸಿ ಯಾರ್ಡ್‌ ಮುಂಭಾಗದಲ್ಲಿ ಕೈಗೊಂಡಿರುವ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಪುರಸಭೆ ಸದಸ್ಯರು ಸೇರಿದಂತೆ ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ.
ಪುರಸಭೆ ವತಿಯಿಂದ 2018-19ನೇ ಸಾಲಿನ 14ನೇ ಹಣಕಾಸು ಯೋಜನೆಯಡಿಯಲ್ಲಿ 9 ಲಕ್ಷರೂ. ವೆಚ್ಚದಲ್ಲಿ ಆರ್‌ಎಂಸಿ ಯಾರ್ಡ್‌ ಮುಂಭಾಗದ ಹೆದ್ದಾರಿಯ ಬದಿಯಲ್ಲಿ ಶೌಚಾಲಯ ಕಾಮಗಾರಿ ಆರಂಭಿಸಿದ್ದಾರೆ, ಆದರೆ ಇದೇ ಶೌಚಾಲಯಕ್ಕೆ 100 ಮೀಟರ್‌ ದೂರದಲ್ಲಿ ಆರ್‌ಎಂಸಿಯ ಎರಡು ಶೌಚಾಲಯ ಇದೆ, ನೂರು ಮೀಟರ್‌ ಅಂತರದಲ್ಲಿ ಪುರಸಭೆ ಹೊಸ ಶೌಚಾಲಯ ನಿರ್ಮಿಸುತ್ತಿರುವ ಬಗ್ಗೆ ಪುರಸಭೆ ಸದಸ್ಯ ಗೋಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಪುರಸಭೆ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ಸಮೀಪ ಹೆದ್ದಾರಿ ಬದಿಯಲ್ಲೆ ಲಕ್ಷಾಂತರ ರೂ. ವ್ಯಯ ಮಾಡಿ ಶೌಚಾಲಯ ನಿರ್ಮಿಸಿ ಎರಡು ವರ್ಷವೂ ಕಳೆದಿಲ್ಲ. ಇನ್ನು ಉದ್ಘಾಟನೆಯಾಗಿಲ್ಲ, ರಸ್ತೆಯಲ್ಲಿ ಶೌಚಾಲಯ ಎಂಬ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಉದ್ಘಾಟನೆಯಾಗದ ಶೌಚಾಲಯ ಹೊಡೆದು ಹಾಕುವ ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗುತ್ತದೆ.
ಸಂತೇ ಮೈದಾನದಲ್ಲೂ ಶೌಚಾಲಯ ನಿರ್ಮಿಸಿ ಬೀಗ ಹಾಕಿದ್ದಾರೆ. ಪುರಸಭೆಯಲ್ಲಿ ಶೌಚಾಲಯ ನಿರ್ಮಾಣ ಸಾರ್ವಜನಿಕರಿಗೆ ಉಪಯೋಗವಾಗಲಿ ಬಿಡಲಿ ಅಧಿಕಾರಿಗಳಿಗೆ ಗುತ್ತಿಗೆ ನೆಪದಲ್ಲಿ ಹಣವಾದರೆ ಸಾಕು ಎಂಬಂತಾಗಿದೆ.
ತಾಲೂಕು ಕಚೇರಿ ಆವರಣದಲ್ಲಿ ಸಂಸದರ ಸಿಎಸ್‌ಆರ್‌ ನಿಧಿಯಿಂದ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದ್ದು ಕೊನೆ ಹಂತದಲ್ಲಿ ಐದು ಲಕ್ಷ ರೂ. ಕೊರತೆ ಕಾರಣ ಕಟ್ಟಡ ನಿರ್ಮಾಣಗೊಂಡು ನಾಲ್ಕು ವರ್ಷ ಕಳೆಯುತ್ತಾ ಬಂದರೂ ಸಾರ್ವಜನಿಕ ಸೇವೆಗೆ ಸಿಗುತ್ತಿಲ್ಲ, ಖುದ್ದು ಸಂಸದರೆ ಪುರಸಭೆಯಿಂದ ಅನುದಾನ ಹೊಂದಾಣಿಕೆ ಮಾಡಿ ಶೌಚಾಲಯ ಪೂರ್ಣಗೊಳಿಸಿ ತಾಲೂಕು ಕಚೇರಿ ಸೇರಿದಂತೆ ತಾಲೂಕು ಪಂಚಾಯಿತಿ, ಪೊಲೀಸ್‌ ಇಲಾಖೆಯ ಮೂರು ಕಚೇರಿ, ಬೆಸ್ಕಾಂ ವಿಭಾಗೀಯ, ಉಪ ವಿಭಾಗದ ಕಚೇರಿಗೆ ಬರುವ ಸಾರ್ವಜನಿಕರಿಗೆ ಅನುಕೂಲವಾಗಲು ಸಿದ್ಧಗೊಳಿಸಿ ಎಂದಿದ್ದರೂ ಪುರಸಭೆ ಇತ್ತ ಗಮನ ಹರಿಸದೆ ಆರ್‌ಎಂಸಿ ಯಾರ್ಡ್‌ನಲ್ಲಿ ಎರಡು ಶೌಚಾಲಯ ಇದ್ದರೂ ರಸ್ತೆಯಲ್ಲಿ ಮತ್ತೊಂದು ಶೌಚಾಲಯ ನಿರ್ಮಾಣಕ್ಕೆ ಮುಂದಾಗಿರುವುದು ಪುರಸಭೆ ಅನುದಾನದ ಪೋಲು ಮಾಡುವಂತಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು ತಾಲೂಕು ಕಚೇರಿಯಲ್ಲಿ ಅರ್ಧಕ್ಕೆ ನಿಂತಿರುವ ಶೌಚಾಲಯ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪುರಸಭೆಯ ಅಧಿಕಾರಿಗಳು 14ನೇ ಹಣಕಾಸು ಯೋಜನೆಯಲ್ಲಿ ಮಂಜೂರಾಗಿರುವ ಕಾಮಗಾರಿ ಪೂರ್ಣಗೊಳಿಸಬೇಕಿದೆ, ಹೀಗಾಗಿ ಇಲ್ಲಿ ಮಾಡುತ್ತೇವೆ ಎಂದು ತಿಳಿಸಿದ್ದು, ಲೋಕೋಪಯೋಗಿ ಇಲಾಖೆಗೆ ಸೇರಿದ ಹೆದ್ದಾರಿಯಲ್ಲಿ ಶೌಚಾಲಯ ನಿರ್ಮಿಸಲು ಅನುಮತಿ ಪಡೆದಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟಪಡಿಸಿಲ್ಲ, ಹೆದ್ದಾರಿಯ ಬದಿಯಲ್ಲೆ ಶೌಚಾಲಯ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯ ಕುಣಿಗಲ್‌ ಅಧಿಕಾರಿಗಳು ಈ ನಿಟ್ಟಿನಲ್ಲಿ ಪುರಸಭೆಯವರು ಅನುಮತಿ ಪಡೆದಿರುವ ಮಾಹಿತಿ ಇಲ್ಲ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಬಿಜೆಪಿ ಯುವ ಮೋರ್ಚಾದ ಸುನಿಲ್‌ ಮಾತನಾಡಿ, ಸಾರ್ವಜನಿಕರ ತೆರಿಗೆ ಹಣವನ್ನು ಕೇವಲ ಗುತ್ತಿಗೆ ಲಾಭಿಗಾಗಿ ಇಲಾಖಾಧಿಕಾರಿಗಳು ಬಳಸಿಕೊಳ್ಳುವ ಚಾಳಿ ಬಿಟ್ಟು ಜನತೆಯ ಉಪಯೋಗಕ್ಕೆ ಬಳಸುವ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!