ಈಶ್ವರ್ ಎಂ
ತುಮಕೂರು: ನಮ್ಮ ಪಕ್ಷ ತಾಯಿಗೆ ಸಮಾನ, ತಾಯಿಗೆ ದ್ರೋಹ ಮಾಡುವುದುಂಟೇ….?
ಇಂಥ ಮಾತನ್ನು ರಾಜಕೀಯ ಪಕ್ಷದ ಎಲ್ಲಾ ಮುಖಂಡರು, ನಾಯಕರು ಹೇಳುತ್ತಲೇ ಇರುತ್ತಾರೆ, ಆದರೆ ತುಮಕೂರು ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷ ತಾಯಿಗೆ ಸಮಾನ ಎಂಬೆಂಲ್ಲಾ ಮಾತುಗಳು ಹುಸಿಯಾಗಿವೆ, ದ್ರೋಹ ಅನ್ನೋದು ನಡೆದೇ ಹೋಗಿದೆ, ಇಂಥ ಮಾತುಗಳನ್ನು ಕಾರ್ಯಕರ್ತರೇ ಆಡುತ್ತಿದ್ದಾರೆ.
ಹೌದು, ಚುನಾವಣೆ ಅನ್ನೋದು ನಂಬಿಕೆ ಮೇಲೆ ನಡೆಯುವಂತಹದ್ದಲ್ಲ, ಇಲ್ಲಿ ತಂತ್ರ, ಪ್ರತಿತಂತ್ರ, ಕುತಂತ್ರಗಳೆಲ್ಲವೂ ಇರುತ್ತೆ, ಇಂಥ ಕುತಂತ್ರಕ್ಕೆ ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ ಬಲಿಯಾಗಿ ಬಿಟ್ಟರು, ಕಮಲದ ನಾಯಕರೇ ಬಿಜೆಪಿ ಅಭ್ಯರ್ಥಿಯನ್ನು ಮಕಾಡೆ ಮಲಗಿಸಿ ಬಿಟ್ಟರು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ, ಈ ವಿಷಯ ಬಿಜೆಪಿ ಹೈ ಕಮಾಂಡ್ ಅಂಗಳಕ್ಕೂ ತಲುಪಿದೆ ಎನ್ನಲಾಗಿದೆ.
ಬಿಜೆಪಿ ಶಿಸ್ತಿನ ಪಕ್ಷ, ಇಲ್ಲಿ ಯಾರೇ ಅಭ್ಯರ್ಥಿಯಾದರೂ ಅವರ ಗೆಲುವಿಗೆ ಶ್ರಮಿಸುವುದು ಪ್ರತಿಯೊಬ್ಬ ನಾಯಕರ ಕೆಲಸ, ಆ ಕೆಲಸವನ್ನು ಚಾಚು ತಪ್ಪದೆ ಮಾಡಬೇಕು ಎಂಬುದು ಪಕ್ಷದ ನಿಯಮ, ಆದರೆ ಎಂಎಲ್‌ಸಿ ಚುನಾವಣೆಯಲ್ಲಿ ಲೋಕೇಶ್ ಗೌಡ ಅವರ ಪಾಲಿಗೆ ಜಿಲ್ಲೆಯ ಕೆಲವು ಬಿಜೆಪಿ ನಾಯಕರೇ ವಿಲನ್ ಆಗಿ ಬಿಟ್ಟರು, ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡದೇ ಬೇರೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಟೊಂಕ ಕಟ್ಟಿ ನಿಂತು ಬಿಟ್ಟರು, ಪರಿಣಾಮಕಾರಿಯಾಗಿ ಚುನಾವಣೆ ಎದುರಿಸಿ ಒಂದಷ್ಟು ಅನುಭವ ಹೊಂದಿದ್ದ ಲೋಕೇಶ್ ಗೌಡ ಸಾಕಷ್ಟು ಶ್ರಮ ಹಾಕಿ, ಕಾಂಚಾಣದ ಹೊಳೆ ಹರಿಸಿದರೂ ಕೆಲವು ನಾಯಕರು ಕೈ ಕೊಟ್ಟ ಪರಿಣಾಮ ಬಿಜೆಪಿ ಅಭ್ಯರ್ಥಿಗೆ ಸೋಲಾಯಿತು ಎಂಬುದು ಬಿಜೆಪಿ ಕಾರ್ಯಕರ್ತರ ನೋವಿನ ಮಾತು.
ಅಷ್ಟಕ್ಕೂ ತುಮಕೂರು ಸಂಸದರಾದ ಜಿ.ಎಸ್.ಬಸವರಾಜು ಅವರು ತಮ್ಮ ಅಭ್ಯರ್ಥಿ ಬೆನ್ನಿಗೆ ನಿಲ್ಲಲಿಲ್ಲ, ಅವರು ಋಣ ಸಂದಾಯ ಮಾಡಲು ಮುಂದಾಗಿ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ಅವರ ಗೆಲುವಿಗೆ ಸಾಥ್ ನೀಡಿದರು, ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಸುವುದು ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಓಟ್ ಹಾಕಿಸಿದ್ದಾರೆ, ಅವರ ಮಗ, ಶಾಸಕ ಜೋತಿ ಗಣೇಶ್ ಕೂಡ ಪಕ್ಷದ ಪರ ನಿಲ್ಲಲಿಲ್ಲ, ಇದೆಲ್ಲರ ಕಾರಣ ಲೋಕೇಶ್ ಗೌಡಗೆ ಹಿನ್ನಡೆಯಾಯಿತು ಎಂದು ಬಿಜೆಪಿ ನಾಯಕರೇ ಮಾತನಾಡಿಕೊಳ್ಳುತ್ತಿದ್ದಾರೆ, ಅಲ್ಲದೆ ಸಾಮಾಜಿಕ ಜಾಲತಾಣದಲ್ಲು ಇದೇ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಇನ್ನು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡ ಕೂಡ ಕಮಲ ಅರಳಲು ಶ್ರಮಿಸಲಿಲ್ಲ, ಬದಲಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಜೈ ಎಂದು ಕಮಲ ಕಮರುವಂತೆ ಮಾಡಿದರು, ಮತ ಹಾಕಿದ ಮತದಾರರೇ ಈ ಸತ್ಯವನ್ನು ಹೊರ ಹಾಕುತ್ತಿದ್ದು, ಸುರೇಶ್ ಗೌಡರಿಗೆ ಬಿಜೆಪಿ ಬಗೆಗಿರುವ ನಿಷ್ಟೇ ಇದೇನಾ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಸಚಿವ ಮಾಧುಸ್ವಾಮಿ ಅವರ ಕೆಲ ನಿರ್ಧಾರ, ಅವರೆಡಿಗಿನ ಮುನಿಸಿನಿಂದ ಸುರೇಶ್ ಗೌಡ ಮತ್ತು ಸಂಸದರು ಬೇರೆ ದಾರಿ ತುಳಿಯುವಂತಾಯಿತು ಎಂಬ ಮಾತು ಇದೆ.
ಇದೆಲ್ಲರ ಮಧ್ಯೆಯೂ ಸಚಿವ ಮಾಧುಸ್ವಾಮಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಜಿಲ್ಲೆ ಸುತ್ತಿ ಪ್ರಚಾರ ನಡೆಸಿದರು, ಗೆಲುವಿಗಾಗಿ ನಾನಾ ತಂತ್ರ ರೂಪಿಸಿದರು, ಆದರೆ ಅದು ಫಲಿಸಲಿಲ್ಲ, ಇಲ್ಲಿ ಕೆಲ ನಾಯಕರು ಪಕ್ಷದ ಅಭ್ಯರ್ಥಿಗೆ ಮೋಸ ಮಾಡಿದ್ದಾರೆ, ಆ ಮೂಲಕ ಪಕ್ಷಕ್ಕೂ ದ್ರೋಹ ಮಾಡಿದ್ದಾರೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ, ಈ ಎಲ್ಲಾ ವಿಚಾರಗಳನ್ನು ಬಿಜೆಪಿ ಹೈ ಕಮಾಂಡ್ ಯಾವ ರೀತಿ ಸ್ವೀಕರಿಸುತ್ತೆ, ಮುಂದೆ ಏನೆಲ್ಲಾ ಬೆಳವಣಿಗೆ ಆಗುತ್ತೆ ಎಂಬುದನ್ನು ಕಾದು ನೊಡಬೇಕು.
ಚುನಾವಣೆ ಎಂದ ಮೇಲೆ ಸೋಲು, ಗೆಲುವು ಇದ್ದದ್ದೆ, ಆದರೆ ಗೆಲ್ಲುವ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಯನ್ನು ನಮ್ಮ ಪಕ್ಷದವರೇ ಸೋಲಿನ ಮನೆಗೆ ತಳ್ಳಿ ಬಿಟ್ಟರಲ್ಲಾ ಎಂಬ ಬಿಜೆಪಿ ಕಾರ್ಯಕರ್ತರ ಸತ್ಯ ಮತ್ತು ನೋವಿನ ನುಡಿಗೆ ಉತ್ತರಿಸುವವರು ಯಾರು?
Get real time updates directly on you device, subscribe now.
Prev Post
Next Post
Comments are closed.