ಗುಬ್ಬಿ: ಹೇಮಾವತಿ ನಾಲಾ ವಲಯ ಸಹಾಯಕ ಇಂಜಿನಿಯರ್ ಸೇರಿ ಒಂದೇ ಕುಟುಂಬದ ಮೂವರು ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಬಳಿ ಹಾದು ಹೋಗುವ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.
ಹೇಮಾವತಿ ನಾಲಾ ವಲಯ ಕಚೇರಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ರಮೇಶ್(55), ಪತ್ನಿ ಮಮತಾ (45) ಮತ್ತು ಶುಭಾ (25) ಮೃತರಾದ ದುರ್ದೈವಿಗಳು. ರಮೇಶ್ ಕೆ.ಬಿ.ಕ್ರಾಸ್‌ನಲ್ಲಿರುವ ಹೇಮಾವತಿ ಕಚೇರಿಯಲ್ಲಿ ಎಇಇ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪತ್ನಿ ಮಮತಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದರು, ಕೆ.ಆರ್.ನಗರ ಮೂಲದ ರಮೇಶ್, ಪತ್ನಿ ಜತೆ ತುಮಕೂರು ನಗರದ ಮರಳೂರಿನಲ್ಲಿ ನೆಲೆಸಿದ್ದರು.
ಗುರುವಾರ ರಾತ್ರಿ ಮಾರುತಿ ಓಮ್ನಿ ಕಾರಿನಲ್ಲಿ ಬಂದ ಮೂವರೂ ಹೇಮಾವತಿ ನಾಲೆಗೆ ರಾತ್ರಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾರುತಿ ಓಮ್ನಿ ಕಾರನ್ನುರಾ.ಹೆ 206 ರಸ್ತೆಯಲ್ಲಿ ನಿಲ್ಲಿಸಿ ಡೆತ್ ನೋಟ್ ಇಟ್ಟು ನಾಲೆಗೆ ಹಾರಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ, ಆದರೆ, ರಮೇಶ್ ಪುತ್ರಿಗೆ ಒಂದು ತಿಂಗಳ ಹಿಂದಷ್ಟೇ ಮದುವೆ ಆಗಿತ್ತು, ಮದುವೆಯಾದ ಬಳಿಕ ಮಗಳು ತವರು ಸೇರಿದ್ದ ಹಿನ್ನಲೆ ಮರ್ಯಾದೆಗೆ ಅಂಜಿ ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಮೃತ ದೇಹಗಳನ್ನು ನಾಲೆಯಿಂದ ಹೊರ ತೆಗೆಯುವ ಕೆಲಸ ನಡೆಸಿ ರಾತ್ರಿ 2 ಗಂಟೆ ವೇಳೆಗೆ ತಾಯಿ ಮಗಳ ಮೃತದೇಹ ಸೋಮಲಾಪುರ ಸಮೀಪ ನಾಲೆಯಲ್ಲಿ ಪತ್ತೆ ಹಚ್ಚಲಾಯಿತು. ಬೆಳಗ್ಗೆ ಎಇಇ ರಮೇಶ್ ಶವ ಸಿಕ್ಕಿದ್ದು ಮುಂದಿನ ಕ್ರಮ ಕೈಗೊಂಡ ಚೇಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Get real time updates directly on you device, subscribe now.
Prev Post
Next Post
Comments are closed.