ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಾಟಕ ವೈಭವ

ತುಮಕೂರಿನಲ್ಲಿ ಐದು ದಿನ ನಾಟಕಮನೆ ರಂಗೋತ್ಸವ ಡಿ.20 ರಿಂದ 24

220

Get real time updates directly on you device, subscribe now.

ತುಮಕೂರು: ಕಳೆದ 24 ವರ್ಷಗಳಿಂದ ನಿರಂತರವಾಗಿ ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಪ್ರಯೋಗದಾಟಗಳ ರಂಗ ಕೇಂದ್ರ ನಾಟಕಮನೆ ತುಮಕೂರು ಡಿಸೆಂಬರ್‌ 20 ರಿಂದ 24ರ ವರೆಗೆ ಐದು ದಿನಗಳ ನಾಟಕಮನೆ ರಂಗೋತ್ಸವ- 2021ನ್ನು ತುಮಕೂರಿನ ಬಾಳನಕಟ್ಟೆಯಲ್ಲಿರುವ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದೆ ಎಂದು ನಾಟಕಮನೆ ತುಮಕೂರು ಇದರ ಟ್ರಸ್ಟಿ ನಾಟಕಮನೆ ಮಹಾಲಿಂಗು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೆಸರಾಂತ ರಂಗಕರ್ಮಿ ಬಿ.ವಿ.ಕಾರಂತರಿಂದ ನಾಟಕಮನೆ ತುಮಕೂರು ಎಂಬ ನಾಮಾಂಕಿತದಿಂದ ಉದಯವಾದ ನಾಟಕಮನೆ ನಿರಂತರವಾಗಿ ರಂಗ ಚಟುವಟಿಕೆಯಲ್ಲಿ ತೊಡಗಿದ್ದು, ರಂಗಶಿಬಿರ, ರಂಗಭೂಮಿ ಕುರಿತ ಕಮ್ಮಟ, ವಿಚಾರ ಸಂಕಿರಣ, ಕಾರ್ಯಾಗಾರ, ರಂಗತರಬೇತಿ ಶಿಬಿರ ಆಯೋಜಿಸುವುದರ ಜೊತೆಗೆ, ಹೆಸರಾಂತರ ನಿರ್ದೇಶಕರ ನಾಟಕಗಳ ಜೊತೆಗೆ, ಹೊಸ ಕಲಾವಿದರು, ನಿರ್ದೇಶಕರು ನಾಟಕಗಳ ಪ್ರಯೋಗಕ್ಕೆ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತಾ ಬಂದಿದೆ. ತಮ್ಮದೆ ತಂಡ ಕಟ್ಟಿಕೊಂಡು ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಹಾಸ್ಯ, ವಿಡಂಬನಾತ್ಮಕ, ವಿನೋಧಾತ್ಮಕ ನಾಟಕಗಳನ್ನು ನಾಡಿನೆಲ್ಲೆಡೆ ಪ್ರದರ್ಶನ ಮಾಡುವ ಮೂಲಕ ರಂಗಭೂಮಿಗೆ ಸಮರ್ಪಣೆ ಮಾಡಿಕೊಂಡಿದೆ ಎಂದರು.
ಪ್ರಸ್ತುತ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಾಜ್ಯ ಮಟ್ಟದ ಐದು ದಿನಗಳ ನಾಟಕಮನೆ ರಂಗೋತ್ಸವ ಡಿಸೆಂಬರ್‌ 20ರ ಸೋಮವಾರದಿಂದ ಡಿಸೆಂಬರ್‌ 24ರ ಶುಕ್ರವಾರದವರೆಗೆ ಹಮ್ಮಿಕೊಳ್ಳ ಲಾಗಿದೆ, ಡಿಸೆಂಬರ್‌ 20ರ ಸೋಮವಾರ ಸಂಜೆ 6.30ಕ್ಕೆ ಉದ್ಘಾಟನಾ ಸಮಾರಂಭ ಜರಗಲಿದ್ದು, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಮ್‌ ನಾಟಕಮನೆ ನಾಟಕೋತ್ಸವ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಕರ್ನಾಟಕ ನಾಟಕ ಅಕಾಡೆಮಿ ಪ್ರಸ್ತುತ ಅಧ್ಯಕ್ಷ ಪೊ.ಭೀಮಸೇನ್‌ ವಹಿಸಲಿದ್ದಾರೆ, ಕಲಾ ಪೋಷಕರಾದ ಸಿ.ವಿ.ಮಹದೇವಯ್ಯ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್‌.ಸಿದ್ದಲಿಂಗಪ್ಪ, ನಿಕಟ ಪೂರ್ವ ಕಸಾಪ ಜಿಲ್ಲಾಧ್ಯಕ್ಷ ಬಾ.ಹ.ರಮಾಕುಮಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಂತರ ರಾಜೇಂದ್ರ ಕಾರಂತರ ರಚನೆಯ ಮಂಜು ಸಿರಿಗೇರಿ ಅವರ ನಿರ್ದೇಶನದಲ್ಲಿ ಮುದ್ದಣ್ಣನ ಪ್ರಮೋಷನ್‌ ಪ್ರಸಂಗ ವೈನೋದಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಡಿಸೆಂಬರ್‌ 21ರ ಮಂಗಳವಾರ ಸಂಜೆ 6.30ಕ್ಕೆ ಆದಿಕವಿ ಪಂಪನ ಆದಿಪುರಾಣವನ್ನಾಧರಿಸಿದ ಬಾಹುಬಲಿ ವಿಜಯಂ ಎಂಬ ಐತಿಹಾಸಿಕ ನಾಟಕ ಭೀಮೇಶ್‌ ಹೆಚ್‌.ಎನ್‌. ಅವರ ನಿರ್ದೇಶನದಲ್ಲಿ ಮೂಡಿಬರಲಿದೆ.
ಡಿಸೆಂಬರ್‌ 22ರ ಬುಧವಾರ ಸಂಜೆ 6.30ಕ್ಕೆ ಬೀಚಿಯವರ ಹಾಸ್ಯ ಬರಹಗಳನ್ನು ಆಧರಿಸಿದ ಬೀಚಿ ರಸಾಯನ ಎಂಬ ಹಾಸ್ಯ ನಾಟಕ ಎನ್‌.ಸಿ.ಮಹೇಶ್‌ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ಡಿಸೆಂಬರ್‌ 23ರ ಗುರುವಾರ ಸಂಜೆ 6.30ಕ್ಕೆ ರಾಷ್ಟ್ರಕವಿ ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ಎನ್‌ಎಸ್‌ಡಿ ಪದವೀಧರೆ ಬಿ.ಸವಿತ ನಿರ್ದೇಶನದಲ್ಲಿ ಪ್ರಯೋಗಗೊಳ್ಳಲಿದೆ.
ಡಿಸೆಂಬರ್‌ 24ರ ಶುಕ್ರವಾರ ಸಂಜೆ 6.30ಕ್ಕೆ ನಾಟಕಮನೆ ನಾಟಕೋತ್ಸವ- 2021ರ ಸಮಾರೋಪ ಸಮಾರಂಭ ಜರುಗಲಿದ್ದು, ದೇಶಿ ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಪತ್ರಕರ್ತ ಎಸ್‌.ನಾಗಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮಹಾನಗರಪಾಲಿಕೆ ಮೇಯರ್‌ ಬಿ.ಜಿ.ಕೃಷ್ಣಪ್ಪ, ಆಯುಕ್ತರಾದ ರೇಣುಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಶ್ರೀನಿವಾಸ್‌, ರಂಗನಿರ್ದೇಶಕ, ನಾಟಕಕಾರ ತುಮಕೂರು ಶಿವಕುಮಾರ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ.
ಕಾರ್ಯಕ್ರಮದ ನಂತರ ಮೋಲಿಯರ್ ನ ಜಂಟಲ್ ಮನ್‌- ಮಾಮಾಮೋಶಿ ಎಂಬ ನಾಟಕದ ರಂಗ ಪ್ರಯೋಗ ನಡೆಯಲಿದೆ. ಈ ನಾಟಕವನ್ನು ಕನ್ನಡಕ್ಕೆ ಕೆ.ವಿ.ಸುಬ್ಬಣ್ಣ ಅನುವಾದಿಸಿದ್ದು, ಚೇತನ್‌ ತುಮಕೂರು ನಿರ್ದೇಶಿಸಿದ್ದಾರೆ. ಐದು ದಿನಗಳ ನಾಟಕಮನೆ ರಂಗೋತ್ಸವ- 2021ಗೆ ಉಚಿತ ಪ್ರವೇಶವಿದ್ದು, ರಂಗಾಸಕ್ತರು, ಯುವಜನತೆ ಹೆಚ್ಚಿನ ರೀತಿಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸುವಂತೆ ನಾಟಕಮನೆ ಟ್ರಸ್ಟಿ ನಾಟಕಮನೆ ಮಹಾಲಿಂಗು, ರಂಗಕರ್ಮಿ ಮೆಳೇಹಳ್ಳಿ ದೇವರಾಜು ಮತ್ತು ಸಂಚಾಲಕ ಪ್ರಕಾಶ್‌ ಎನ್‌.ಆರ್‌. ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!