ರಾಯಣ್ಣನ ಪ್ರತಿಮೆ ಭಗ್ನಕ್ಕೆ ಆಕ್ರೋಶ

ತುಮಕೂರಿನಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ

255

Get real time updates directly on you device, subscribe now.

ತುಮಕೂರು: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿದ ಎಂಇಎಸ್‌ ಪುಂಡಾಟಿಕೆ ವಿರುದ್ಧ ಜಿಲ್ಲೆಯ ಎಲ್ಲ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಟೌನ್ ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರ ಪ್ರತಿಕೃತಿ ದಹಿಸಿ, ಈ ಸಂಘಟನೆಯ ಪುಂಡಾಟಿಕೆ ವಿರುದ್ಧ ಆಕ್ರೋಶ ಹೊರ ಹಾಕಿದರು.
ಪ್ರತಿ ವರ್ಷ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲಿಯೇ ಎಂಇಎಸ್‌ ಕಾರ್ಯಕರ್ತರು ಪುಂಡಾಟಿಕೆ ಮೆರೆಯುತ್ತ ಬಂದಿದ್ದಾರೆ. ಇವರ ಈ ವರ್ತನೆಗೆ ರಾಜ್ಯ ಸರ್ಕಾರ ಕೂಡಲೇ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಕನ್ನಡಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಎಸ್‌. ಶಂಕರ್‌ ಮಾತನಾಡಿ, ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಭಗ್ನಗೊಳಿಸಿರುವ ಎಂಇಎಸ್‌ ಸಂಘಟನೆ ನಿಷೇಧಿಸುವ ಜತೆಗೆ ಅವರನ್ನು ಗಡಿಪಾರು ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಕನ್ನಡ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ರಘುರಾಮ್‌ ಮಾತನಾಡಿ, ರಾಜ್ಯದಲ್ಲಿ ಎಂಇಎಸ್‌ ಸಂಘಟನೆ ಸಂಪೂರ್ಣವಾಗಿ ನಿಷೇಧ ಮಾಡಬೇಕು. ಸುವರ್ಣಸೌಧದ ಮುಂದೆ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ನಿರ್ಮಾಣವಾಗಬೇಕು, ಅಲ್ಲಿಯವರೆಗೆ ಕನ್ನಡಿಗರ ಹೋರಾಟ ನಿಲ್ಲುವುದಿಲ್ಲ, ನಾವು ಮುಂದಿಟ್ಟಿರುವ ಹೆಜ್ಜೆ ಹಿಂದೆ ತೆಗೆಯುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಬೆಳಗಾವಿ 7 ಕೋಟಿ ಕನ್ನಡಿಗರ ಸ್ವತ್ತು, ಸರ್ಕಾರದ ಎಲ್ಲ ಸವಲತ್ತು ಪಡೆದಿರುವ ಎಂಇಎಸ್‌ ಕಾರ್ಯಕರ್ತರ ಈ ರೀತಿಯ ಪುಂಡಾಟಿಕೆ ಸಹಿಸಲು ಸಾಧ್ಯವಿಲ್ಲ ಎಂದರು.
ಕನ್ನಡ ಪರ ಸಂಘಟನೆಯ ಮುಖಂಡ ಧನಿಯಾಕುಮಾರ್‌ ಮಾತನಾಡಿ, ರಾಜ್ಯದಲ್ಲಿ ಎಂಇಎಸ್‌ ಸಂಘಟನೆ ನಿಷೇಧ ಮಾಡಲೇಬೇಕು, ಜೊತೆಗೆ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿರುವ ಆರೋಪಿಗಳನ್ನು ಬಂಧಿಸಿ, ಕೂಡಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್‌.ಸುರೇಶ್‌ ಮಾತನಾಡಿ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಇಲ್ಲಿ ಎಂಇಎಸ್‌ ಕಾರ್ಯಕರ್ತರ ಪುಂಡಾಟಿಕೆ ಮಿತಿ ಮೀರಿದೆ, ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಬೇಕು, ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿರುವುದು ಖಂಡನೀಯ ಎಂದರು.
ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುವ ಪ್ರತಿ ಬಾರಿಯೂ ಎಂಇಎಸ್‌ ಕಾರ್ಯಕರ್ತರು ಇದೇ ರೀತಿಯ ಪುಂಡಾಟಿಕೆ ಮಾಡುತ್ತಿದ್ದಾರೆ, ಈ ಸಂಘಟನೆಯ ಕಾರ್ಯಕರ್ತರು ಪುಂಡಾಟಿಕೆ ರಾಜ್ಯ ಸರ್ಕಾರ ಪುಲ್ ಸ್ಟಾಪ್‌ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕುರುಬರ ಸಂಘಟನೆ ವತಿಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆಯ ಅರುಣ್‌ಕುಮಾರ್‌, ಕನ್ನಡ ವಿಜಯ ಸೇನೆಯ ಅಧ್ಯಕ್ಷ ಸುಧೀರ್‌, ಗೌರವಾಧ್ಯಕ್ಷ ಮಹದೇವಣ್ಣ, ಕರವೇ ಆನಂದ್‌, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ರಾಜಣ್ಣ, ಟಿ.ಆರ್‌.ಸುರೇಶ್‌, ಸೋಮಶೇಖರ್‌, ಗಿರೀಶ್ ಗೌಡ, ಪ್ರಸನ್ನ, ಯಲ್ಲೇಶ್ ಗೌಡ, ಪ್ರಕಾಶ್‌, ಸಂಗೋಳಿ ರಾಯಣ್ಣ ವೇದಿಕೆಯ ರಮೇಶ್‌, ರಾಜು, ರಘುರಾಮ್‌, ಭಾಗ್ಯಲಕ್ಷ್ಮಿ, ಸುಕನ್ಯ, ಎನ್‌.ರಾಜು, ಯೋಗೀಶ್‌, ಗೂಳೂರು ರಾಜಣ್ಣ, ಡಮರುಗ ಉಮೇಶ್‌ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!