ತುಮಕೂರು: ವಿಧಾನಪರಿಷತ್ ಚುನಾವಣೆಯಲ್ಲಿ ರಾಜೇಂದ್ರ ಅವರ ಗೆಲುವು ಜಾತ್ಯತೀತತೆಯ ಗೆಲುವಾಗಿದ್ದು, ಎಲ್ಲಾ ಜಾತಿ ವರ್ಗದವರು ಅದರಲ್ಲೂ ಹಿಂದುಳಿದ, ದಲಿತ, ಅಲ್ಪಸಂಖ್ಯಾತರು ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.
ನಗರದ ಪ್ರಗತಿ ಬಡಾವಣೆಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದಿಂದ ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾದ ನೂತನ ಎಂಎಲ್‌ಸಿ ಆರ್.ರಾಜೇಂದ್ರ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದುಳಿದ ವರ್ಗಗಳ ನಾಯಕರು ಬರೀ ಚುನಾವಣೆ ಬಂದಾಗ ಮಾತ್ರ ನಮ್ಮ ಬಳಿ ಬರುತ್ತಾರೆ, ನಂತರ ದೂರಾಗುತ್ತಾರೆ ಎಂಬ ದೂರಿದೆ, ಪ್ರಸ್ತುತ ಚುನಾವಣೆಯಲ್ಲಿ ಹಳ್ಳಿ ಹಳ್ಳಿಗೆ ತೆರಳಿ ರಾಜೇಂದ್ರ ಗೆಲುವಿಗೆ ಶ್ರಮಿಸಿರುವ ಹಿಂದುಳಿದ ವರ್ಗದ ನಾಯಕರು ಮುಂದೆಯೂ ಅದೇ ವಿಶ್ವಾಸ, ಸಂಪರ್ಕವನ್ನು ಗ್ರಾಮೀಣರೊಂದಿಗೆ ಇಟ್ಟುಕೊಂಡು ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಿದೆಎಂದರು.
ರಾಜಕೀಯ ಅಧಿಕಾರಕ್ಕಿಂತ ಪ್ರಬಲ ಅಸ್ತ್ರ ಮತ್ತೊಂದಿಲ್ಲ, ಹಿಂದುಳಿದ ವರ್ಗದವರು ರಾಜಕೀಯವಾಗಿ ಯಾವುದೇ ಪಕ್ಷದಲ್ಲಿದ್ದರೂ ಅಧಿಕಾರ ಸ್ಥಾನಕ್ಕೇರುವುದು ಅವಶ್ಯಕವಾಗಿದೆ, ಸಿ.ಎನ್.ಭಾಸ್ಕರಪ್ಪ ಸಂಸದರಾಗಿ ಆಯ್ಕೆಯಾಗಿದ್ದು, ಹಿಂದುಳಿದ ವರ್ಗದವರು ಯಾವುದೇ ಅಧಿಕಾರಸ್ಥಾನ ಹಿಡಿಯಬಹುದು ಎಂಬುದರ ಧ್ಯೋತಕ, ಅಧಿಕಾರ ಸಿಕ್ಕಾಗ ಧ್ವನಿ ಇಲ್ಲದವರು, ಅಸಹಾಯಕರಾಗಿ ಜಾತ್ಯತೀತವಾಗಿ ನೆರವಾಗುವ ಕಾರ್ಯ ಮಾಡಬೇಕು ಎಂದರು.
ಹಿಂದುಳಿದವರು, ದಲಿತರು ನಾವು ಕೆಳವರ್ಗದವರೆಂಬ ಕೀಳರಿಮೆ ಬಿಡಬೇಕು, ಸಮಾನತೆಯ ಸಂವಿಧಾನ ಒಪ್ಪಿಕೊಂಡ ಮೇಲೆ ಮೇಲ್ವರ್ಗ ಕೆಳವರ್ಗ ಎಂಬುದಿಲ್ಲ, ಹಿಂದುಳಿದವರು ಮುಂದುವರೆದವರಷ್ಟೇ ಈ ಸಮಾಜದಲ್ಲಿರುವುದು ಎಂದು ಹೇಳಿ ಹಿಂದುಳಿದ ವರ್ಗಗಳ ಒಕ್ಕೂಟ ನಡೆಸುತ್ತಿರುವ ಕಾರ್ಯಚಟುವಟಿಕೆ, ಸಂಘಟನೆ ಉತ್ತಮವಾಗಿದ್ದು, 2ನೇ ಹಂತದ ನಾಯಕತ್ವ ಹಿಂದುಳಿದ ವರ್ಗಗಳಲ್ಲಿ ಬೆಳೆಯಬೇಕಿದೆ ಎಂದು ಆಶಿಸಿದರು.
ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಮಾತನಾಡಿ ರಾಜಣ್ಣ ಅವರು ಜಿಲ್ಲೆ, ರಾಜ್ಯಕ್ಕೆ ತಮ್ಮ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ, ಅವರು ಸಂಸದರಾಗಿ ಕೇಂದ್ರ ಸಚಿವರಾದರೆ ಸಹಕಾರ ಕ್ಷೇತ್ರವನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸುತ್ತಾರೆ, ರಾಜಣ್ಣ ಅವರಂತೆಯೇ ಅವರ ಪುತ್ರ ರಾಜೇಂದ್ರ ಜನಪರ ಕಾಳಜಿ ಹೊಂದಿದ್ದು, ಅವರ ಗೆಲುವು ಹಿಂದುಳಿದ ವರ್ಗಕ್ಕೆ ಪರ್ವ ಕಾಲ, ಈ ಸಮಯ ಸದ್ಬಳಕೆ ಮಾಡಿ ಮುಂಬರುವ ಚುನಾವಣೆಯಲ್ಲೂ ಹಿಂದುಳಿದ ವರ್ಗಗಳ ರಾಜಕೀಯ ಶಕ್ತಿ ಹೆಚ್ಚಿಸಬೇಕಿದೆ, ಹಿಂದುಳಿದ ವರ್ಗಗಳ ಒಕ್ಕೂಟದ ಟಿ.ಎನ್.ಮಧುಕರ್, ಧನಿಯಾಕುಮಾರ್, ರಾಜಣ್ಣ, ಕೆಂಪರಾಜು, ಚಂದ್ರಶೇಖರಗೌಡ, ಡಿ.ಎಂ.ಸತೀಶ್, ಶಾಂತಕುಮಾರ್ ಮತ್ತಿತರರು ಜಿಲ್ಲೆಯಾದ್ಯಂತೆ ಸಂಘಟನೆಗೆ ಶ್ರಮಿಸುತ್ತಿದ್ದು, ಎಲ್ಲರನ್ನು ತಲುಪುವ ಕಾರ್ಯ ಆಗಬೇಕು ಎಂದರು.
ಜಾತ್ಯತೀತ ಮಾನವ ವೇದಿಕೆಯ ಟಿ.ಆರ್.ಆಂಜಿನಪ್ಪ ಮಾತನಾಡಿ, ರಾಜೇಂದ್ರ ಗೆಲುವು ಒಂದು ದೊಡ್ಡ ಹೋರಾಟವೇ ಸರಿ, ಸಿದ್ದರಾಮಯ್ಯ ಅವರ ಬಿಟ್ಟರೆ ಹಿಂದುಳಿದ ವರ್ಗದ ನಾಯಕರೆಂದು ಗುರುತಿಸಲ್ಪಡುವವರು ಇಲ್ಲ, ರಾಜಣ್ಣ ಅವರಿಗೆ ಆ ಶಕ್ತಿ ಇದೆ ಎಂದರು.
ಒಕ್ಕೂಟದ ಜಿಲ್ಲಾ ಸಂಚಾಲಕ ಟಿ.ಎಚ್.ಧನಿಯಾಕುಮಾರ್ ಮಾತನಾಡಿ ರಾಜೇಂದ್ರ ಅವರ ಗೆಲುವು ಹಿಂದುಳಿದ ವರ್ಗಗಳಲ್ಲಿ ಶಕ್ತಿ ತುಂಬಿದ್ದು, ಮೇಲ್ಮನೆಯಲ್ಲಿ ಗೆಲುವು ಸಾಧಿಸಿದಂತೆ ಇತರೆ ಸ್ಥಳೀಯ ಸಂಸ್ಥೆಗಳಲ್ಲೂ ಗೆಲುವು ಸಾಧಿಸಲು ಪೂರಕವೆನಿಸಿದೆ ಎಂದರು.
ಉಪನ್ಯಾಸಕ ಮಹಾಲಿಂಗೇಶ್ ಮಾತನಾಡಿ ರಾಜೇಂದ್ರ ಅವರು ವಿಧಾನಪರಿಷತ್ ಸದಸ್ಯರಾಗಿ ಮೇಲ್ಮನೆಗೆ ಆಯ್ಕೆಯಾಗಿರುವುದು ಖುಷಿಯ ಸಂಗತಿ, ನಾನು ಎಂಎಲ್ಸಿಯೆಂದು ಪರಿಭಾವಿಸದೆ ಜನರ ಪ್ರಧಾನ ಸೇವಕರೆಂದು ಭಾವಿಸಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಕಾರ್ಯ ಮಾಡಿ, ರಾಜಣ್ಣ ಅವರು ಮಾಡುತ್ತಿದ್ದ ಕಾರ್ಯಕ್ಕಿಂತ ಹೆಚ್ಚಾಗಿ ಜನಪರವಾಗಿದ್ದಾಗ ನೀವು ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತೀರಿ ಎಂದು ಆಶಿಸಿದರು.
ಅಭಿನಂದನೆ ಸ್ವೀಕರಿಸಿದ ವಿಧಾನ ಪರಿಷತ್ ನೂತನ ಸದಸ್ಯ ಆರ್.ರಾಜೇಂದ್ರ ಮಾತನಾಡಿ ಮೇಲ್ಮನೆಗೆ ಆಯ್ಕೆಯಾಗಿರುವುದಕ್ಕೆ ಹಿಂದುಳಿದ ವರ್ಗಗಳ ಒಕ್ಕೂಟದವರು ಕರೆದು ಸನ್ಮಾನಿಸುವ ಮೂಲಕ ನನ್ನ ಜವಾಬ್ದಾರಿ ಹೆಚ್ಚಿಸಿದ್ದಾರೆ, ಪಕ್ಷಾತೀತ, ಜಾತ್ಯಾತೀತವಾಗಿ ನನ್ನ ಗೆಲುವಿಗೆ ಎಲ್ಲಾ ಸಮಾಜದ ಮುಖಂಡರು ಸ್ವಪ್ರೇರಣೆಯಿಂದ ಶ್ರಮಿಸಿದ್ದು ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಹಿಂದುಳಿದ ವರ್ಗಗಳು ನನ್ನ ಮೇಲೆ ಇಟ್ಟಿರುವ ನಿರೀಕ್ಷೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ನಿಮ್ಮ ಬೆಂಬಲಕ್ಕೆ ಸದಾ ನಿಲ್ಲುವೆ ಎಂದರು.
ಮುಖಂಡರಾದ ಟಿ.ಎನ್.ಮಧುಕರ್, ಆರ್.ಎ.ಸುರೇಶ್ ಕುಮಾರ್, ಚಂದ್ರಶೇಖರಗೌಡ, ಶಾಂತಕುಮಾರ್, ಕೆಂಪರಾಜು, ಡಿ.ಎಂ.ಸತೀಶ್, ರೂಪೇಶ್ ಕೃಷ್ಣಯ್ಯ, ಟಿ.ಆರ್.ಸುರೇಶ್, ಶಶಿ ಹುಲಿಕುಂಠೆಮಟ್, ಧರ್ಮರಾಜ್, ಸುನೀತಾ ನಟರಾಜ್, ಮಹದೇವ್, ಕಲ್ಲಪ್ಪ, ಪೊ.ಪರಶುರಾಮ್, ಯೋಗೇಶ್, ಡಾ.ಶಾಂತಕುಮಾರ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಪಾಲ್ಗೊಂಡರು.
ರಾಜೇಂದ್ರರದ್ದು ಜಾತ್ಯತೀತತೆಯ ಗೆಲುವು
Get real time updates directly on you device, subscribe now.
Prev Post
Next Post
Comments are closed.