ರಾಜಕಾರಣಿಗಳಿಂದ ಗುತ್ತಿಗೆದಾರರಿಗೆ ಸಂಕಷ್ಟ

ಭ್ರಷ್ಟಾಚಾರಕ್ಕೆ ಜನಪ್ರತಿನಿಧಿಗಳಿಂದಲೇ ಕುಮ್ಮಕ್ಕು: ವೇಣುಗೋಪಾಲ್

137

Get real time updates directly on you device, subscribe now.

ತುಮಕೂರು: ಜನಪ್ರತಿನಿಧಿಗಳು, ರಾಜಕಾರಣಿಗಳು, ಟೆಂಡರ್ ಕಾಮಗಾರಿಗಳಲ್ಲಿ ಶಾಮೀಲಾಗುತ್ತಿರುವುದರಿಂದ ಗುತ್ತಿದಾರರು ಸಮಸ್ಯೆಗೆ ಸಿಲುಕಿದ್ದಾರೆ ಎಂದು ತುಮಕೂರು ತಾಲ್ಲೂಕು ಗುತ್ತಿಗೆದಾರ ಸಂಘದ ಅಧ್ಯಕ್ಷ ವೈ.ಆರ್.ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲಾ ಗುತ್ತಿಗೆದಾರರ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಮಂಡಳಿಯಲ್ಲಿ ನಡೆದ ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿ, ರಾಜಕಾರಣಿ ಮತ್ತು ಜನಪ್ರತಿನಿಧಿಗಳು ಇಂತಹವರಿಗೆ ಟೆಂಡರ್ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡುತ್ತಿದ್ದು, ಅಧಿಕಾರಿಗಳು ರಾಜಕಾರಣಿಗಳ ಮಾತಿಗೆ ಮನ್ನಣೆ ನೀಡಿ ನಿಯಮ ಉಲ್ಲಂಘಿಸಿ ಟೆಂಡರ್ ನೀಡುತ್ತಿದ್ದಾರೆ ಎಂದು ದೂರಿದರು.
ಲೋಕೋಪಯೋಗಿ ಇಲಾಖೆ ತುಮಕೂರು ವಿಭಾಗದಲ್ಲಿ ನಡೆದಿರುವ ಕಾಮಗಾರಿಗಳು ಮತ್ತು ಟೆಂಡರ್ ಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುತ್ತಿದ್ದು, ರಾಜಕಾರಣಿಗಳು ತಪ್ಪಿಗೆ ಸಿಕ್ಕಿಕೊಳ್ಳುವುದಿಲ್ಲ, ಅವರ ಮಾತಿಗೆ ಮನ್ನಣೆ ನೀಡಿ ಅಧಿಕಾರಿಗಳು ಜೈಲಿಗೆ ಹೋಗುತ್ತಿದ್ದಾರೆ, ಭ್ರಷ್ಟಾಚಾರಕ್ಕೆ ಜನಪ್ರತಿನಿಧಿಗಳೇ ಕುಮ್ಮಕ್ಕು ನೀಡುತ್ತಿರುವುದರಿಂದ ಶೇ. 40ಕ್ಕೆ ಹೋಗಿದೆ ಎಂದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲು ಸ್ಥಳೀಯರಿಗೆ ಅವಕಾಶ ನೀಡಲಿಲ್ಲ, ಜನಪ್ರತಿನಿಧಿಗಳನ್ನು ಕೇಳಿದರೆ ನಮ್ಮ ನೆರವಿಗೆ ಬರಲಿಲ್ಲ, ಬೇರೆಯವರ ಅಡಿಯಲ್ಲಿ ನೋಂದಾಯಿತ ಗುತ್ತಿಗೆದಾರರು ಉಪ ಗುತ್ತಿಗೆ ಪಡೆದು ಕೆಲಸ ಮಾಡಿಕೊಂಡು ಜೀವನ ನಡೆಸಬೇಕಿದೆ, ಉತ್ತಮ ಕೆಲಸಕ್ಕೆ ಅವಕಾಶ ನೀಡಲಿಲ್ಲ, ಗುತ್ತಿಗೆದಾರರು ಒಗ್ಗಟ್ಟಾದರೆ ಮಾತ್ರ ಕೆಲಸ ಮಾಡಲು ಸಾಧ್ಯ ಎಂದರು.
ಅಧಿಕಾರಿಗಳ ಮೇಲೆ ರಾಜಕಾರಣಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ, ಹೋರಾಟ ಮತ್ತು ಸಂಘಟನೆ ಮಾಡದೇ ಹೋದರೆ ಗುತ್ತಿಗೆದಾರರ ವೃತ್ತಿ ನಿರ್ವಹಿಸಲು ಸಾಧ್ಯವಿಲ್ಲ, ಶೇ.40 ರಷ್ಟು ಕಮೀಷನ್ಗೆ ಪರಿಹಾರ ಸಿಗದೆ ಇದ್ದರೆ ಕುಟುಂಬದೊಂದಿಗೆ ಪ್ರತಿಭಟನೆ ನಡೆಸಬೇಕಿರುವುದು ಅನಿವಾರ್ಯವಾಗಿದ್ದು, ಜಿಲ್ಲೆಯಿಂದ 10 ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಬೇಕು ಎಂದು ಹೇಳಿದರು.
ಗುತ್ತಿಗೆದಾರ ವೆಂಕಟಗಿರಿಯಪ್ಪ ಮಾತನಾಡಿ, ಬೇಕಾದವರಿಗೆ ಟೆಂಡರ್ ನೀಡಲು ಬೇಕಾಬಿಟ್ಟಿ ನಿಯಮಗಳನ್ನು ರೂಪಿಸಲಾಗುತ್ತಿದೆ, ಲೈನ್ ಆಫ್ ಕ್ರೆಡಿಟ್ ತೆಗೆಯಬೇಕು, ಸಿಮಿಲರ್ ನೇಚರ್ ಆಫ್ ವರ್ಕ್ ಎನ್ನುವುದು ಮೂರ್ಖತನ, ಒಂದು ಬಾರಿ ಕಾಮಗಾರಿ ನಿರ್ವಹಿಸಿದ ಅನುಭವವನ್ನು ಮುಂದಿನ ವರ್ಷಕ್ಕೆ ನೆರವಿಗೆ ಬರುವುದಿಲ್ಲ ಎನ್ನುವಂತಹ ಅವೈಜ್ಞಾನಿಕ ನಿಯಮಗಳನ್ನು ಜಾರಿಗೆ ತಂದಿದ್ದು, ಇಂತಹ ನಿಯಮಗಳನ್ನು ನಿಲ್ಲಿಸಬೇಕು ಎಂದು ಹೇಳಿದರು.
ಟೆಂಡರ್ ಗಳಲ್ಲಿ ಶಾಸಕರು, ಸಂಸದರ ಮಧ್ಯ ಪ್ರವೇಶ ನಿಲ್ಲಬೇಕು, ದೌರ್ಜನ್ಯಯುತವಾಗಿ ಟೆಂಡರ್ ಅಂತಿಮ ಪದ್ಧತಿ ಕೊನೆಗಾಣಿಸಬೇಕು, ಶ್ರೇಣಿಕೃತವಾಗಿ ಅನುದಾನ ನೀಡಬೇಕು ಹಾಗೂ ಸಾವನ್ನಪ್ಪಿದ ಗುತ್ತಿಗೆದಾರರಿಗೆ ನೀಡುತ್ತಿದ್ದ ಸಿಬಿಎಫ್ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕಾಮಗಾರಿಗಳಲ್ಲಿ ಶೇ.40ರಷ್ಟು ಮೀರಿ ಭ್ರಷ್ಟಾಚಾರ ನಡೆಯುತ್ತಿರುವುದು ಸತ್ಯ, ಹೀಗೆ ಮುಂದುವರೆದರೆ ಗುತ್ತಿಗೆದಾರರು ಜೀವನ ನಡೆಸುವುದು ಕಷ್ಟ, ಗುತ್ತಿಗೆದಾರರ ಮೇಲೆ ವಿಧಿಸಿರುವ ಶೇ. 17 ರಷ್ಟು ಜಿಎಸ್ ಟಿ ಕಟ್ಟುವುದನ್ನು ಹಿಂಪಡೆಯಬೇಕು, ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಬೇಕು, ಸರ್ಕಾರವೇ ಕಾಮಗಾರಿಗೆ ಕನಿಷ್ಠ ಮೊತ್ತ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಕೆಆರ್ ಐಡಿಎಲ್, ನಿರ್ಮಿತಿ ಸೇರಿದಂತೆ ಸರ್ಕಾರಿ ಸಂಸ್ಥೆಗಳಲ್ಲಿ ಪ್ಯಾಕೇಜ್ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶ ನೀಡುತ್ತಿದ್ದು, ಇಪಿಎಫ್ ಗುತ್ತಿಗೆದಾರರಿಗೆ ಅನ್ವಯಿಸದೇ ಇದ್ದರೂ ಭದ್ರಾ ಮೇಲ್ದಂಡೆಯಲ್ಲಿ ಇಪಿಎಫ್ ಕೇಳುತ್ತಿರುವುದು ಸರಿಯಲ್ಲ ಇಂತಹ ಪದ್ಧತಿ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ನಿವೃತ್ತ ಇಂಜನಿಯರ್, ಸೂಪರಿಡೆಂಟ್ ಇಂಜನಿಯರ್ ಮಕ್ಕಳು ನೋಂದಾಯಿಸಿಕೊಂಡು ಕಪ್ಪುಹಣವನ್ನು ವೈಟ್ ಮನಿ ಮಾಡಿಕೊಳ್ಳುವುದಕ್ಕೆ ಶೇ.35 ರಷ್ಟು ಕಡಿಮೆ ಹಣಕ್ಕೆ ಕಾಮಗಾರಿ ಮಾಡುತ್ತಿದ್ದಾರೆ, ಜನಪ್ರತಿನಿಧಿಗಳು ಸಹ ಇಂತಹವರಿಗೆ ನೆರವಾಗಿದ್ದಾರೆ, ಲೋಕಾಯುಕ್ತ, ಎಸಿಬಿ ಸಂಸ್ಥೆಗಳು ನಿವೃತ್ತ ಅಧಿಕಾರಿಗಳ ಮೇಲೆಯೂ ನಿಗಾವಹಿಸಬೇಕು, ಅಂತಹ ಗುತ್ತಿಗೆದಾರರನ್ನು ಕಚೇರಿಗೆ ಬಿಟ್ಟುಕೊಳ್ಳಬಾರದು ಎಂದು ಆಗ್ರಹಿಸಿದರು.
ಸಭೆಯಲ್ಲಿ ಗುತ್ತಿಗೆದಾರರಾದ ಟಿ.ಎಲ್.ಅಶೋಕ್, ರಘುನಂದನ್. ಆರ್.ಸಿ, ನಾರಾಯಣಪ್ಪ, ನಿರಂಜನ, ರವೀಶಯ್ಯ, ಪ್ರಸಾದ್, ಕೋದಂಡರಾಮು, ಬಸವರಾಜು ಸೇರಿದಂತೆ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!