ಪ್ರೇಕ್ಷಕರಿಂದಲೇ ರಂಗಭೂಮಿಯ ಉಳಿವು: ರಾಜಾರಾಮ್

803

Get real time updates directly on you device, subscribe now.

ತುಮಕೂರು: ಸರಕಾರದ ಆಶ್ರಯಕ್ಕಿಂತ ಜನರು ನೀಡುವ ದೇಣಿಗೆಯಿಂದ ರಂಗಭೂಮಿ ನಡೆಯುವಂತಾಗಬೇಕು ಎಂದು ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಹಾಗೂ ನಾಟಕಕಾರ ಡಾ.ಬಿ.ವಿ.ರಾಜಾರಾಮ್ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕಮನೆಯಿಂದ ಭಾರತ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಐದು ದಿನಗಳ ನಾಟಕಮನೆ ರಂಗೋತ್ಸವ- 2021ಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಈ ಹಿಂದೆ ರಾಜಾಶ್ರಯಗಳಲ್ಲಿ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮ ಜರುಗತ್ತಿದ್ದವು, ಕಾಲ ಬದಲಾದಂತೆ ಸರಕಾರದ ಆಶ್ರಯ ಬಯಸಿವೆ, ಆದರೆ ಪ್ರೇಕ್ಷಕರೇ ಹಣ ನೀಡಿ ನಾಟಕ ನೋಡುವಂತಾದರೆ ರಂಗಭೂಮಿಯನ್ನು ಮತ್ತೊಂದು ದಿಕ್ಕಿಗೆ ತೆಗೆದುಕೊಂಡು ಹೋಗಲು ಸಾಧ್ಯವೆಂದರು.
ನಾಟಕಮನೆ ಮಹಾಲಿಂಗು ಕಳೆದ 30 ವರ್ಷಗಳಿಂದ ತನ್ನನ್ನು ಸಂಪೂರ್ಣವಾಗಿ ರಂಗಭೂಮಿಗೆ ತೊಡಗಿಸಿಕೊಂಡವರು, ನಾಟಕಮನೆಯ ಮೂಲಕ ಹೊಸ ಕಲಾವಿದರು, ತಂತ್ರಜ್ಞರನ್ನು ರಂಗಭೂಮಿಗೆ ನೀಡಿದವರು. ಅವರ ಆಶಯದಂತೆ ನಿರ್ಮಾಣ ವಾಗಬೇಕಿದ್ದ ರಂಗವೇದಿಕೆ ಅರ್ಧಕ್ಕೆ ನಿಂತಿದೆ.ಅದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ತುಮಕೂರಿನ ಸಹೃದಯ ಪ್ರೇಕಕ್ಷರು ಮುಂದೆ ಬರಬೇಕಿದೆ ಎಂದು ಡಾ.ಬಿ.ವಿ.ರಾಜಾರಾಮ್ ಕರೆ ನೀಡಿದರು.
ರಂಗಭೂಮಿ ಎಂಬುದು ಹರಿಯುವ ನೀರಿದ್ದಂತೆ, ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು ಕಲಿಯುತ್ತಾ ಮುಂದಿನ ಪೀಳಿಗೆಗೆ ವರ್ಗಾಯಿಸುತ್ತಾರೆ. ಇಂದು ನಾಟಕ ಕಲಿಕೆಗೆ ಅವಕಾಶಗಳು ಹೆಚ್ಚು ,ಕೋರೋನಗೂ ಮುನ್ನ ಬೆಂಗಳೂರು ನಗರ ಒಂದರಲ್ಲಿ ಸುಮಾರು 1 ಸಾವಿರ ತರಬೇತಿ ಶಿಬಿರಗಳು ವರ್ಷಕ್ಕೆ ನಡೆಯುತ್ತಿದ್ದವು. ಮಹಾಮಾರಿಯಿಂದಾಗಿ, ರಂಗಭೂಮಿಯಿಂದಲೇ ಬದುಕು ಕಟ್ಟಿಕೊಳ್ಳಬೇಕೆಂಬ ಹಂಬಲವಿರುವವರಿಗೆ ದೊಡ್ಡ ಹೊಡೆತ ಬಿದ್ದಿದೆ.ಮನುಷ್ಯ ಮತ್ತು ಸಮಾಜವನ್ನು ತಿದ್ದುವ, ರಂಗಭೂಮಿ ಮತ್ತು ಸಾಹಿತ್ಯ ಎರಡು ಜೊತೆ ಜೊತೆಯಾಗಿ ಸಾಗಬೇಕಿದೆ ಎಂದರು.
ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಪೌರಾಣಿಕ ನಾಟಕಗಳಿಗೆ ಹೊಲಿಕೆ ಮಾಡಿದರೆ,ಸಾಮಾಜಿಕ ನಾಟಕಗಳ ರಂಗಪ್ರಯೋಗಕ್ಕೆ ಪ್ರೇಕ್ಷಕರ ಕೊರತೆ ಇದೆ. ಇದು ಇಂದು ನಿನ್ನೆಯದಲ್ಲ. ಟಿ.ಪಿ.ಕೈಲಾಸಂ ಕಾಲದಿಂದಲೂ ಇರುವಂತಹದ್ದೇ, ಎಲ್ಲವೂ ಬಂಡವಾಳದ ಮೇಲೆಯೇ ಅವಲಂಭಿತವಾಗಿರುವಂತಹ ಸಂದರ್ಭದಲ್ಲಿ ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದ ನಾಟಕಮನೆಯ ಈ ಐದು ದಿನಗಳ ನಾಟಕೋತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ನಾಟಕ ಸಂಸ್ಥೆಗಳು ಉಳಿದು, ಬೆಳೆಯಬೇಕಾದರೆ ಪ್ರೇಕ್ಷಕ ಕನಿಷ್ಠ ಶುಲ್ಕು ನೀಡಿ ನೋಡುವಂತಹ ಸ್ಥಿತಿ ನಿರ್ಮಾಣವಾಗಬೇಕು.ಆ ನಿಟ್ಟಿನಲ್ಲಿ ಸಾಂಸ್ಕೃತಿಕ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಿದೆ. ಅರ್ಧಕ್ಕೆ ನಿಂತಿರುವ ನಾಟಕಮನೆ ರಂಗಮಂದಿರ ನಿರ್ಮಾಣವನ್ನು ಪೂರ್ಣಗೊಳಿಸಲು ತುಮಕೂರಿನ ಜನತೆ ತಮ್ಮ ಕೈಲಾದ ಸಹಾಯ ನೀಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಾ ಪೋಷಕ ಸಿ.ವಿ.ಮಹದೇವಯ್ಯ ಮಾತನಾಡಿ, ನಾಟಕಮನೆ ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ರಂಗಚಟುವಟಿಕೆಯಲ್ಲಿ ತೊಡಗಿಕೊಂಡಿದೆ. ಇವರ ಆಶಯ ಈಡೇರುವಂತಾಗಬೇಕು. ಈ ನಿಟ್ಟಿನಲ್ಲಿ ಕಲಾವಿದರು, ಕಲಾಸಕ್ತರು ಮುಂದೆ ಬರಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಂಗಕರ್ಮಿ ಮೆಳೇಹಳ್ಳಿ ದೇವರಾಜು, ಹಳ್ಳಿಯಿಂದ ದಿಲ್ಲಿಗೆ ಎಂಬ ಮಹದಾಸೆಯೊಂದಿಗೆ ನಾಟಕಮನೆ ಕೆಲಸ ಮಾಡುತ್ತಿದೆ. ನೂರಾರು ಕಲಾವಿದರು, ತಂತ್ರಜ್ಞರನ್ನು ರಂಗಭೂಮಿಗೆ ನೀಡಿದೆ. ಕಳೆದ ಎರಡು ವರ್ಷಗಳಿಂದ ಕಲಾವಿದರನ್ನು ಮುಟ್ಟಿಸಿಕೊಳ್ಳುವುದು ಕಷ್ಟ ಎಂಬತಹ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಕೊಡವಿ ಮೇಲೇಳುವ ನಿಟ್ಟಿನಲ್ಲಿ ಈ ಐದು ದಿನಗಳ ನಾಟಕಮನೆ ರಂಗೋತ್ಸವ-2021ನ್ನು ಆಯೋಜಿಸಲಾಗಿದೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಆಸ್ವಾದಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ನಾಟಕಮನೆ ಸದಸ್ಯರಾದ ನಾಗರಾಜರಾವ್, ನಾಟಕಮನೆಯ ಸಂಚಾಲಕ ಎನ್.ಆರ್.ಪ್ರಕಾಶ್, ನಾಟಕಮನೆಯ ಕಾರ್ಯನಿರ್ವಾಹಕ ಟ್ರಸ್ಟಿ ನಾಟಕಮನೆ ಮಹಾಲಿಂಗು ಮತ್ತಿತರರು ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ನಂತರ ರಾಜೇಂದ್ರ ಕಾರಂತ ರಚಿಸಿರುವ ಮಂಜು ಸಿರಿಗೇರಿ ಅವರು ನಿರ್ದೇಶಿಸಿರುವ ಮುದ್ದಣ್ಣನ ಪ್ರಮೋಷನ್ ಪ್ರಸಂಗ ವೈನೋದಿಕ ಹಾಸ್ಯ ನಾಟಕ ಪ್ರದರ್ಶನಗೊಂಡಿತ್ತು.

Get real time updates directly on you device, subscribe now.

Comments are closed.

error: Content is protected !!