ಮೂಲ ಸೌಕರ್ಯಕ್ಕೆ ಪ್ರಥಮ ಆದ್ಯತೆ: ಅಂಜನ್ ಕುಮಾರ್

233

Get real time updates directly on you device, subscribe now.

ತುರುವೇಕೆರೆ: ವೇಗವಾಗಿ ಬೆಳೆಯುತ್ತಿರುವ ಪಟ್ಟಣದ ಅಗತ್ಯಕ್ಕನುಗುಣವಾಗಿ ಮೂಲ ಸೌಕರ್ಯ ಒದಗಿಸಲು ಪ್ರಥಮ ಆದ್ಯತೆ ನೀಡಲಾಗುತ್ತಿದೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ಅಂಜನ್ ಕುಮಾರ್ ತಿಳಿಸಿದರು.
ಪಟ್ಟಣ ಪಂಚಾಯತ್ ಆವರಣದಲ್ಲಿ ನೂತನ ಜೆಸಿಬಿ, ಕಸ ಸಂಗ್ರಹಣಾ ವಾಹನಗಳು ಹಾಗೂ ಚಿರಶಾಂತಿ ವಾಹನವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಮಾತನಾಡಿ, ಪಟ್ಟಣ ಪಂಚಾಯತ್ ವ್ಯಾಪ್ತಿಯ ಖಾಲಿ ನಿವೇಶನಗಳಲ್ಲಿ ಗಿಡ ಗೆಂಟೆ ಬೆಳೆದು ಅನೈರ್ಮಲ್ಯಕ್ಕೆ ಕಾರಣವಾಗಿವೆ, ಈ ಹಿನ್ನಲೆಯಲ್ಲಿ ನಿವೇಶನಗಳ ಮಾಲೀಕರು ಸ್ವಚ್ಛಗೊಳಿಸಬೇಕಿದೆ. ಇಲ್ಲವಾದಲ್ಲಿ ಪಟ್ಟಣ ಪಂಚಾಯತ್ ವತಿಯಿಂದ ಸ್ವಚ್ಛತೆ ಮಾಡಿದರೇ ಜೆಸಿಬಿ ಯಂತ್ರದ ಬಾಡಿಗೆಯನ್ನು ನಿವೇಶನದ ಮಾಲೀಕರೇ ನೀಡಬೇಕಾಗುತ್ತದೆ. ಪಟ್ಟಣದ ನಾಗರಿಕರ ಸೌಲಭ್ಯಕ್ಕಾಗಿ ಚಿರಶಾಂತಿ ವಾಹನ ಖರೀದಿಸಲಾಗಿದ್ದು ಕಡಿಮೆ ದರದಲ್ಲಿ ಬಾಡಿಗೆ ನೀಡಲಾಗುತ್ತದೆ. ಕಸ ಸಂಗ್ರಹಣೆ ಮಾಡಲು ವಾಹನಗಳ ಕೊರತೆ ಇದ್ದುದನ್ನು ಮನಗಂಡು ಹೆಚ್ಚುವರಿ ಕಸ ಸಂಗ್ರಹಣ ವಾಹನ ಖರೀದಿಸಲಾಗಿದೆ ಎಂದರು.
ಪಟ್ಟಣದ ದಬ್ಬೇಘಟ್ಟ ರಸ್ತೆ ನಿರ್ಮಾಣ ಕಾರ್ಯ ಶೇಕಡಾ 85 ರಷ್ಟು ಮುಗಿದಿದೆ, ದಬ್ಬೇಘಟ್ಟ ರಸ್ತೆಯ ಕೆಲವೆಡೆ ಕಾಮಗಾರಿ ನಿರ್ವಹಣೆ ವಿಳಂಬವಾಗಿದ್ದು ಶೀಘ್ರ ಕಾಮಗಾರಿ ಆರಂಭಿಸಲು ಕ್ರಮ ವಹಿಸಲಾಗುವುದು, ಶಾಸಕ ಮಸಾಲ ಜಯರಾಮ್ ಸಹಕಾರದಿಂದ ನೆನಗುದಿಗೆ ಬಿದ್ದಿದ್ದ ವಾಣಿಜ್ಯ ಮಳಿಗೆ ಸಂಕೀರ್ಣ ಕಾಮಗಾರಿ ಪ್ರಗತಿಯಲ್ಲಿದೆ, ವಾಣಿಜ್ಯ ಮಳಿಗೆ ಸಂಕೀರ್ಣ ಕಾಮಗಾರಿಗೆ ವಿಶೇಷ ಅನುದಾನ ದೊರಕಿಸಿ ಪೂರಕ ನೆರವಿತ್ತ ಶಾಸಕ ಮಸಾಲ ಜಯರಾಮ್ ರವರಿಗೆ ವಿಶೇಷ ಅಭಿನಂದನೆ ತಿಳಿಸುತ್ತೇನೆ. ಪಟ್ಟಣದ ನಾಗರಿಕರಿಗೆ ಮತ್ತಷ್ಟು ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಯಜಮಾನ್ ಮಹೇಶ್, ಎನ್.ಆರ್.ಸುರೇಶ್, ಚಿದಾನಂದ್, ಮಧು, ಪ್ರಭಾಕರ್, ನದೀಂ, ಸ್ವಪ್ನನಟೇಶ್, ಆಶಾರಾಜಶೇಖರ್, ಶೀಲಾ, ಮುಖ್ಯಾಧಿಕಾರಿ ಮಂಜುಳಾದೇವಿ, ಆರೋಗ್ಯಾಧಿಕಾರಿ ರಂಗನಾಥ್, ಸಿಬ್ಬಂದಿವರ್ಗ ಹಾಗೂ ಪೌರ ಕಾರ್ಮಿಕರು ಇದ್ದರು.

Get real time updates directly on you device, subscribe now.

Comments are closed.

error: Content is protected !!