ಕುಣಿಗಲ್: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮರ್ಪಕ ಮೂಲಭೂತ ಸೌಕರ್ಯ ಒದಗಿಸುವುದು ಸೇರಿದಂತೆ ಅತಿಥಿ ಉಪನ್ಯಾಸಕರ ನಿಯೋಜಿಸಿ ಪಾಠ ಪ್ರವಚನ ನಡೆಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಕಾಲೇಜು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬುಧವಾರ ಕಾಲೇಜು ಆರಂಭದ ವೇಳೆಗೆ ಜಮಾವಣೆಗೊಂಡ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಹಲವು ದಿನಗಳಿಂದ ಅತಿಥಿ ಉಪನ್ಯಾಸ ಕರು ತಮ್ಮ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ನಡೆಸುತ್ತಿರುವ ಕಾರಣ ಬೇಸತ್ತು ಕಾಲೇಜಿನಿಂದ ಸುಮಾರು ಎರಡು ಕಿ.ಮೀ ದೂರದ ತಾಲೂಕು ಕಚೇರಿಗೆ ಪ್ರತಿಭಟನಾ ಮೇರೆವಣಿಗೆ ನಡೆಸಿ, ತಾಲೂಕು ಕಚೇರಿಯ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿದರು, ತಹಶೀಲ್ದಾರ್ ಆಗಮಿಸಿ ಮನವಿ ಸ್ವೀಕರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.
ತಹಶೀಲ್ದಾರ್ ಮಹಾಬಲೇಶ್ವರ್ ಆಗಮಿಸಿದ ಕೂಡಲೆ ತಮ್ಮ ಅಹವಾಲು ಸಲ್ಲಿಸಿದ ವಿದ್ಯಾರ್ಥಿ ಮುಖಂಡ ಕೇಶವ ಮಾತನಾಡಿ, ತಾಲೂಕಿನಲ್ಲಿ ಅತಿವೃಷ್ಟಿ ಹಾವಳಿಯಿಂದ ಸಂಕಷ್ಟದ ನಡುವೆಯೂ ಸಾವಿರಾರು ವಿದ್ಯಾರ್ಥಿಗಳು ಗ್ರಾಮಾಂತರ ಪ್ರದೇಶದಿಂದ ಪದವಿ ವ್ಯಾಸಂಗಕ್ಕೆ ಸರ್ಕಾರಿ ಕಾಲೇಜಿಗೆ ಬರುತ್ತಿದ್ದಾರೆ, ಕಾಲೇಜಿನಲ್ಲಿ ಸುಸಜ್ಜಿತ ಕಟ್ಟಡ ಇಲ್ಲದೆ ನಿರ್ಮಾಣ ಹಂತದ ಕಟ್ಟಡದಲ್ಲಿ ಕೂತು, ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಅವರಿವರ ಕಾಡಿಬೇಡಿ ಕಷ್ಟಪಟ್ಟು ಕಾಲೇಜಿಗೆ ಬರುತ್ತಿದ್ದೇವೆ, ಕಾಲೇಜಿನಲ್ಲಿ ಇರುವ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹತ್ತು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ, ಸರ್ಕಾರ ಅವರ ಸಮಸ್ಯೆ ಈಡೇರಿಸುತ್ತಿಲ್ಲ, ಇದರಿಂದ ಗ್ರಾಮಾಂತರ ಪ್ರದೇಶ ವಿದ್ಯಾರ್ಥಿಗಳಾದ ನಮಗೆ ತೀವ್ರ ತೊಂದರೆಯಾಗಿದೆ, ಖಾಸಗಿ ಪದವಿ ಕಾಲೇಜುಗಳಲ್ಲಿ ಉಳ್ಳವರು ವ್ಯಾಸಂಗ ಮಾಡುತ್ತಿದ್ದಾರೆ, ಅಲ್ಲಿ ಸಮಸ್ಯೆ ಇಲ್ಲ, ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಿಲ್ಲದೆ ತರಗತಿ ನಡೆಯದೆ ತೊಂದರೆಯಾಗಿದ್ದು ಸರ್ಕಾರ, ಆಡಳಿತ ವ್ಯವಸ್ಥೆ ಏನಾದರೂ ಮಾಡಲಿ ಗ್ರಾಮಾಂತರ ಪ್ರದೇಶದಿಂದ ಕಷ್ಟ ಪಟ್ಟು ಬರುವ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡಲು ವ್ಯವಸ್ಥೆ ಮಾಡಿ ಎಂದು ಅಳಲು ತೋಡಿಕೊಂಡರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಹಾಬಲೇಶ್ವರ್ ಸಂಬಂಧಪಟ್ಟವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು. ವಿದ್ಯಾರ್ಥಿಗಳ ಪ್ರತಿಭಟನೆ ಬೆಂಬಲಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್, ಮುಖಂಡ ಚಂದ್ರು ಸರ್ಕಾರ ಕೂಡಲೆ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.
ಯುವ ಬಿಜೆಪಿ ಅಧ್ಯಕ್ಷ ಧನುಷ್ ಗಂಗಾಟ್ಕರ್ ಮಾತನಾಡಿ, ಉನ್ನತ ಶಿಕ್ಷಣ ಸಚಿವರು ಕಳೆದ ವಾರ ಭೇಟಿ ನೀಡಿದಾಗ ನೀತಿ ಸಂಹಿತೆ ಇದ್ದ ಕಾರಣ ಕಾಲೇಜಿನ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ತೆರಳಿದ್ದರು. ಇದೀಗ ಅವರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸಲಾಗುವುದು ಎಂದರು. ವಿದ್ಯಾರ್ಥಿ ಸಂಘಟನೆಯ ಪ್ರಮುಖರಾದ ರವೀಶ, ಮನೋಜ, ಗಾಂಧಿ, ಪವನ್, ಕಿರಣ, ಅರುಣ, ನಿತ್ಯ, ಲಾವಣ್ಯ, ಕೀರ್ತನಾ, ಲಿಖಿತ ಇತರರು ಇದ್ದರು.
Get real time updates directly on you device, subscribe now.
Prev Post
Next Post
Comments are closed.