ತುಮಕೂರು: ರಾಜ್ಯದ ಬಿಜೆಪಿ ಸರಕಾರ ಅತಿವೃಷ್ಟಿಯಿಂದ ಬೆಳೆಹಾನಿ ಸಂಭವಿಸಿ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲಕ್ಕಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದು ಬಿಜೆಪಿ ಮುಖಂಡ ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಹೆಕ್ಟೇರ್‌ಗೆ ಎನ್‌ಡಿಆರ್‌ಎಫ್‌ನಿಂದ ನೀಡುವಷ್ಟೇ ಪರಿಹಾರದ ಹಣವನ್ನು ರಾಜ್ಯ ಸರಕಾರ ನೀಡುವ ಘೋಷಣೆ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಿದೆ ಎಂದರು.
ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಉಂಟಾದ ಅತಿವೃಷ್ಠಿ ನಿಭಾಯಿಸುವ ನಿಟ್ಟಿನಲ್ಲಿ 10 ಲಕ್ಷ ಹೆಕ್ಟೇರ್‌ನಲ್ಲಿದ್ದ ಬೆಳೆ ನಷ್ಟವಾಗಿದ್ದು, 969 ಕೋಟಿ ರೂ. ಪರಿಹಾರ ನೀಡಲು ಮುಂದಾಗಿದೆ, ಒಣಬೇಸಾಯ, ತೋಟಗಾರಿಕೆ ಮತ್ತು ನೀರಾವರಿಯಲ್ಲಿ ಬೆಳೆದಿರುವ ಬೆಳೆಗಳಿಗೆ ನೀಡುತ್ತಿದ್ದ ಪರಿಹಾರದ ಮೊತ್ತವನ್ನು ದ್ವಿಗುಣಗೊಳಿಸಲಾಗಿದೆ. ಇದರಿಂದ ಸರಕಾರದ ಮೇಲೆ 1200 ಕೋಟಿ ರೂ. ಹೆಚ್ಚಿನ ಅರ್ಥಿಕ ಹೊರೆ ಬೀಳಲಿದೆ ಎಂದು ಡಾ.ಹುಲಿನಾಯ್ಕರ್ ನುಡಿದರು.
ಒಣಬೇಸಾಯದಲ್ಲಿ ಎನ್‌ಡಿಆರ್‌ಎಫ್‌ನಿಂದ ಹೆಕ್ಟೇರ್ ಗೆ 6800 ರೂ. ಪರಿಹಾರ ನೀಡಲು ಮಾತ್ರ ಅವಕಾಶವಿದೆ, ರಾಜ್ಯ ಸರಕಾರ ಕೇಂದ್ರ ನೀಡುವ ಹಣಕ್ಕೆ ಸರಿಸಮನಾಗಿ ಪ್ರತಿ ಹೆಕ್ಟೇರ್ ಗೆ 6800 ರೂ. ನೀಡುವ ಮೂಲಕ ರೈತರಿಗೆ ಒಂದು ಹೆಕ್ಟೇರ್‌ಗೆ 13600 ರೂ. ದೊರೆಯುವಂತೆ ಮಾಡುತ್ತಿದೆ, ಇದರ ಜೊತೆಗೆ 12.69 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶದ ಬೆಳೆಗೆ ಕೇಂದ್ರದ 13500 ರೂ.ಗಳ ಜೊತೆಗೆ ರಾಜ್ಯ ಸರಕಾರ 11500 ರೂ. ಸೇರಿಸಿ ಹೆಕ್ಟೇರ್‌ಗೆ 25 ಸಾವಿರ ರೂ. ನೀಡಲಾಗುತ್ತಿದೆ, ತೋಟಗಾರಿಕಾ ಬೆಳೆಗಳಿಗೆ ಕೇಂದ್ರದ 18000 ರೂ. ಪರಿಹಾರದ ಜೊತೆಗೆ ರಾಜ್ಯ ಸರಕಾರ 10 ಸಾವಿರ ರೂ. ನೀಡಿ, ರೈತರಿಗೆ ಒಂದು ಹೆಕ್ಟೇರ್‌ಗೆ 28 ಸಾವಿರ ರೂ. ದೊರೆಯುವಂತೆ ಮಾಡಿದೆ. ಇದರಿಂದ ಕೈಗೆ ಬಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದರು.
ಕೋವಿಡ್ ನಿಂದ ರಾಜ್ಯದ ಹಣಕಾಸು ಪರಿಸ್ಥಿತಿ ಅಷ್ಟು ಉತ್ತಮವಾಗಿಲ್ಲ, ಆದರೂ ದೇಶದ ಬೆನ್ನೆಲುಬಾಗಿರುವ ರೈತರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಒಟ್ಟು 1200 ಕೋಟಿ ರೂ. ಪರಿಹಾರ ವಿತರಿಸಲು ಮುಂದಾಗಿದೆ, ಈ ಸಂಬಂಧ ಶೀಘ್ರವೇ ಸರಕಾರಿ ಆದೇಶ ಹೊರಡಲಿದ್ದು, ನೇರವಾಗಿ ರೈತರ ಖಾತೆಗಳಿಗೆ ಪರಿಹಾರದ ಹಣ ಜಮಾವಣೆಯಾಗಲಿದೆ ಎಂದು ಡಾ.ಹುಲಿನಾಯ್ಕರ್ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾವು ಅಧಿಕಾರ ವಹಿಸಿಕೊಂಡ ಮೊದಲನೇ ದಿನ ಘೋಷಿಸಿದಂತೆ ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಿಷ್ಯ ವೇತನ ನೀಡಲು ಮುಂದಾಗಿದೆ, ಪಿಯುಸಿ, ಡಿಪ್ಲೋಮಾ ಹಾಗೂ ತತ್ಸಮಾನ ತರಗತಿಗಳಲ್ಲಿ ಓದುತ್ತಿರುವವರಿಗೆ ಬಾಲಕರಿಗೆ ವಾರ್ಷಿಕ 2500 ರೂ., ಬಾಲಕಿಯರಿಗೆ 3000, ಪದವಿ, ವೃತ್ತಿಪರ ಕೋರ್ಸುಗಳಾದ ಎಂಬಿಬಿಎಸ್, ಇಂಜಿನಿಯರಿಂಗ್ ಪದವೀಧರರು ಹಾಗೂ ಪದವಿ ಸಮಾನ ಕೋರ್ಸ್‌ಗಳಲ್ಲಿ ಕಲಿಯುತ್ತಿರುವ ಗಂಡು ಮಕ್ಕಳಿಗೆ 5000 ರೂ, ಹೆಣ್ಣು ಮಕ್ಕಳಿಗೆ 5500 ರೂ, ಕಾನೂನು, ಅರೆ ವೈದ್ಯಕೀಯ, ಬಿ.ಫಾರ್ಮು ನರ್ಸಿಂಗ್ ಇನ್ನಿತರ ವೃತ್ತಿಪರ ಕೋರ್ಸ್‌ಗಳ ಗಂಡು ಮಕ್ಕಳಿಗೆ 7500 ರೂ, ಹೆಣ್ಣು ಮಕ್ಕಳಿಗೆ 8000 ಸಾವಿರ ರೂಗಳು, ಸ್ನಾತಕೋತ್ತರ ವೈದ್ಯಕೀಯ, ಇಂಜಿನಿಯರಿಂಗ ಪದವಿಯಲ್ಲಿ ಕಲಿಯುತ್ತಿರುವ ಗಂಡು ಮಕ್ಕಳಿಗೆ 10 ಸಾವಿರ , ಹೆಣ್ಣು ಮಕ್ಕಳಿಗೆ 11 ಸಾವಿರ ರೂಗಳ ಶಿಷ್ಯ ವೇತನ ಘೋಷಿಸಿದೆ.ಇದಕ್ಕಾಗಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಡಾ.ಎ.ಆರ್.ಹುಲಿನಾಯ್ಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರರಾದ ಕೊಪ್ಪಲ್‌ನಾಗರಾಜು, ಶಿವಕುಮಾರ್, ಜಗನ್ನಾಥ್ ಮತ್ತಿತರರು ಉಪಸ್ಥಿತರಿದ್ದರು.
Get real time updates directly on you device, subscribe now.
Comments are closed.