ಕಲ್ಲುಗಣಿಗಾರಿಕೆ ನಡೆಯಲು ಬಿಡಲ್ಲ- ಕೋಳಘಟ್ಟ ಗ್ರಾಮಸ್ಥರ ಎಚ್ಚರಿಕೆ

333

Get real time updates directly on you device, subscribe now.

ತುರುವೇಕೆರೆ: ಜನ ಜಾನುವಾರುಗಳ ಹಾಗೂ ಪರಿಸರಕ್ಕೆ ಮಾರಕವಾದ ಕಲ್ಲುಗಣಿಕೆಗಾರಿಕೆ ನಡೆಸಲು ಅವಕಾಶ ನೀಡಲಾರೆವು ಎಂದು ಕೋಳಘಟ್ಟ ಆಸುಪಾಸಿನ ಗ್ರಾಮಸ್ಥರು ಪರೀಕ್ಷಾರ್ಥವಾಗಿ ಬಂಡೆ ಕೊರೆಯುವ ಪ್ರಕ್ರಿಯೆಗೆ ತಡೆಯೊಡ್ಡಿದ ಘಟನೆ ತಾಲೂಕಿನ ಕೋಳಘಟ್ಟ ಹೊರವಲಯದಲ್ಲಿ ನಡೆಯಿತು.
ಕೋಳಘಟ್ಟ ಗ್ರಾಮದ ಸರ್ವೇ ನಂ.55 ರ ಗೋಮಾಳ ಪ್ರದೇಶದಲ್ಲಿರುವ ಬಂಡೆಯಲ್ಲಿ ಕಲ್ಲುಗಣಿಗಾರಿಕೆ ಆರಂಭಗೊಂಡಿತ್ತು, ಆ ವೇಳೆ ಕೋಳಘಟ್ಟ, ಅಜ್ಜೇನಹಳ್ಳಿ, ನೀರಗುಂದ ನೆಮ್ಮದಿ ಗ್ರಾಮ ಸೇರಿದಂತೆ ಆಸುಪಾಸಿನ ಗ್ರಾಮಗಳ ಜನತೆ ಕಲ್ಲು ಗಣಿಗಾರಿಕೆ ವಿರೋಧಿಸಿ ಪ್ರಬಲ ವಿರೋಧಿಸಿದ್ದರು. ಈ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು, ಸ್ಪೋಟಕದ ತೀವ್ರತೆಯನ್ನು ಮಾಪನ ಮಾಡುವ ಸಲುವಾಗಿ ಪರಿಣಿತರ ತಂಡವೊಂದು ಕೋಳಘಟ್ಟಕ್ಕೆ ಆಗಮಿಸಿತ್ತು, ಮತ್ತೆ ಕಲ್ಲಿಗಣಿಗಾರಿಕೆ ಆರಂಭಗೊಳ್ಳಬಹುದೆಂಬ ಆತಂಕದಿಂದ ಗ್ರಾಮಸ್ಥರು ಪರೀಕ್ಷೆ ನಡೆಸಲು ಅವಕಾಶ ನೀಡುವುದಿಲ್ಲವೆಂದು ಪ್ರತಿರೋಧ ವ್ಯಕ್ತಪಡಿಸಿದರು. ಪರೀಕ್ಷೆ ನಡೆಸಲು ಅವಕಾಶ ನೀಡುವಂತೆ ತಹಶೀಲ್ದಾರ್ ನಯೀಮುನ್ನಿಸ್ಸಾ ಮನವರಿಕೆ ಮಾಡಲು ಮುಂದಾದರೂ ಗ್ರಾಮಸ್ಥರು ಅವಕಾಶ ನೀಡಲು ನಿರಾಕರಿಸಿದರು.
ಪ್ರತಿಭಟನಾಕಾರರ ಪರವಾಗಿ ಮಾತನಾಡಿದ ಕೋಳಘಟ್ಟ ನಾಗರಾಜ್, ಕೋಳಘಟ್ಟ ಗೋಮಾಳ ಪ್ರದೇಶದಲ್ಲಿರುವ ಬಂಡೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸುವ ಉದ್ದೇಶದಿಂದ ಸ್ಪೋಟಕ ಸಿಡಿಸಲಾಗುತ್ತದೆ, ಸ್ಪೋಟಕದ ತೀವ್ರತೆಗೆ ಅಂತರ್ಜಲದ ಹಾದಿ ತಪ್ಪುತ್ತಿದೆ ಮಾತ್ರವಲ್ಲದೇ ಪರಿಸರಕ್ಕೆ ಮಾರಕವಾಗುತ್ತದೆ, ಆಸುಪಾಸಿನ ಕೃಷಿ ಜಮೀನುಗಳಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ, ಆಸುಪಾಸಿನ ಗ್ರಾಮಗಳ ಕಟ್ಟಡಗಳು, ದೇಗುಲಗಳ ಗೋಡೆಗಳು ಸ್ಪೋಟಕದ ತೀವ್ರತೆಗೆ ಬಿರುಕು ಬಿಟ್ಟಿವೆ, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ಗ್ರಾಮಸ್ಥರು ತಂದಿರುತ್ತೇವೆ, ಜನ ಜಾನುವಾರುಗಳ ಹಾಗೂ ಪರಿಸರಕ್ಕೆ ಮಾರಕವಾದ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು, ಇದಕ್ಕೆ ಆಸುಪಾಸಿನ ಗ್ರಾಮಸ್ಥರು ಸಹ ಧ್ವನಿಗೂಡಿಸಿದರು.
ಕಲ್ಲುಗಣಿಗಾರಿಕೆ ಕೋಳಘಟ್ಟ ಆಸುಪಾಸಿನ ಜನ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ, ಸ್ಥಳೀಯರ ಹಿತ ಕಡೆಗಣಿಸಿ ಕಲ್ಲುಗಣಿಗಾರಿಕೆ ನಡೆಸುವುದು ಸೂಕ್ತವಲ್ಲ, ಈ ಬಗ್ಗೆ ಶಾಸಕ ಮಸಾಲ ಜಯರಾ ಅವರು ಅಧಿವೇಶನ ಮುಗಿಸಿ ಬಂದ ನಂತರ ಅವರನ್ನು ಕರೆಸಿ ತೀರ್ಮಾನ ಕೈಗೊಳ್ಳುತ್ತೇವೆ, ಅಲ್ಲಿಯವರೆಗೂ ಯಾವುದೇ ಪ್ರಕ್ರಿಯೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ನಯೀಮುನ್ನಿಸ್ಸಾ ಪರೀಕ್ಷೆ ನಡೆಸಲು ಅವಕಾಶ ನೀಡುವಂತೆ ತಿಳಿಸಿದರಾದರು ಗ್ರಾಮಸ್ಥರು ಸಮ್ಮತಿಸಲಿಲ್ಲ. ಸಿಪಿಐ ನವೀನ್ ಹಾಗೂ ದಂಡಿನಶಿವರ ಪಿಎಸ್ಐ ಶಿವಲಿಂಗಪ್ಪ ಮತ್ತು ಸಿಬ್ಬಂದಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು.
ಕೋಳಘಟ್ಟ ಶಿವಾನಂದ್, ಗ್ರಾಪಂ ಸದಸ್ಯ ಮಂಜುನಾಥ್ ಮಾಜಿ ಗ್ರಾಪಂ ಸದಸ್ಯ ರಾಜೀವ್, ಮಂಜುನಾಥ್, ಮಲ್ಲಿಕಾರ್ಜುನ್, ನೆಮ್ಮದಿ ಗ್ರಾಮ ರಂಗಸ್ವಾಮಿ, ಶಂಕರಪ್ಪ, ರಾಜಶೇಖರ್, ದರ್ಶನ್, ಕೆ.ಎಸ್.ನಾಗರಾಜ್, ಸಾಸಲು ಶಿವಣ್ಣ ಸೇರಿದಂತೆ ಕೋಳಘಟ್ಟ ಆಸುಪಾಸಿನ ನಿವಾಸಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!