ತುಮಕೂರು: ಜನಸಂಖ್ಯೆ ಹೆಚ್ಚಳವಾದಂತೆ ಮಹಿಳಾ ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ, ಇವುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸ್ತ್ರೀಶಕ್ತಿ ಸಂಘಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ತುಮಕೂರು ತಾಲ್ಲೂಕು ಮೆಳೇಹಳ್ಳಿಯಲ್ಲಿ ಆಯೋಜಿಸಿದ್ದ ಗ್ರಾಮೀಣ ಮಹಿಳೆಯರಿಗಾಗಿ ದೌರ್ಜನ್ಯ ಮುಕ್ತ ಸಮಾಜ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ಇಂದು ಸಬಲೆಯಾಗಿದ್ದಾಳೆ, ಎಲ್ಲಾ ಕ್ಷೇತ್ರಗಳಲ್ಲಿಯೂ ಆಕೆ ಬೆಳೆಯುತ್ತಿದ್ದಾಳೆ, ಕಾನೂನಿನ ಅರಿವು ಪಡೆದುಕೊಳ್ಳುತ್ತಿದ್ದಾಳೆ, ಆದರೆ ದೌರ್ಜನ್ಯ ಪ್ರಕರಣ ಅಷ್ಟೇ ಪ್ರಮಾಣದಲ್ಲಿ ಹೆಚ್ಚಳಗೊಳ್ಳುತ್ತಿವೆ, ಇವುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಮಾತನಾಡಿ, ಇಡೀ ವಿಶ್ವದಲ್ಲಿ ಭಾರತದ ಕುಟುಂಬ ವ್ಯವಸ್ಥೆಗೆ ಒಂದು ಒಳ್ಳೆಯ ಗೌರವ ಸ್ಥಾನವಿದೆ, ಸುಭದ್ರ ಕೌಟುಂಬಿಕ ವಾತಾವರವಣವಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ವಿಘಟನೆಗಳು ಹೆಚ್ಚುತ್ತಿವೆ, ವಿವಾಹ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಹೋಗುವವರು ಹೆಚ್ಚುತ್ತಿದ್ದಾರೆ, ಇದು ಒಳ್ಳೆಯ ಲಕ್ಷಣವಲ್ಲ ಎಂದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಕುಡಿತದ ಗೀಳಿಗೆ ಬಿದ್ದು ಬಹಳಷ್ಟು ಸಂಸಾರ ಹಾಳಾಗುತ್ತಿವೆ, ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳು ಇತ್ತ ಗಮನ ಹರಿಸಬೇಕು, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಸಿ.ಹಿಮಾನಂದ್ ಮಾತನಾಡಿ ಹಿಂದೆ ಕುಟುಂಬಗಳಲ್ಲಿ ಹಿರಿಯರು ಇದ್ದರು, ಸಮಸ್ಯೆಗಳನ್ನು ಅವರು ಇತ್ಯರ್ಥಪಡಿಸುತ್ತಿದ್ದರು, ಈಗ ಕಾಲ ಬದಲಾದಂತೆ ಸಂಬಂಧಗಳು ಕ್ಷೀಣಿಸುತ್ತಿವೆ, ಎಲ್ಲವನ್ನೂ ಸಹಿಸಿಕೊಳ್ಳಲು ಸಾಧ್ಯವಿಲ್ಲ, ಭಾವನೆಗಳ ಅತಿಕ್ರಮಣ ಆದಾಗ ಮೌನವಾಗಿ ಇರಬಾರದು, ಕೆಲವೊಮ್ಮೆ ಕೌನ್ಸಿಲಿಂಗ್ ಅಗತ್ಯವಿರುತ್ತದೆ, ಎಲ್ಲವನ್ನೂ ಮೀರಿದಾಗ ಕಾನೂನಿನ ಅಸ್ತ್ರ ಇದ್ದೇ ಇರುತ್ತದೆ ಎಂದರು.
ದೌರ್ಜನ್ಯದಿಂದ ಮುಕ್ತಿಗಾಗಿ ದಿಟ್ಟ ಹೆಜ್ಜೆ ವಿಷಯ ಕುರಿತು ಮಾತನಾಡಿದ ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ದೌರ್ಜನ್ಯಗಳ ಸ್ವರೂಪ ಇಂದು ಬದಲಾಗುತ್ತಿದೆ, ವರದಕ್ಷಿಣೆ ಇಲ್ಲದೆ ಹೋದರೂ ವಿವಾಹದ ಖರ್ಚು ಹೆಣ್ಣು ಹೆತ್ತವರನ್ನು ಸಾಲಗಾರರನ್ನಾಗಿ ಮಾಡುತ್ತಿದೆ, ಪರಸ್ಪರ ಸಂಬಂಧಗಳು ಕ್ಷೀಣಿಸುತ್ತಿದ್ದು, ಬಾಂಧವ್ಯಗಳು ಗಟ್ಟಿಯಾಗಿರುವಂತೆ ನೋಡಿಕೊಳ್ಳುವುದೇ ಈ ಹೊತ್ತಿನ ಪ್ರಮುಖ ಗುರಿಯಾಗಬೇಕು ಎಂದರು.
ಕೋರಾ ಗ್ರಾಪಂ ಅಧ್ಯಕ್ಷೆ ನಾಗರತ್ನ, ತಾಪಂ ಇಓ ಜಯಪಾಲ್ ಡಿ, ಗ್ರಾಪಂ ಸದಸ್ಯರಾದ ಯಧುಕುಮಾರ್, ಮಂಜುನಾಥ್ ಮುಂತಾದವರು ಮಾತನಾಡಿದರು. ಮಹಿಳಾ ಇಲಾಖೆ ಅಧಿಕಾರಿಗಳಾದ ಶಿವಕುಮಾರಯ್ಯ, ದಿನೇಶ್, ಪವಿತ್ರ, ತುಮಕೂರು ಗ್ರಾಮಾಂತರ ಸಿಡಿಪಿಓ ದಿನೇಶ್ ಇತರರು ಇದ್ದರು.
ಜನಸಂಖ್ಯೆ ನಿಯಂತ್ರಿಸಿ ದೌರ್ಜನ್ಯ ತಡೆಯಿರಿ: ಶೆಟ್ಟಿಗಾರ್
Get real time updates directly on you device, subscribe now.
Prev Post
Next Post
Comments are closed.