ಖೋಖೋ ಕ್ರೀಡೆ ಬೆಳವಣಿಗೆ ಅತ್ಯಗತ್ಯ

204

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ ಖೋ ಖೋ ಕ್ರೀಡೆ ಉಳಿಯಲು ಇಲ್ಲಿನ ಕ್ರೀಡಾಸಂಸ್ಥೆಗಳೇ ಕಾರಣ ಎಂದು ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ ತಿಳಿಸಿದರು.
ಕರ್ನಾಟಕ ರಾಜ್ಯ ಖೋಖೋ ಸಂಸ್ಥೆ, ತುಮಕೂರು ಜಿಲ್ಲಾ ಖೋ ಖೋ ಸಂಸ್ಥೆ ಸಂಯುಕ್ತಾಶ್ರಯದಲ್ಲಿ 54ನೇ ರಾಷ್ಟ್ರೀಯ ಖೋ ಖೋ ಪಂದ್ಯಾವಳಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.
ಮೂಲತಃ ಕ್ರೀಡಾಪಟುವಾಗಿದ್ದ ನಮ್ಮ ಕಾಲದಲ್ಲಿ ಖೋ ಖೋ ಆಟ ನೋಡುವುದೇ ಹಬ್ಬವಾಗಿತ್ತು, ಈಗ ಅಂತಹ ಕಾಲ ಇಲ್ಲ, ಅಂತಹ ಕ್ರೀಡಾಪಟುಗಳು ಇಲ್ಲ, ಜಿಲ್ಲೆಯ ಹಲವಾರು ಕ್ರೀಡಾಪಟುಗಳು ಕ್ರೀಡೆಯಿಂದಲೇ ಉದ್ಯೋಗ ಪಡೆದಿದ್ದಾರೆ, ರಾಜ್ಯ ಖೋ ಖೋ ತಂಡ ಎಂದರೆ ಜಿಲ್ಲೆಯವರು ಕಡ್ಡಾಯವಾಗಿ ಇರುತ್ತಿದ್ದರು, ಅಂತಹ ಕಾಲಘಟ್ಟ ಮತ್ತೆ ಬರಲಿ ಎಂದು ಆಶಿಸಿದರು.
ಖೋ ಖೋ ತವರೂರಲ್ಲಿ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾದ ರಾಜ್ಯದ ಪುರುಷ ಮತ್ತು ಮಹಿಳಾ ತಂಡಗಳಿಗೆ ತರಬೇತಿ ಶಿಬಿರ ಏರ್ಪಡಿಸುವ ಮೂಲಕ ಜಬಲ್‌ಪುರದಲ್ಲಿ ನಡೆಯುವ ರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆಯಾದ 15 ಮಂದಿಗೆ ಸಮವಸ್ತ್ರ ನೀಡುವ ಮೂಲಕ ಶುಭ ಹಾರೈಸಲಾಯಿತು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಮಾತನಾಡಿ, ಖೋ ಖೋ ಪಂದ್ಯಾವಳಿಗೆ ಟಿಕೆಟ್‌ ನೀಡಿದ ಖ್ಯಾತಿ ಇರುವುದು ತುಮಕೂರು ಜಿಲ್ಲೆಗೆ ಮಾತ್ರ, ಟಿಕೆಟ್‌ ಸಿಗದೆ ಜನರು ಹೊರಗಡೆ ನಿಂತಿದ್ದರು, ರಾಜ್ಯ ಖೋ ಖೋ ಇತಿಹಾಸದಲ್ಲಿ ತುಮಕೂರು ಜಿಲ್ಲೆಗೆ ವಿಶೇಷ ಸ್ಥಾನವಿದೆ, ಒಂದು ಕಾಲದಲ್ಲಿ ಆರು ಮಂದಿ ಸದಸ್ಯರು ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದರು, ಈಗ ಅದು ಕ್ರಮೇಣ ಕಡಿಮೆಯಾಗಿದ್ದು, ಜೂನಿಯರ್‌ ಕಾಲೇಜು ಮೈದಾನದಲ್ಲಿ ನಿರ್ಮಾಣವಾಗುತ್ತಿರುವ ಖೋ ಖೋ ಮೈದಾನ ಉದ್ಘಾಟನೆ ಆದ ಮೇಲೆ ಖೋ ಖೋ ಜಿಲ್ಲೆಯಲ್ಲಿ ಗತ ವೈಭವ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡ ಪರ ಸಂಘಟನೆಗಳ ಮುಖಂಡರಾದ ಧನಿಯಾಕುಮಾರ್‌ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಕ್ಷಿಣಿಸುತ್ತಿದ್ದು, ಕ್ರೀಡೆಯಿಂದ ಮನೋವಿಕಾಸಗೊಳ್ಳಲಿದ್ದು, ರಾಜ್ಯ ಮತ್ತು ರಾಷ್ಟ್ರ ತಂಡಗಳನ್ನು ಪ್ರತಿನಿಧಿಸುವ ಮೂಲಕ ಜಿಲ್ಲೆಗೆ ಹೆಸರು ತರುವಂತಾಗಬೇಕು ಎಂದು ಹಾರೈಸಿದರು.
ರಾಷ್ಟ್ರ ಮಟ್ಟದ ಕ್ರೀಡೆ ಪ್ರತಿನಿಧಿಸಿದವರಿಗೆ ಸರ್ಕಾರಿ ಉದ್ಯೋಗಾವಕಾಶವನ್ನು ನೇರವಾಗಿ ನೀಡಿದಾಗ ಇನ್ನಷ್ಟು ವಿದ್ಯಾರ್ಥಿಗಳು ಕ್ರೀಡೆಯತ್ತ ಒಲವು ತೋರಲಿದ್ದು, ಸರ್ಕಾರಗಳು ಈ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು.
ಖೋ ಖೋ ಜಿಲ್ಲಾ ಸಂಸ್ಥೆ ಅಧ್ಯಕ್ಷ ಸಿ.ಎಸ್‌.ಶಂಕರ ಕುಮಾರ್‌, ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ಪ್ರಭಾಕರ್‌, ಕೋಚ್‌ಗಳಾದ ಸುಜಯ್‌, ಸಾವಿತ್ರಿ, ಲೋಕೇಶ್‌, ರಾಕ್‌ಲೈನ್‌ ರವಿಕುಮಾರ್‌, ಶ್ರೀನಿವಾಸ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!