ಲಿಂಗ ಪತ್ತೆ ನಿಷೇಧ ಕಾಯ್ದೆ ಉಲ್ಲಂಘಿಸುವುದು ಅಪರಾಧ

160

Get real time updates directly on you device, subscribe now.


ತುಮಕೂರು: ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಬಿ.ನಾಗೇಂದ್ರಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೀದೇವಿ ವೈದ್ಯಕೀಯ ಮಹಾ ವಿದ್ಯಾಲಯದ ಸಹಯೋಗದಲ್ಲಿ ನಗರದ ಶ್ರೀದೇವಿ ವೈದ್ಯಕೀಯ ಮಹಾ ವಿದ್ಯಾಲಯದ ಆಡಿಟೋರಿಯಂನಲ್ಲಿ ಪಿಸಿಪಿಎನ್‌ಡಿಟಿ ನಿಷೇಧ ಕಾಯ್ದೆ ಕುರಿತು ರೇಡಿಯಾಲಾಜಿಸ್ಟ್, ಸೋನೋಲಾಜಿಸ್ಟ್, ಸ್ಕ್ಯಾನಿಂಗ್‌ ವೈದ್ಯರು, ಪ್ರಸೂತಿ ಮತ್ತು ಸ್ತ್ರಿರೋಗ ತಜ್ಞರಿಗಾಗಿ ಏರ್ಪಡಿಸಿದ್ದ ಅರಿವು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿಸಿಪಿಎನ್‌ಡಿಟಿ ಉಲ್ಲಂಘಿಸಿದವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆಯೊಂದಿಗೆ 10,000 ರೂ. ಹಾಗೂ ಇದೇ ಅಪರಾಧವನ್ನು ಮತ್ತೊಮ್ಮೆ ಮಾಡಿದಲ್ಲಿ 5 ವರ್ಷ ಜೈಲು ಶಿಕ್ಷೆಯೊಂದಿಗೆ 50,000 ರೂ. ದಂಡ ವಿಧಿಸಲು ಅವಕಾಶವಿದೆ ಎಂದು ತಿಳಿಸಿದರು.
ಎಲ್ಲಾ ಸ್ಕ್ಯಾನಿಂಗ್‌ ಕೇಂದ್ರಗಳು ಕಾಯ್ದೆಯ ನಿಯಮಗಳನ್ನು ಪರಿಪಾಲನೆ ಮಾಡಬೇಕು, ಕಾನೂನು ನಿಯಮಗಳ ಬಗ್ಗೆ ಅಸಡ್ಡೆ, ಅರಿವಿನ ಕೊರತೆಗಳಿಂದ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ನ್ಯೂನ್ಯತೆ ಕಂಡು ಬರುತ್ತಿರುವುದರಿಂದ ಈ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಸಂಬಂಧಿಸಿದವರು ಕಾಯ್ದೆಯ ಪ್ರಾಮುಖ್ಯತೆ ಅರಿತು ಪಾಲನೆ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ ಮಾತನಾಡಿ, ದೇಶದಲ್ಲಿ ಹೆಣ್ಣಿನ ಭ್ರೂಣಹತ್ಯೆ ಮಿತಿಮೀರಿ ನಡೆಯುತ್ತಿದ್ದುದರಿಂದ ಪಿಸಿಪಿಎನ್‌ಡಿಟಿ ನಿಷೇಧ ಕಾಯ್ದೆಯನ್ನು 1994ರಲ್ಲಿ ಅಸ್ತಿತ್ವಕ್ಕೆ ತರಲಾಗಿದೆ, ಕಾಯ್ದೆ ಜಾರಿಯಲ್ಲಿದ್ದರೂ ಭ್ರೂಣಹತ್ಯೆ ಪ್ರಕರಣ ವರದಿಯಾಗುತ್ತಲೇ ಇವೆ, ವರದಿಯಾದ ಒಂದು ಗರ್ಭಪಾತಕ್ಕೆ 10-12 ಗರ್ಭಪಾತಗಳು ವರದಿಯಾಗದೆ ವರದಿಯಾಗದೆ ಮುಚ್ಚಿ ಹೋಗುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದರಲ್ಲದೆ, ಮಹಿಳೆ, ಆಕೆಯ ಪತಿ, ಅವರ ಸಂಬಂಧಿಕರು ಭ್ರೂಣ ಲಿಂಗ ಪತ್ತೆಗೆ ಒತ್ತಾಯಿಸಿದವರೂ ಕಾನೂನಿನಡಿ ಶಿಕ್ಷೆಗೊಳಗಾಗುತ್ತಾರೆ ಎಂದು ತಿಳಿಸಿದರು.
ಶ್ರೀದೇವಿ ವೈದ್ಯಕೀಯ ಮಹಾ ವಿದ್ಯಾಲಯದ ವೈದ್ಯಕೀಯ ಅಧೀಕ್ಷಕ ಡಾ.ಚೆನ್ನಮಲ್ಲಯ್ಯ ಮಾತನಾಡಿ, ಪಿಸಿಪಿಎನ್‌ಡಿಟಿ ಕಾಯ್ದೆಯು 1994ರಲ್ಲಿ ಜಾರಿಗೆ ಬಂದಿದ್ದರೂ ಹಲವಾರು ತಿದ್ದುಪಡಿಗಳಾಗಿವೆ, ಈ ತಿದ್ದುಪಡಿಗಳನ್ನು ಕಾಲಕಾಲಕ್ಕೆ ಸ್ಕ್ಯಾನಿಂಗ್‌ ಸೆಂಟರ್‌ಗಳು ಅರಿತು ಕಾಯ್ದೆ ಉಲ್ಲಂಘಿಸದೆ ಸಾರ್ವಜನಿಕರಿಗೆ ಸೇವೆ ನೀಡಬೇಕೆಂದರು.
ಅರಿವು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಪಿಸಿಪಿಎನ್‌ಡಿಟಿ ಉಪನಿರ್ದೇಶಕಿ ಡಾ.ಚಂದ್ರಕಲಾ ಮಾತನಾಡಿ, ಸ್ಕ್ಯಾನಿಂಗ್‌ ಸೆಂಟರ್‌ಗಳು ದಾಖಲೆಗಳನ್ನು ನಿರ್ವಹಿಸಿ ನಿಯಮ ಪಾಲಿಸಿದಲ್ಲಿ ಯಾರಿಗೂ ಹೆದರುವ ಅಗತ್ಯವಿರುವುದಿಲ್ಲ, ಕೆಲವು ತುರ್ತು ಸಂದರ್ಭಗಳಲ್ಲಿ ಮಾತ್ರ ಪ್ರಸವಪೂರ್ವ ಲಿಂಗ ಪತ್ತೆ ಮಾಡಲು ಅವಕಾಶವಿದೆ ಎಂದು ಮಾಹಿತಿ ನೀಡಿದರಲ್ಲದೆ, ಅಂಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ಸೆಂಟರ್‌, ಜೆನೆಟಿಕ್‌ ಕ್ಲಿನಿಕ್‌, ಜೆನೆಟಿಕ್‌ ಪ್ರಯೋಗಾಲಯ, ಎಕೋ, ಕಲರ್‌ ಡಾಪ್ಲರ್‌ ಸೇರಿದಂತೆ ಎಲ್ಲಾ ರೀತಿಯ ಸ್ಕ್ಯಾನಿಂಗ್‌ ಸೆಂಟರ್‌ಗಳನ್ನು ನಡೆಸುವವರು ಕಡ್ಡಾಯವಾಗಿ ಸಕ್ಷಮ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಬೇಕು. ನೋಂದಣಿ ಸಂದರ್ಭದಲ್ಲಿ ಸ್ಕ್ಯಾನಿಂಗ್‌ ಯಂತ್ರದ ಬಗ್ಗೆ ವಿವರವಾದ ಮಾಹಿತಿ ಒದಗಿಸಬೇಕು, ಕಾನೂನು ನಿಯಮ ಉಲ್ಲಂಘಿಸುವ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಭೇಟಿ ನೀಡಿ ನ್ಯೂನ್ಯತೆ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಪಿಸಿಪಿಎನ್‌ಡಿಟಿ ಸಲಹಾ ಸಮಿತಿಗೆ ಅಧಿಕಾರವಿದೆ ಎಂದು ತಿಳಿಸಿದರು.
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಡಾ.ರಜನಿ ಮಾತನಾಡಿ, ಪಿಸಿಪಿಎನ್‌ಡಿಟಿ ನಿಷೇಧ ಕಾಯ್ದೆಯನ್ವಯ ಭ್ರೂಣಲಿಂಗ ಪತ್ತೆ, ಭ್ರೂಣಲಿಂಗ ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಜಾಹೀರಾತು ನೀಡುವಂತಿಲ್ಲ, ಹೆಣ್ಣು ಭ್ರೂಣ ಹತ್ಯೆಯಿಂದ ಅಸಮತೋಲನೆ ಉಂಟಾಗಿ ಸಾಮಾಜಿಕ ಸಮಸ್ಯೆ ಹೆಚ್ಚಾಗುತ್ತವೆ, ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾದರೆ ಅತ್ಯಾಚಾರ, ಬಹುಪತಿತ್ವ, ಬಲವಂತದ ಮದುವೆ ನಡೆಯುವ ಸಾಧ್ಯತೆ ಇರುತ್ತದೆ, ದೇಶವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬೆಳವಣಿಗೆ ಕಂಡಿದ್ದರೂ ಸಾಮಾಜಿಕ ಪ್ರಜ್ಞೆ ಬೆಳೆದಿಲ್ಲ, ಹೆಣ್ಣು ಮಗಳನ್ನು ಮಗಳಾಗಿ ಸ್ವೀಕರಿಸಬೇಕು, ಮಗಳನ್ನು ಬಯಸಿ ಸ್ವಾಗತ ಮಾಡುವಲ್ಲಿ ಪರಿಹಾರ ನೆಲೆಸಿದೆ, ಅವಳ ವ್ಯಕ್ತಿತ್ವ ನಿರಾಕರಿಸುವುದು ಸರಿಯಲ್ಲ ಎಂದರಲ್ಲದೆ, ಗರ್ಭಪಾತದಿಂದ ಮಹಿಳೆಯರ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್‌.ಮಹಿಮಾ ಮಾತನಾಡಿ, ಜಿಲ್ಲೆಯಲ್ಲಿ 117 ಸ್ಕ್ಯಾನಿಂಗ್‌ ಸೆಂಟರ್ ಗಳಿದ್ದು, 115 ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ, ಪ್ರತಿ 3 ತಿಂಗಳಿಗೊಮ್ಮೆ ಪಿಸಿಪಿಎನ್‌ಡಿಟಿ ಜಿಲ್ಲಾ ಸಲಹಾ ಸಮಿತಿಯು ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ನ್ಯೂನ್ಯತೆ ಕಂಡು ಬಂದಲ್ಲಿ ನೋಟಿಸ್‌ ನೀಡಿ ಸರಿಪಡಿಸುವ ಕಾರ್ಯ ಮಾಡಲಾಗುತ್ತಿದೆ, ಪಿಸಿಪಿಎನ್‌ಡಿಟಿ ಕಾಯ್ದೆ ಕುರಿತು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಸ್ತ್ರಿರೋಗ ತಜ್ಞರ ಅಸೋಸಿಯೇಷನ್‌ ಅಧ್ಯಕ್ಷ ದ್ವಾರಕಾನಾಥ್‌, ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಸ್ತ್ರಿರೋಗ ತಜ್ಞರು, ಸ್ಕ್ಯಾನಿಂಗ್‌ ವೈದ್ಯರು, ರೇಡಿಯಾಲಾಜಿಸ್ಟ್, ಸೋನೋಲಾಜಿಸ್ಟ್ ಹಾಗು ಪಿಸಿಪಿಎನ್‌ಡಿಟಿ ಜಿಲ್ಲಾ ಸಲಹಾ ಸಮಿತಿಯ ಸದಸ್ಯೆ ರಾಣಿ ಚಂದ್ರಶೇಖರ್, ಸೌಜನ್ಯ, ಉಷಾ ಮತ್ತಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!