ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ

ನೋಂದಣಿ ಪ್ರಾರಂಭಿಸಲು ಅಧಿಕಾರಿಗಳಿಗೆ ಡೀಸಿ ಸೂಚನೆ

11,284

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ 2021-22ನೇ ಮುಂಗಾರು ಋತುವಿನ ಅವಧಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು 2022ರ ಜನವರಿ 1 ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿಸಲು ಜನವರಿ 1 ರಿಂದ 20ರವರೆಗೆ ಕೋವಿಡ್‌ ನಿಯಮ ಅನುಸರಿಸುವ ಮೂಲಕ ರೈತರ ನೋಂದಣಿಗೆ ಸೂಕ್ತ ಕ್ರಮ ಕೈಗೊಳ್ಳುವುದಲ್ಲದೆ, ವ್ಯವಸ್ಥಿತವಾಗಿ ನೋಂದಣಿ ಪ್ರಕ್ರಿಯೆ ನಡೆಸಬೇಕೆಂದು ಸೂಚಿಸಿದರು.
ರೈತರು ನೋಂದಣಿಯನ್ನು ಆಯಾ ಖರೀದಿ ಕೇಂದ್ರಗಳಲ್ಲಿ ಆನ್ ಲೈನ್‌ ಮೂಲಕ ಮಾಡಿಕೊಳ್ಳಬೇಕಾಗುತ್ತದೆ, ಕೃಷಿ ಇಲಾಖೆ ನೀಡಿರುವ FRUITS ID ಯನ್ನು ಮಾತ್ರ ಹಾಜರುಪಡಿಸಿ ನೋಂದಾಯಿಸಿಕೊಳ್ಳಬೇಕು ಎಂದರಲ್ಲದೆ, ಸರ್ಕಾರ ನಿಗದಿಪಡಿಸಿರುವ ಮಾನದಂಡ ಅನುಸರಿಸಿ ಎಫ್‌ಎಕ್ಯೂ ಗುಣಮಟ್ಟದ ರಾಗಿ ಮಾತ್ರ ಖರೀದಿ ಮಾಡಬೇಕು, ಕಳಪೆ ಗುಣಮಟ್ಟದ ರಾಗಿ ಖರೀದಿಯಾದರೆ ಸಂಬಂಧಿಸಿದ ಖರೀದಿ ಅಧಿಕಾರಿ ಮತ್ತು ಕೃಷಿ ಇಲಾಖೆಯ ಗ್ರೇಡರ್ ಗಳನ್ನೇ ಜವಾಬ್ದಾರಿ ಮಾಡಲಾಗುವುದು ಎಂದು ತಿಳಿಸಿದರು.
ರೈತರಿಂದ ರಾಗಿ ಖರೀದಿ ಪ್ರಕ್ರಿಯೆಯನ್ನು ಜನವರಿ 21 ರಿಂದ ಪ್ರಾರಂಭಿಸಬೇಕು, ಸರ್ಕಾರದಿಂದ ಪ್ರತಿ ಕ್ವಿಂಟಾಲ್‌ ರಾಗಿಗೆ 3377 ರೂ. ಖರೀದಿ ದರ ನಿಗದಿಪಡಿಸಲಾಗಿದೆ. ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಟ 20 ಕ್ವಿಂಟಾಲ್ ವರೆಗೆ ಮಾತ್ರ ರಾಗಿ ಖರೀದಿಸಲಾಗುವುದು. ಸರ್ಕಾರ ನಿಗದಿಪಡಿಸಿದ ಪ್ರಮಾಣ ಮೀರಿ ಹೆಚ್ಚುವರಿಯಾಗಿ ರಾಗಿ ಖರೀದಿಸುವಂತಿಲ್ಲ, ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಹಾಗೂ ನೋಂದಣಿ ಪ್ರಕ್ರಿಯೆಯಲ್ಲಿ ಬೋಗಸ್‌ ಗ್ರೇಡಿಂಗ್‌, ಮತ್ತಿತರ ಲೋಪವೆಸಗುವ ಅಧಿಕಾರಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು, ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆಯಿಂದ ರಾಗಿ ಖರೀದಿ ಮತ್ತು ನೋಂದಣಿ ಪ್ರಕ್ರಿಯೆ ನಡೆಸಬೇಕೆಂದು ಸೂಚಿಸಿದರು.
ಪ್ರತಿ ರಾಗಿ ಖರೀದಿ ಕೇಂದ್ರಕ್ಕೆ ಖರೀದಿ ಸಿಬ್ಬಂದಿ ಮತ್ತು ಡಾಟಾ ಎಂಟ್ರಿ ಆಪರೇಟರ್‌ ಸೇರಿದಂತೆ ಅಗತ್ಯ ಪರಿಕರ ಒದಗಿಸಬೇಕು. ತಿಪಟೂರು ಮತ್ತು ಕುಣಿಗಲ್‌ ತಾಲ್ಲೂಕುಗಳಲ್ಲಿ ಖರೀದಿ ಪ್ರಮಾಣ ಹೆಚ್ಚಾಗುವ ಸಂಭವವಿರುವುದರಿಂದ ಹೆಚ್ಚುವರಿ ಸಿಬ್ಬಂದಿ ಹಾಗೂ ನುರಿತ ಗ್ರೇಡರ್‌ಗಳನ್ನು ನೇಮಿಸಬೇಕು. ಖರೀದಿ ಪ್ರಕ್ರಿಯೆಗೆ ನಿಯೋಜಿಸುವ ಗ್ರೇಡರ್‌ಗಳಿಗೆ ಅಗತ್ಯ ತರಬೇತಿ ನೀಡಬೇಕು, ಖರೀದಿ ಪ್ರಕ್ರಿಯೆಯು ಮಾರ್ಚ್‌ 31ರ ವರೆಗೆ ನಡೆಯಲಿದ್ದು, ರೈತರಿಗೆ ಸಮಸ್ಯೆಯಾಗದಂತೆ ಯಾವುದೇ ದೂರು ಬಾರದಂತೆ ಖರೀದಿ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಸಬೇಕು ಎಂದರು.
ಖರೀದಿ ಕೇಂದ್ರಗಳಿಗೆ ರಾಗಿ ಮಾರಾಟ ಮಾಡಲು ಬರುವ ರೈತರಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಬೇಕೆಂದರಲ್ಲದೆ, FRUITS ID ಯಲ್ಲಿ ನೋಂದಣಿಯಾದ ರೈತರು ಮಾತ್ರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು ಅವಕಾಶವಿದೆ ಎಂಬ ಮಾಹಿತಿಯನ್ನು ರೈತರಿಗೆ ನೀಡಬೇಕು, ವಿನಾಕಾರಣ ಅವರನ್ನು ಅಲೆದಾಡಿಸಬಾರದು ಎಂದರು.
ಜಿಲ್ಲೆಯಲ್ಲಿ ಕಳೆದ 2020- 21ನೇ ಸಾಲಿನಲ್ಲಿ 8,32,92.350 ಮೆ. ಟನ್‌ ರಾಗಿ ಖರೀದಿಯಾಗಿದ್ದು, ಈ ಸಾಲಿನಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬರಬಹುದೆಂದು ಅಂದಾಜಿಸಲಾಗಿದೆ, ಖರೀದಿ ಕೇಂದ್ರದಲ್ಲಿ ಖರೀದಿಸಿದ ದಾಸ್ತಾನು ಸಂಗ್ರಹ ಮಾಡಲು ಅಗತ್ಯ ಗೋದಾಮುಗಳನ್ನು ಕಾಯ್ದಿರಿಸಬೇಕು, ಕಳೆದ ವರ್ಷ ಎದುರಿಸಿದ ಸಮಸ್ಯೆಗಳು ಮರುಕಳಿಸದಂತೆ ಜಾಗ್ರತೆ ವಹಿಸಬೇಕು. ರೈತರಿಂದ ಯಾವುದೇ ದೂರು ಬಂದರೆ ನಾನು ಸಹಿಸುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ರಾಗಿ ಖರೀದಿ ಕೇಂದ್ರಗಳನ್ನು ಎಪಿಎಂಸಿ ಆವರಣಗಳಲ್ಲಿ ತೆರೆಯಬೇಕು, ಈ ಖರೀದಿ ಕೇಂದ್ರದಲ್ಲಿ ಕನಿಷ್ಟ 1000 ದಿಂದ 2000 ಕ್ವಿಂಟಾಲ್‌ ದಾಸ್ತಾನು ಮಾಡಿಕೊಳ್ಳುವ ಸಾಮರ್ಥ್ಯವಿರುವ ಸ್ಥಳ ಗುರುತಿಸಿ ಸದರಿ ಸ್ಥಳದಲ್ಲಿಯೇ ಖರೀದಿ ಕೇಂದ್ರ ತೆರೆಯಬೇಕು ಎಂದು ತಿಳಿಸಿದರಲ್ಲದೆ, ಆಯಾ ತಾಲ್ಲೂಕು ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಎಪಿಎಂಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಂದಾಯ, ಕೃಷಿ ಇಲಾಖೆ ಸಿಬ್ಬಂದಿಯನ್ನೊಳಗೊಂಡ ತಾಲ್ಲೂಕು ಮಟ್ಟದ ಸಮಿತಿ ರಚಿಸಲಾಗಿದ್ದು, ಸಮಿತಿಯು ರೈತರ ನೋಂದಣಿ ಕೇಂದ್ರ ಮತ್ತು ರಾಗಿ ಕೇಂದ್ರಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ ಖರೀದಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುವಂತೆ ಮೇಲ್ವಿಚಾರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭಿಸುತ್ತಿರುವ ಬಗ್ಗೆ ಆಯಾ ವ್ಯಾಪ್ತಿಯ ಶಾಸಕರು ಮತ್ತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕೆಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಕುಣಿಗಲ್‌, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಮಧುಗಿರಿ, ತುಮಕೂರು, ಶಿರಾ ತಾಲ್ಲೂಕು ಸೇರಿದಂತೆ ಹುಳಿಯಾರಿನಲ್ಲಿ ಖರೀದಿ ಕೇಂದ್ರ ತೆರೆಯಲಾಗಿತ್ತು, ಈ ಖರೀದಿ ಕೇಂದ್ರಗಳ ಜೊತೆಗೆ ಪ್ರಸಕ್ತ ಸಾಲಿನಲ್ಲಿ ತಿಪಟೂರು ಮತ್ತು ಕುಣಿಗಲ್‌ ತಾಲ್ಲೂಕಿನಲ್ಲಿ ಹೆಚ್ಚುವರಿಯಾಗಿ ತಲಾ 1 ಖರೀದಿ ಕೇಂದ್ರ ತೆರೆಯಬೇಕೆಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ, ಕೃಷಿ ಇಲಾಖೆಯ ಅಶೋಕ್‌, ಆಹಾರ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಉಗ್ರಾಣ ನಿಗಮ, ಎಪಿಎಂಸಿ, ಕೆಎಫ್‌ಸಿಎಸ್‌ಸಿ ಅಧಿಕಾರಿ, ಸಿಬ್ಬಂದಿ, ವಿವಿಧ ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!