ತುಮಕೂರು: ನಗರಪಾಲಿಕೆಯ ಆವರಣದಲ್ಲಿರುವ ಪಾರ್ಕ್ ಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಸೂಲಗಿತ್ತಿ ನರಸಮ್ಮ ಅವರ ಹೆಸರನ್ನಿಡುವ ಮೂಲಕ ಅವರ ಹೆಸರನ್ನು ಶಾಶ್ವತಗೊಳಿಸುವ ಕೆಲಸವನ್ನು ನಗರಪಾಲಿಕೆ ಮಾಡಿದೆ ಎಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.
ನಗರದ ಪಾಲಿಕೆ ಆವರಣದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಉದ್ಯಾನವನಕ್ಕೆ ಡಾ.ಸೂಲಗಿತ್ತಿ ನರಸಮ್ಮ ಹೆಸರನ್ನಿಟ್ಟು, ನಾಮಫಲಕ ಆನಾವರಣಗೊಳಿಸಿದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ವೈದ್ಯಕೀಯ ಕ್ಷೇತ್ರಕ್ಕೆ ಸವಾಲೆಸೆಯುವ ರೀತಿಯಲ್ಲಿ ಯಾವುದೇ ಸೌಲಭ್ಯಗಳಿಲ್ಲದ ಕಾಲದಲ್ಲಿ ತಮ್ಮ ಹಸ್ತಗುಣದಿಂದ 15 ಸಾವಿರಕ್ಕು ಹೆಚ್ಚು ಹೆರಿಗೆ ಮಾಡಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಇವರ ಸೇವೆ ಗುರುತಿಸಿ, 2018ರಲ್ಲಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದೆ. ಇವರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಪಾಲಿಕೆಯ ಎಲ್ಲಾ ಸದಸ್ಯರ ಸಹಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳ ತೀರ್ಮಾನದಂತೆ ಇಲಾಖೆಯ ಅನುಮತಿ ಪಡೆದು ಸೂಲಗಿತ್ತಿ ನರಸಮ್ಮ ಅವರ ಹೆಸರಿಡಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ಗಡಿನಾಡಾದ ಪಾವಗಡ ತಾಲೂಕಿನ ಕುಗ್ರಾಮದಲ್ಲಿ ಹುಟ್ಟಿ, ತಮ್ಮ ಅತ್ತೆಯಿಂದ ಪಡೆದ ಜ್ಞಾನದಿಂದ ಯಾವುದೇ ರೀತಿಯ ತೊಂದರೆಯಿಲ್ಲದೆ ಸಾವಿರಾರು ಹೆರಿಗೆ ಮಾಡಿಸಿದ ಕೀರ್ತಿ ನರಸಮ್ಮ ಅವರಿಗೆ ಸಲ್ಲುತ್ತದೆ, ಅವರ ಹೆಸರನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ಪಾಲಿಕೆಯ ಆಡಳಿತ ಮಂಡಳಿ, ಚುನಾಯಿತ ಮಂಡಳಿ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ, ಅದಕ್ಕಾಗಿ ಶಾಸಕರು, ಪಾಲಿಕೆಯ ಎಲ್ಲಾ ಸದಸ್ಯರು, ಅಧಿಕಾರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.
ಪಾಲಿಕೆಯ ವಿರೋಧಪಕ್ಷದ ನಾಯಕ ಜೆ.ಕುಮಾರ್ ಮಾತನಾಡಿ, ಸಮಾಜಕ್ಕೆ ಅನುಕೂಲವಾಗುವ ರೀತಿ, ಬಡವರಿಗೆ, ಅಶಕ್ತರಿಗೆ ನೆರವಾದವರ ಸಮಾಜ ಸೇವೆ ಗುರುತಿಸಿ, ಗೌರವಿಸುವ ಕೆಲಸ ಮಾಡುತ್ತಿರುವುದು ಸಂತೋಷ ತಂದಿದೆ, ಆರೋಗ್ಯ, ಅದರಲ್ಲಿಯೂ ಹೆರಿಗೆ ಎಂಬುದು ಬಂಡವಾಳ ಬೇಡುವಂತಹ ಸ್ಥಿತಿಯಲ್ಲಿ ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ ಸಾವಿರಾರು ಹೆರಿಗೆ ಮಾಡಿಸಿದ ಕೀರ್ತಿ ಡಾ.ಸೂಲಗಿತ್ತಿ ನರಸಮ್ಮ ಅವರಿಗೆ ಸಲ್ಲುತ್ತದೆ, ಪಾಲಿಕೆಯ ಈ ಕೆಲಸ ಇತರರಿಗೆ ಸ್ಪೂರ್ತಿಯಾಗಲಿದೆ ಎಂದರು.
ಪಾಲಿಕೆಯ 15ನೇ ವಾರ್ಡ್‌ನ ಸದಸ್ಯೆ ಗಿರಿಜಾ ಧನಿಯಕುಮಾರ್ ಮಾತನಾಡಿ, ತಮ್ಮ ಇಳಿವಯಸ್ಸಿನಲ್ಲಿಯೂ ಹಿರಿಯರಿಂದ ಕಲಿತ ಸೂಲಗಿತ್ತಿ ಕೆಲಸ ನಿಲ್ಲಿಸದೆ ಮಕ್ಕಳು, ಮೊಮ್ಮಕ್ಕಳ ಸಹಾಯದಿಂದ ಹೆರಿಗೆ ನೋವಿನಿಂದ ನರಳುತ್ತಿದ್ದವರಿಗೆ ಸಹಾಯ ಮಾಡುತ್ತಿದ್ದ ನರಸಮ್ಮ ಅವರ ಸೇವೆಗೆ ಯಾವ ಪ್ರಶಸ್ತಿ ಕೊಟ್ಟರೂ ಸಾಲದು, ಸರಕಾರ ಅವರಿಗೆ ಪದ್ಮಶ್ರೀ, ರಾಷ್ಟ್ರೀಯ ವಯೋಶ್ರೇಷ್ಠ ಸನ್ಮಾನ ನೀಡಿದೆ, ಅಲ್ಲದೆ 2014ರಲ್ಲಿ ತುಮಕೂರು ವಿವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ, ಇಂತಹವರ ಸೇವೆ ಗುರುತಿಸಿ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಪಾಲಿಕೆ ಎಲ್ಲಾ ಸದಸ್ಯರ ಸಹಕಾರದಿಂದ ಪಾಲಿಕೆಯ ಉದ್ಯಾನವನಕ್ಕೆ ಡಾ.ಸೂಲಗಿತ್ತಿ ನರಸಮ್ಮ ಅವರ ಹೆಸರಿಡಲಾಗಿದೆ, ಇದಕ್ಕೆ ಸಹಕಾರ ನೀಡಿದ ಶಾಸಕರು, ಸಂಸದರು, ಪಾಲಿಕೆಯ ಎಲ್ಲಾ ಸದಸ್ಯರು, ಅಧಿಕಾರಿಗಳಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಪಾಲಿಕೆಯ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ನಯಾಜ್, ಸದಸ್ಯರಾದ ಲಕ್ಷ್ಮಿನರಸಿಂಹರಾಜು, ಸಾಹಿತಿ ಡಾ.ಕವಿತಾಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಜಿಪಂ ಮಾಜಿ ಅಧ್ಯಕ್ಷ ಕಮಲ ಗಂಗಹನುಮಯ್ಯ, ಡಾ.ಅರುಂಧತಿ ರಂಗಸ್ವಾಮಿ, ವಾಲೆ ಚಂದ್ರಯ್ಯ, ಡಾ.ಸೂಲಗಿತ್ತಿ ನರಸಮ್ಮ ಅವರ ಪುತ್ರ, ವಕೀಲ ಪಾವಗಡ ಶ್ರೀರಾಮ್ ಇತರರು ಇದ್ದರು.
ಡಾ.ಸೂಲಗಿತ್ತಿ ನರಸಮ್ಮ ಉದ್ಯಾನವನ ಉದ್ಘಾಟನೆ
Get real time updates directly on you device, subscribe now.
Prev Post
Next Post
Comments are closed.