ತುಮಕೂರು: ದೇಶಕ್ಕೆ ಸ್ವಾತಂತ್ರ ಬಂದ 75 ವರ್ಷಗಳ ನಂತರವು ನಾಡಿನ ಜನರಲ್ಲಿ ದೇಶಭಕ್ತಿ ಜಾಗೃತಿಗಾಗಿ ಅಭಿಯಾನ ನಡೆಸುವಂತಹ ಸ್ಥಿತಿಗೆ ತಲುಪಿರುವುದು ವಿಷರ್ಯಾಸ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಗಡಿನಾಡ ಅಭಿವೃದ್ದಿ ಮಂಡಳಿ ಅಧ್ಯಕ್ಷ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ.
ನಗರದ ಎಸ್.ಎಸ್.ಪುರಂನ ವಾಸವಿ ದೇವಾಲಯದಲ್ಲಿ ರಾಷ್ಟ್ರ ಜಾಗೃತಿ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ದೇಶಭಕ್ತಿ ಗೀತೆ ಗಾಯನ, ಸಮರ್ಪಣೆ ಹಾಗೂ ಸಂವಾದ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಇಂದಿನ ಮಕ್ಕಳಲ್ಲಿ ರಾಷ್ಟ್ರಭಕ್ತಿ ಎಂಬುದರ ಬಗ್ಗೆ ಅರಿವೇ ಇಲ್ಲ, ಇದಕ್ಕೆ ತಂದೆ ತಾಯಿ, ಸಮಾಜವೂ ಕಾರಣ, ಆಧುನಿಕ ಸಲಕರಣೆಗಳನ್ನು ಹೇಗೆ ಬಳಸಬೇಕೆಂಬ ವಿವೇಚನೆ ನಮ್ಮಲ್ಲಿ ಮೂಡಬೇಕು, ಸ್ವಾತಂತ್ರ ಸಿಕ್ಕ ಸಂದರ್ಭದಲ್ಲಿ ನಮ್ಮ ಸಂಸ್ಕೃತಿಯ ಪರಿಚಯಿಸುವ ಕೆಲಸ ಮಾಡಿದ್ದರೆ, ಇಂದಿನ ಈ ಕಾರ್ಯಕ್ರಮದ ಅಗತ್ಯವೇ ಇರುತ್ತಿರಲಿಲ್ಲವೆಂದರು.
ನಾವು ಯಾವುದೇ ಧರ್ಮದವರಾಗಿರಲಿ, ಯಾವುದೇ ಭಾಷೆ ಮಾತನಾಡುತ್ತಿರಲಿ, ಮೊದಲು ರಾಷ್ಟ್ರ ಧರ್ಮ, ನಂತರ ನಾವು ಮನೆಯಲ್ಲಿ ಆಚರಿಸುವ ವಯುಕ್ತಿಕ ಧರ್ಮ, ದೇಶಭಕ್ತಿಗೆ ವಯಸ್ಸಿನ ಮಿತಿ ಇರುವುದಿಲ್ಲ, 93 ವರ್ಷದ ಇಳಿವಸ್ಸಿನವರೂ ನಮ್ಮ ಈ ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ದೇಶಭಕ್ತಿ ಮೆರೆದಿದ್ದಾರೆ ಎಂದು ಡಾ.ಸಿ.ಸೋಮಶೇಖರ್ ಅಭಿಮಾನದಿಂದ ನುಡಿದರು.
ಸಭೆಯ ದಿವ್ಯ ಸಾನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಡಾ.ವೀರೇಶಾನಂದಸರಸ್ವತಿ ಸ್ವಾಮೀಜಿ ಮಾತನಾಡಿ,ಮಕ್ಕಳಲ್ಲಿ ದೇಶಭಕ್ತಿ,ರಾಷ್ಟ್ರ ಪ್ರೇಮ ಮೂಡಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ಕಾರ್ಯ ಯಶಸ್ವಿಯಾಗಬೇಕು.ಆ ಮೂಲಕ ಗೊತ್ತು, ಗುರಿಯಿಲ್ಲದ ಯುವಜನತೆಯನ್ನು ಸರಿದಾರಿಗೆ ತರುವ ಪ್ರಯತ್ನ ಸಫಲವಾಗಬೇಕಿದೆ.ಗೀತೆ ಗಾಯನ, ಸಮರ್ಪಣೆಯ ಜೊತೆಗೆ, ಸಂವಾದ ಕಾರ್ಯಕ್ರಮದಲ್ಲಿಯೂ ಅಧಿಕೃತವಾಗಿ ಸಂಶೋಧನೆ ನಡೆಸಿ ಮಾತನಾಡುವವರಿಗೆ ಮಾತ್ರ ಅವಕಾಶ ನೀಡುವುದರಿಂದ ಹೆಚ್ಚಿನ ಜನರನ್ನು ತಲುಪಲು ಸಾಧ್ಯ ಎಂದರು.
ದೇಶಭಕ್ತಿ ಗೀತಗಾಯನ ಮತ್ತು ನೃತ್ಯ ಸ್ಪರ್ಧಾ ಸಮಿತಿ ಸಂಚಾಲಕ ರವಿ ಹೊಯ್ಸಳ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಎಂಟು ವರ್ಷಗಳ ಹಿಂದೆ ರಾಷ್ಟ್ರಗೀತೆಯ ಕುರಿತಂತೆ ನಡೆಸಿದ ಸಮೀಕ್ಷೆಯಲ್ಲಿ ಲಭ್ಯವಾದ ಮಾಹಿತಿಯನ್ನು ಆಧರಿಸಿ, ನಮ್ಮ ದೇಶದ ಯುವಜನರಿಗೆ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂಬುದನ್ನು ಮನಗಂಡು, ಮೈಸೂರು ಸಂಸ್ಥಾನದ ಮಹಾರಾಜರನ್ನೇ ಮಹಾಪೋಷಕರನ್ನಾಗಿ ಮಾಡಿಕೊಂಡು ಈ ರಾಷ್ಟ್ರಭಕ್ತಿ ಜಾಗೃತಿ ಅಭಿಯಾನ ಆಯೋಜಿಸಲಾಗಿದೆ ಎಂದರು.
ಇಡೀ ದೇಶಕ್ಕೆ ತನ್ನ ಕಾಯೋ ಶ್ರೀಗೌರಿ ಎಂಬ ಗೀತೆಯ ಮೂಲಕ ರಾಷ್ಟ್ರಗೀತೆಯ ಪರಿಕಲ್ಪನೆ ನೀಡಿದ ಮೈಸೂರು ಸಂಸ್ಥಾನ ಸ್ಮರಿಸುವ ಕೆಲಸ ಸಹ ಇಲ್ಲಿದೆ, 2021ರ ಆಗಸ್ಟ್ 15 ರಂದು ಅನ್‌ಲೈನ್ ಮೂಲಕ ಆರಂಭವಾದ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆಯಲ್ಲಿ ಇದುವರೆಗೆ 96 ವಿವಿಧ ರಾಷ್ಟ್ರಗಳ, ಭಾರತದ 26 ರಾಜ್ಯಗಳ ಸುಮಾರು 8613 ಜನರು ಗೀತೆಗಳನ್ನು ಹಾಡಿ ಪೋಸ್ಟ್ ಮಾಡಿದ್ದಾರೆ, 2022ರ ಜನವರಿ 26ರ ಗಣರಾಜೋತ್ಸವ ದಿನದಂದು ರಾಷ್ಟ್ರಗೀತೆ ಸಮರ್ಪಣಾ ದಿನ ಆಯೋಜಿಸಿದ್ದು, ಇದರ ಕುರಿತು ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಬೇಕೆಂದು ರವಿ ಹೊಯ್ಸಳ ಮನವಿ ಮಾಡಿದರು.
ರಾಷ್ಟ್ರಭಕ್ತಿ ಗೀತ ಗಾಯನ, ನೃತ್ಯ ಸ್ಪರ್ಧೆಯ ರಾಜ್ಯ ಕಾರ್ಯದರ್ಶಿ ಹಾಗೂ ಉದ್ಯಮಿ ಹೆಚ್.ಜಿ.ಚಂದ್ರಶೇಖರ್ ಮಾತನಾಡಿ, ರಾಷ್ಟ್ರಭಕ್ತಿ ಜಾಗೃತಿ ಅಭಿಯಾನದ ವತಿಯಿಂದ ಕೈಗೊಂಡಿರುವ ಈ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು, ಹಿರಿಯ ಅಧಿಕಾರಿಗಳು, ಉದ್ಯಮಿಗಳು, ಜನಸಾಮಾನ್ಯರು ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ದೇಶಭಕ್ತಿ ಗೀತಗಾಯನ, ನೃತ್ಯ ಸ್ಪರ್ಧೆ ಸಮಿತಿಯ ತುಮಕೂರು ಜಿಲ್ಲಾಧ್ಯಕ್ಷ ಹಾಗೂ ಉದ್ಯಮಿ ಚಿದಾನಂದ್ ಮಾತನಾಡಿ, ಯುವಜನತೆಯಲ್ಲಿ ಜಾಗೃತಿ ಮೂಡಿಸಲು ಕೈಗೊಂಡಿರುವ ಈ ಅಭಿಯಾನ ಯಶಸ್ವಿಯಾಗಿ ಮುನ್ನೆಡೆಯಬೇಕಾದರೆ ಜನತೆಯ ಸಹಕಾರ ಮುಖ್ಯ, ಗಣರಾಜೋತ್ಸವದ ದಿನದಂದು ಒಳಾಂಗಣದಲ್ಲಿ ಸುಮಾರು ಒಂದರಿಂದ ಒಂದುವರೆ ಗಂಟೆಗಳ ಕಾಲ ನೊಂದಾಯಿಸಿರುವ ವ್ಯಕ್ತಿಗಳು ಈಗಾಗಲೇ ಸಮಿತಿ ನೀಡಿರುವ 10 ಗೀತೆಗಳನ್ನು ಕಲಿತು ಸಮರ್ಪಣೆ ಮಾಡಲು ಅವಕಾಶ ಮಾಡಿಕೊಡಲಾಗುವುದು, ಕಾರ್ಯಕ್ರಮದ ತಯಾರಿ ಕುರಿತು ಸಲಹೆ, ಸೂಚನೆಗಳನ್ನು ನೀಡಬೇಕು. ಇದೊಂದು ರಾಜಕೀಯ ರಹಿತ ಕಾರ್ಯಕ್ರಮವಾಗಿದ್ದು,ಎಲ್ಲಾ ವರ್ಗದ,ಧರ್ಮ ಜನರು ಪಾಲ್ಗೊಳ್ಳುವಂತೆ ಮಾಡಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.
ವೇದಿಕೆಯಲ್ಲಿ ಉದ್ಯಮಿ ಹಾಗೂ ರಾಷ್ಟ್ರಭಕ್ತಿ ಜಾಗೃತಿ ಅಭಿಯಾನದ ರಾಜ್ಯ ಖಜಾಂಚಿ ಆರ್.ಎಲ್. ರಮೇಶ್ ಬಾಬು ಮತ್ತಿತರರು ಪಾಲ್ಗೊಂಡಿದ್ದರು.
ಪ್ರತಿಯೊಬ್ಬರಲ್ಲೂ ದೇಶ ಭಕ್ತಿ ಮೂಡಲಿ: ಸೋಮಶೇಖರ್
Get real time updates directly on you device, subscribe now.
Prev Post
Next Post
Comments are closed.