ಎಲ್ಲಡೆ ಸಂಭ್ರಮದಿಂದ ಕ್ರಿಸ್‌ಮಸ್‌ ಆಚರಣೆ

118

Get real time updates directly on you device, subscribe now.

ತುಮಕೂರು: ಕ್ರೈಸ್ತ ಸಮುದಾಯದ ಪವಿತ್ರ ಹಬ್ಬವಾದ ಕ್ರಿಸ್‌ಮಸ್‌ ಹಬ್ಬವನ್ನು ನಗರ ಸೇರಿದತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ನಗರದ ಚರ್ಚ್‌ ಸರ್ಕಲ್ ನಲ್ಲಿರುವ ಸಿಎಸ್‌ಐ ವೆಸ್ಲಿ ದೇವಾಲಯ, ಹೊರಪೇಟೆಯ ಸಂತ ಲೂರ್ದು ಮಾತೆ ದೇವಾಲಯ, ಸಿಎಸ್‌ಐ ಲೇಔಟ್‌ನ ಚರ್ಚ್‌, ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಚರ್ಚ್‌, ದೇವನೂರು ಚರ್ಚ್‌, ಸಿರಾಗೇಟ್ ನಲ್ಲಿರುವ ಚರ್ಚ್‌ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿರುವ ಚರ್ಚ್ ಗಳಲ್ಲಿ ಕ್ರೈಸ್ತ ಬಾಂಧವರು ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಹಬ್ಬದ ಪ್ರಯುಕ್ತ ಎಲ್ಲ ಚರ್ಚ್ ಗಳನ್ನು ವಿಶೇಷವಾಗಿ ವಿದ್ಯುದ್ದೀಪಾಲಂಕಾರ ಮಾಡಲಾಗಿದ್ದು, ಬಣ್ಣಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದವು.
ಕ್ರೈಸ್ತ ಬಾಂಧವರು ಹೊಸ ಉಡುಪುಗಳನ್ನು ಧರಿಸಿ ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ನಂತರ ಒಬ್ಬರಿಗೊಬ್ಬರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹಬ್ಬದ ವಿಶೇಷವಾಗಿ ತಯಾರಿಸಿದ್ದ ಸಿಹಿ ತಿಂಡಿಗಳನ್ನು ಸಹ ಕ್ರೈಸ್ತ ಬಾಂಧವರು ಪರಸ್ಪರ ಹಂಚಿ ತಿನ್ನುವ ಮೂಲಕ ಈ ಹಬ್ಬ ಶಾಂತಿ ಸೌಹಾರ್ದತೆ ಸಂಕೇತ ಎಂಬ ಸಂದೇಶ ಸಾರಿದರು. ಕ್ರೈಸ್ತ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಈ ಕೊರೊನಾ ಮಹಾಮಾರಿ ಜಗತ್ತಿನಿಂದ ಬಹುಬೇಗ ದೂರವಾಗಲಿ ಎಂದು ಏಸುಕ್ರಿಸ್ತನಲ್ಲಿ ಪ್ರಾರ್ಥಿಸಿದರು.
ಎಲ್ಲ ಚರ್ಚ್ ಗಳು ಕೋವಿಡ್‌ ಮುಂಜಾಗ್ರತಾ ಕ್ರಮ ಕೈಗೊಂಡು ದೇವಾಲಯಕ್ಕೆ ಬಂದ ಪ್ರತಿಯೊಬ್ಬರಿಗೂ ಸ್ಯಾನಿಟೈಸರ್‌ ಹಾಕಿ, ಥರ್ಮಲ್‌ ಸ್ಕ್ರೀನಿಂಗ್‌ ಮಾಡುವ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಚರ್ಚ್‌ ವೃತ್ತದಲ್ಲಿರುವ ಸಿಎಸ್‌ಐ ಮಹಾದೇವಾಲಯದ ಕ್ರೈಸ್ತ ಬಾಂಧವರ ಸಾಮೂಹಿಕ ಪ್ರಾರ್ಥನೆಯಾದ ಬಳಿಕ ಸಂದೇಶ ನೀಡಿದ ಸಿಎಸ್‌ಐ ಮಹಾದೇವಾಲಯದ ಸಭಾ ಪಾಲಕರು ಹಾಗೂ ತುಮಕೂರು ಕ್ಷೇತ್ರದ ಅಧ್ಯಕ್ಷರಾದ ಮಾರ್ಗನ್‌ ಸಂದೇಶ್‌ ಅವರು, ಕ್ರಿಸ್‌ಮಸ್‌ ಏಸುಕ್ರಿಸ್ತನ ಜನ್ಮದಿನದ ಸಂಕೇತ. ಮನುಷ್ಯರಿಗೋಸ್ಕರ ದೇವರು ಪರಲೋಕವನ್ನು ಬಿಟ್ಟು ಭೂಲೋಕಕ್ಕೆ ಬಂದಂತಹ ಶುಭ ವರ್ತಮಾನ ತಿಳಿಸುವಂತಹದ್ದು, ದೇವರು ಮನುಷ್ಯರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾನೆ ಎಂಬುದನ್ನು ತೋರಿಸುವುದು ಈ ಹಬ್ಬದ ಉದ್ದೇಶ ಎಂದರು.
ಬಹಳಷ್ಟು ವರ್ಷಗಳ ಹಿಂದೆ ಏಸುಕ್ರಿಸ್ತ ಹುಟ್ಟಿದಾಗ ಅಂದಿನ ಸಾಮಾಜಿಕ, ಆರ್ಥಿಕವಾದ ಪರಿಸ್ಥಿತಿಗಳು, ರಾಜಕೀಯ, ಧಾರ್ಮಿಕವಾದ ಪರಿಸ್ಥಿತಿಗಳು, ಬಡವರು, ನಿರ್ಗತಿಕರಿಗೆ ವಿರುದ್ಧವಾಗಿ ದೌರ್ಜನ್ಯ, ಶೋಷಣೆ ಮಾಡುವಂತಹ ಸನ್ನಿವೇಶ ಇದ್ದಾಗ ಏಸುಕ್ರಿಸ್ತ ಅಂತಹವರ ಪರವಾಗಿ ಸಮಾಜದಲ್ಲಿ ಶಾಂತಿ, ಸಮಾಧಾನ ತಂದು ದೇವರು ಬಡವರ ಪರ ಇದ್ದಾನೆ ಎಂದು ಸಾರಿ ಹೇಳಿದಂತಹ ಹಬ್ಬ ಇದಾಗಿದೆ ಎಂದು ಹೇಳಿದರು.
ಕ್ರಿಸ್‌ಮಸ್‌ ಹಬ್ಬ ಇಡೀ ಮನುಷ್ಯರನ್ನು ರಕ್ಷಣೆಯ ದಾರಿಯಲ್ಲಿ ನಡೆಸಲಿಕ್ಕೆ ಬಂದಂತಹ ಏಸುವಿನ ಆಗಮನವನ್ನು ಸೂಚಿಸುತ್ತದೆ. ಕ್ರಿಸ್ಮಸ್‌ ಶಾಂತಿ ಸಮಾಧಾನದ ಹಬ್ಬ. ಶಾಂತಿ ಕಾಪಾಡುವುದೇ ಈ ಹಬ್ಬದ ಸಂದೇಶ ಎಂದರು.
ನಗರದ ಹೊರಪೇಟೆಯ ಸಂತ ಲೂರ್ದು ಮಾತೆ ದೇವಾಲಯದಲ್ಲಿ ಹಬ್ಬದ ಪ್ರಯುಕ್ತ ಶುಕ್ರವಾರ ರಾತ್ರಿ 11 ರಿಂದ ಮಧ್ಯರಾತ್ರಿವರೆಗೂ ಪ್ರಾರ್ಥನೆ ಮಾಡಲಾಯಿತು. ನಂತರ ಬೆಳಿಗ್ಗೆಯೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!