ವಾಜಪೇಯಿ ದೇಶ ಕಂಡ ಶ್ರೇಷ್ಠ ನಾಯಕ

ಅಟಲ್‌ ದೇಶದ ಜನರ ಮನಸ್ಸಿನಲ್ಲಿದ್ದಾರೆ: ಮಾಧುಸ್ವಾಮಿ

304

Get real time updates directly on you device, subscribe now.

ತುಮಕೂರು: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವು ಅಪರೂಪದ ರಾಜಕಾರಣಿ, ಅಜಾತ ಶತ್ರು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಬಣ್ಣಿಸಿದರು.
ನಗರದ ಡಾ.ಶಿವಕುಮಾರ ಸ್ವಾಮೀಜಿ ವೃತ್ತದ ಸಮೀಪವಿರುವ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಏರ್ಪಡಿಸಿದ್ದ ಭಾರತ ರತ್ನ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬ ಹಾಗೂ ರಕ್ತದಾನ ಶಿಬಿರದಲ್ಲಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿದ ಬಳಿಕ ಮಾತನಾಡಿದರು.
ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಕವಿಯಾಗಿ, ರಾಜಕಾರಣಿಯಾಗಿ, ಸಹೃದಯಿಯಾಗಿ ಈ ದೇಶದ ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದಿದ್ದಾರೆ, ಇಂದಿನ ರಾಜಕಾರಣಿಗಳಿಗೆ ವಾಜಪೇಯಿ ಅವರು ನಡೆ ನುಡಿ ಆದರ್ಶಪ್ರಾಯ ಎಂದರು.
ಅಭಿವೃದ್ಧಿ ಕಾರ್ಯದಲ್ಲಿ ವಾಜಪೇಯಿ ಅವರಿಗೆ ಯಾರೂ ಸಾಟಿಯಿಲ್ಲ ಎಂದು ಪಂಡಿತ್‌ ಜವಹರ್‌ ನೆಹರುರವರೆ ಕೊಂಡಾಡಿದ್ದರು. ಇಡೀ ವಿಶ್ವವೇ ಒಪ್ಪಿಕೊಂಡಂತಹ ನಾಯಕ ವಾಜಪೇಯಿ ಅವರು, ಅಂತಹವರು ನಮ್ಮ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದರು. ನಾವೆಲ್ಲ ಅವರ ಜತೆ ಇದ್ದೆವು ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಹೇಳಿದರು.
ದೇಶದ ಮೂಲೆ ಮೂಲೆಗೂ ಸರಾಗವಾಗಿ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ ಹೆಗ್ಗಳಿಕೆ ವಾಜಪೇಯಿ ಅವರದ್ದು. ಅಂದು ಅವರು ಬೃಹತ್‌ ರಸ್ತೆಗಳನ್ನು ನಿರ್ಮಿಸುವ ಮೂಲಕ ಜನರ ಎಲ್ಲ ಕೆಲಸ ಕಾರ್ಯಗಳು, ದೇಶದ ಆರ್ಥಿಕ ಪ್ರಗತಿಗೂ ಕಾರಣಕರ್ತರಾಗಿದ್ದಾರೆ ಎಂದರು.
ದೇಶದ ಸರ್ವಾಂಗೀಣ ಪ್ರಗತಿ ಮತ್ತು ಬಡವರ ಏಳ್ಗೆಯೇ ವಾಜಪೇಯಿ ಅವರಿಗೆ ಮುಖ್ಯವಾಗಿತ್ತು. ಅವರ ನೆನಪು ಸದಾ ನಮ್ಮಲ್ಲಿ ಇರಬೇಕು. ಅವರ ಸ್ಮರಣೆ ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ರಾಜಕಾರಣಿಗಳು ಮಾಡುವ ಕೆಲಸ ಜನರನ್ನು ಮುಟ್ಟಬೇಕು, ಕೇವಲ ಮೊಬೈಲ್ ನಲ್ಲಿ, ವಾಟ್ಸಾಪ್ ಗಳಲ್ಲಿ ಹಾಕಿಕೊಳ್ಳುವುದರಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗುವುದಿಲ್ಲ, ಅದು ಜನರಿಗೂ ತಲುವುದಿಲ್ಲ, ಹಾಗಾಗಿ ಜನರ ಮನಸ್ಸಿನಲ್ಲಿ ಉಳಿಯುವಂತಹ ಕೆಲಸ ಕಾರ್ಯಗಳನ್ನು ರಾಜಕಾರಣಿಗಳು ಮಾಡಬೇಕು, ಈ ನಿಟ್ಟಿನಲ್ಲಿ ವಾಜಪೇಯಿ ಅವರು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.
ವಾಜಪೇಯಿ ಅವರು ಲೋಕಸಭೆ ಪ್ರವೇಶಿಸಿದಾಗ ಕಾಂಗ್ರೆಸ್ ನ ಪಂಡಿತ್‌ ಜವಹರ್ ಲಾಲ್‌ ನೆಹರು ಅವರು ಅತ್ಯಂತ ಎತ್ತರದ ಸ್ಥಾನದಲ್ಲಿದ್ದರು, ಆ ಸಂದರ್ಭದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ವಾಜಪೇಯಿ ಅವರನ್ನು ಸೋಲಿಸಲು ಕಾಂಗ್ರೆಸ್‌ ಪಕ್ಷದವರು ಬಹಳ ಕಸರತ್ತು ನಡೆಸಿದರು, ಚುನಾವಣೆ ಪ್ರಚಾರ ಸಭೆಯಲ್ಲಿ ಸ್ವತಃ ಜವಹರ್‌ ನೆಹರು ಅವರು ಭಾಷಣ ಮಾಡಿದ ನಂತರ ಕೊನೆಯಲ್ಲಿ ವಾಜಪೇಯಿ ಅವರ ಬಡವರ ಪರ ಕಾಳಜಿ, ಅಭಿವೃದ್ಧಿಯ ನಿಲುಗಳನ್ನು ಪ್ರಸ್ತಾಪಿಸಿ, ಅನಿವಾರ್ಯವಾಗಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪರ ಮತ ಕೇಳಿದ್ದೇನೆ ಅಷ್ಟೆ ಎಂದು ಹೇಳಿದ್ದರು ಎಂಬುದನ್ನು ಸಚಿವ ಮಾಧುಸ್ವಾಮಿ ಅವರು ಸ್ಮರಿಸಿದರು.
ಈ ಸಂದರ್ಭದಲ್ಲಿ ವಾಜಪೇಯಿರವರ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ ಅಟಲ್‌ ಕ್ರಿಕೆಟ್‌ ಲೀಗ್‌ ಟೂರ್ನಿಗೆ ಸಚಿವ ಮಾಧುಸ್ವಾಮಿ ಅವರು ಬ್ಯಾಟಿಂಗ್‌ ಮಾಡುವ ಮುಖೇನ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್‌, ಮೇಯರ್‌ ಬಿ.ಜಿ. ಕೃಷ್ಣಪ್ಪ, ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ. ಎಂ.ಆರ್‌. ಹುಲಿನಾಯ್ಕರ್‌, ಎನ್‌.ಎಸ್. ಜಯಕುಮಾರ್‌, ಸಿದ್ದಗಂಗಾ ಆಸ್ಪತ್ರೆಯ ಡಾ.ಪರಮೇಶ್‌, ಎಂ.ಬಿ.ನಂದೀಶ್‌, ಲಕ್ಷ್ಮೀಶ್‌, ಟೂಡ್‌ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಹೆಬ್ಬಾಕ ರವಿಶಂಕರ್‌, ದಿಲೀಪ್‌ಕುಮಾರ್‌, ಪಿ.ಬಿ.ಚಂದ್ರಶೇಖರ ಬಾಬು, ರುದ್ರೇಶ್‌, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನಯ್ಯ, ಸಿ.ಎನ್‌. ರಮೇಶ್‌, ವಕ್ತಾರರಾದ ಕೊಪ್ಪಲ್‌ ನಾಗರಾಜು, ಕೆ.ಟಿ. ಶಿವಕುಮಾರ್‌, ಜಗದೀಶ್‌ ಮತ್ತಿತರರು ಇದ್ದರು.

ಬಲವಂತದ ಮತಾಂತರ ತಡೆಯಲಷ್ಟೇ ಕಾಯ್ದೆ: ಜೆಸಿಎಂ

ತುಮಕೂರು: ಬಲವಂತವಾಗಿ ಅಮಾಯಕರನ್ನು ಮತಾಂತರ ಮಾಡುವುದರ ವಿರುದ್ಧವಷ್ಟೇ ಕಾಯ್ದೆ ಜಾರಿಗೊಳಿಸುತ್ತಿರುವುದು, ನಾವು ಎಲ್ಲೂ ಮತಾಂತರ ನಿಷೇಧ ಮಾಡುತ್ತಿಲ್ಲ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ಬಲವಂತವಾಗಿ ಅಮಾಯಕರನ್ನು ಮತಾಂತರ ಮಾಡುವುದನ್ನು ತಡೆಯುವುದು ನಮ್ಮ ಉದ್ದೇಶ, ಆದರೆ ಅವರೇ ಒಪ್ಪಿ ಮತಾಂತರವಾದರೆ ಅದಕ್ಕೆ ಸರ್ಕಾರದ ಅಭ್ಯಂತರವಿಲ್ಲ ಎಂದು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ 7 ರಾಜ್ಯಗಳಲ್ಲೂ ಬಿಜೆಪಿ ಸರ್ಕಾರ ಈ ಕಾಯ್ದೆ ಜಾರಿಗೊಳಿಸಿವೆ, ಆದರೆ ಎಲ್ಲೂ ಸಹ ಮತಾಂತರ ನಿಷೇಧ ಮಾಡಿಲ್ಲ. ಮದುವೆ ಮಾಡಿಕೊಳ್ಳುತ್ತೇವೆ ಎಂದು ಅಮಾಯಕರನ್ನು ನಂಬಿಸಿ ವಂಚಿಸಿ ಮತಾಂತರ ಮಾಡುವುದು ತಪ್ಪು, ಇದರ ವಿರುದ್ಧವಷ್ಟೇ ಕಾಯ್ದೆ ತರಲಾಗಿದೆ ಎಂದರು.
ಒಂದು ವೇಳೆ ಪರಿಶಿಷ್ಟ ಜಾತಿಗೆ ಸೇರಿದವರು ಮತಾಂತರವಾದರೆ ಅವರು ಪಡೆಯುತ್ತಿದ್ದ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ, ಈ ಬಗ್ಗೆ ಹೊಸ ಕಾಯ್ದೆಯಲ್ಲಿ ಉಲ್ಲೇಖವಾಗಿದೆ, ಬಲವಂತದ ಮತಾಂತರ ಕಾನೂನು ಬಾಹಿರ. ಈ ತಪ್ಪಿಗೆ ಶಿಕ್ಷೆ ಕೊಡಲು ನಿರ್ಧಿಷ್ಟವಾದ ಕಾನೂನುಗಳಿರಲಿಲ್ಲ. ಹಾಗಾಗಿ ಹೊಸ ಕಾಯ್ದೆಯನ್ನು ಕಾನೂನು ಬದ್ಧವಾಗಿ ಜಾರಿಗೆ ತರಬೇಕಾದ್ದು ಅನಿವಾರ್ಯ ಎಂದು ಹೇಳಿದರು.
ಅಮಾಯಕ ಜನರನ್ನು ಮೋಸ ಮಾಡಿ ಬಲವಂತದಿಂದ ಮತಾಂತರ ಮಾಡುವುದನ್ನು ತಪ್ಪಿಸುವುದು ಈ ಕಾಯ್ದೆ ಉದ್ದೇಶವಷ್ಟೆ, ಸುಖಾ ಸುಮ್ಮನೆ ತಪ್ಪು ಮಾಹಿತಿಗಳನ್ನು ಜನರಿಗೆ ಕೊಡುವುದು ಬೇಡ, ಅಧಿವೇಶನದ ಕೊನೆಯ ದಿನ ನಮ್ಮ ಸದಸ್ಯರು ಅನ್ಯ ಕಾರ್ಯನಿಮಿತ್ತ ಸದನಕ್ಕೆ ಬಾರದಿದ್ದರಿಂದ ಈ ಕಾಯ್ದೆ ಅಂಗೀಕಾರ ಮಾಡಲು ಸಾಧ್ಯವಾಗಲಿಲ್ಲ, ಜನವರಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಈ ಹೊಸ ಕಾಯ್ದೆ ಅಂಗೀಕಾರ ಮಾಡಲಾಗುವುದು ಎಂದರು.
ಮಾಜಿ ಕಾನೂನು ಸಚಿವ ಜಯಚಂದ್ರ ಅವರು ಈ ಕಾಯ್ದೆ ಬಗ್ಗೆ ಕರಡು ಸಿದ್ಧಪಡಿಸಿದ್ದನ್ನು ಮರೆತಿದ್ದರೆ ನಾವು ದಾಖಲಾತಿ ಇಟ್ಟಿದ್ದೇವೆ, ಅದನ್ನು ನೋಡಲಿ ನೆನಪು ಮಾಡಿಕೊಳ್ಳಲಿ, ಅದನ್ನು ಏಕೆ ವಿರೋಧ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಯಾವುದೇ ಒಂದು ಮಸೂದೆ ಮಂಡಿಸಬೇಕಾದರೆ ಐದಾರು ರಾಜ್ಯಗಳ ಬಿಲ್ ಗಳನ್ನು ಓದಿ, ಅದಕ್ಕೇನಾದರೂ ಇತಿಹಾಸ ಇದೆಯೇ ಎಂಬುದರ ಬಗ್ಗೆಯೂ ತಿಳಿದುಕೊಂಡು ನಂತರ ಜಾರಿಗೆ ತರಲು ತೀರ್ಮಾನ ಕೈಗೊಳ್ಳುತ್ತೇವೆ, ಏಕಾಏಕಿ ಯಾವ ಬಿಲ್ ನ್ನು ಜಾರಿಗೆ ತರುವುದಿಲ್ಲ, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು 1969 ಕಾಂಗ್ರೆಸ್‌ ಸರ್ಕಾರವೇ ಸಿದ್ಧಪಡಿಸಿದ್ದು ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!