ತುಮಕೂರು: ತುಮಕೂರು ನಗರಪಾಲಿಕೆಯ ಪೂರ್ವ ದಿಕ್ಕಿನಲ್ಲಿರುವ ಗೇಟ್ ತೆರೆಯಬೇಕು ಹಾಗೂ ನಾಗರಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ನೇತೃತ್ವದಲ್ಲಿ ವಿವಿಧ ಕನ್ನಡಪರ, ದಲಿತ, ನಾಗರಿಕ ಸಮಿತಿಗಳು ನಡೆಸಿದ ತಮಟೆ ಚಳವಳಿಗೆ ಮಣಿದು ಪಾಲಿಕೆಯ ಆಯುಕ್ತರು ಪೂರ್ವದ ಗೇಟ್ ತೆರೆಯುವ ಮೂಲಕ ನಾಗರಿಕರಿಗೆ ಅನುಕೂಲ ಕಲ್ಪಿಸಿದ್ದಾರೆ.
ತುಮಕೂರು ಮಹಾನಗರಪಾಲಿಕೆಯ ಪೂರ್ವಭಾಗದಲ್ಲಿ ರೈಲ್ವೆ ನಿಲ್ದಾಣ ರಸ್ತೆ ಕಡೆಯಿಂದ ಪ್ರವೇಶಕ್ಕೆ ಸಂಬಂಧಿಸಿದಂತೆ ಸಾವಿರಾರು ರೂ ಖರ್ಚು ಮಾಡಿ, ಗೇಟ್ ನಿರ್ಮಿಸಿದ್ದು, ಕಳೆದ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಗೇಟ್ ಮುಚ್ಚಿದ ಪರಿಣಾಮ ಪಾಲಿಕೆಯಲ್ಲಿ ವಿವಿಧ ಕೆಲಸಗಳಿಗೆ ಬರುವ ನಾಗರಿಕರು, ಜೆರಾಕ್ಸ್, ಫೋಟೋ ತೆಗೆಸಿಕೊಳ್ಳುವುದು ಸೇರಿದಂತೆ ಸಣ್ಣಪುಟ್ಟ ಕೆಲಸಗಳಿಗೂ ಅತಿಯಾದ ವಾಹನ ದಟ್ಟಣೆ ಇರುವ ಬಿ.ಹೆಚ್.ರಸ್ತೆಯಿಂದ ರೈಲ್ವೆ ನಿಲ್ದಾಣ ರಸ್ತೆಗೆ ಬರಬೇಕಾಗಿತ್ತು. ಇದರಿಂದ ಮಹಿಳೆಯರು, ವಯೋವೃದ್ದರ ಸರಾಗ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿತ್ತು.ಇದನ್ನು ಖಂಡಿಸಿ ತಮಟೆ ಚಳವಳಿ ಹಮ್ಮಿಕೊಳ್ಳಲಾಗಿತ್ತು.
ತಮಟೆ ಚಳವಳಿಯಲ್ಲಿ ಭಾಗವಹಿಸಿದ್ದ ಕರ್ನಾಟಕ ಸಾಂಸ್ಕೃತಿಕ ಸಂರಕ್ಷಣಾ ವೇದಿಕೆಯ ಹೊಸಕೋಟೆ ನಟರಾಜು, ರೈತ ಸಂಘ ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಪರುಶುರಾಮ್, ಕರವೇಯ ಟಿ.ಇ.ರಘುರಾಮ್, ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಉಮೇಶ್, ಕಾಂಗ್ರೆಸ್ ಮುಖಂಡ ಚಂದ್ರಶೇಖರಗೌಡ, ಹಿರಿಯ ನಾಗರಿಕರಾದ ರವೀಶ್, ಪೆಟ್ಟಿರಾಜು, ವಕೀಲರಾದ ವೆಂಕಟಾಚಲ, ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಸೇರಿದಂತೆ ಹಲವರು ಪಾಲಿಕೆಯ ಕ್ರಮವನ್ನು ಖಂಡಿಸಿ, ಕೂಡಲೇ ಪೂರ್ವದ ಗೇಟ್ ತೆಗೆದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿದರು.
ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ,ಪಾಲಿಕೆ ಆವರಣಕ್ಕೆ ಬರುವ ಹಿರಿಯ ನಾಗರೀಕರು ಅಗತ್ಯ ಸೇವೆ ಪಡೆದುಕೊಳ್ಳಲು ಸುತ್ತಾಡಿಕೊಂಡು ಬರಬೇಕಿದೆ, ಕುಡಿಯುವ ನೀರಿಗೆ ಸುತ್ತುವ ಪರಿಸ್ಥಿತಿ ಇದೆ, ಸಾರ್ವಜನಿಕರ ಉಪಯೋಗಕ್ಕೆ ಇರುವ ಗೇಟ್ ತೆರೆಯಬೇಕು.ಪಾಲಿಕೆ ಜನರ ಪಾಲಿಗೆ ಸತ್ತು ಹೋಗಿದೆ,ಎರಡು ಸಾವಿಕ್ಕೂ ಹೆಚ್ಚು ಕಡತಗಳು ವಿಲೇ ಆಗದೇ ಉಳಿದುಕೊಂಡಿದ್ದು,ಸಾರ್ವಜನಿಕರು ನಿತ್ಯ ಕಚೇರಿಗೆ ಅಲೆಯುವಂತಾಗಿದೆ. ಅಧಿಕಾರಿಗಾಲು ಬೇಕಂತೆ ತಿದ್ದುಪಡಿ ಆಗುವಂತೆ ದಾಖಲೆಗಳನ್ನು ಸೃಷ್ಠಿಸುತ್ತಿದ್ದಾರೆ, ಲಂಚಕ್ಕಾಗಿ ಇಂತಹ ನಾಲಾಯಕ್ ಕೆಲಸ ಮಾಡುವ ಅಧಿಕಾರಿಗಳು ಕೆಲಸ ಮಾಡಲು ಆಗದೇ ಇದ್ದರೆ ವರ್ಗಾವಣೆ ಮಾಡಿಕೊಂಡು ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾನಿರತರನ್ನು ಭೇಟಿ ಮಾಡಿದ ಪಾಲಿಕೆ ಆಯುಕ್ತರಾದ ರೇಣುಕಾ, ಪೂರ್ವದ ಗೇಟ್‌ಗೆ ಹೊಂದಿಕೊಂಡಂತೆ ಇರುವ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಪ್ರವಾಸಿ ಮಂದಿರ ಇರುವುದರಿಂದ ಗಣ್ಯರು ಓಡಾಡುವ ರಸ್ತೆಯಾದ ಕಾರಣ, ಈ ಗೇಟ್ ತೆರೆದಿಲ್ಲ, ಅಲ್ಲದೆ ನಾನು ಆಯುಕ್ತರಾಗಿ ಬರುವ ಮೊದಲೇ ಈ ಭಾಗದ ಗೇಟ್ ಮುಚ್ಚಲಾಗಿತ್ತು.ಹಾಗಾಗಿ ನೀವು ಮನವಿ ನೀಡಿದರೆ ಸದರಿ ಮನವಿಯನ್ನು ಪೊಲೀಸ್ ಇಲಾಖೆಗೆ ಕಳುಹಿಸಿ, ಎನ್‌ಒಸಿ ಪಡೆದ ನಂತರ ಗೇಟ್ ತೆರೆಯುವ ಭರವಸೆ ನೀಡಿದರು.
ಆಯುಕ್ತರ ಭರವಸೆಯ ವಿರುದ್ದ ಸ್ಥಳದಲ್ಲಿಯೇ ಕನ್ನಡಪರ ಸಂಘಟನೆಗಳು, ಹಿರಿಯ ನಾಗರಿಕರಿಂದ ವಿರೋಧ ವ್ಯಕ್ತವಾಗಿದ್ದಲ್ಲದೆ, ರೈಲ್ವೆ ನಿಲ್ದಾಣಕ್ಕೆ ದಿನವಹಿ ಸಾವಿರಾರು ಜನ ಹೋಗಿ ಬರುತ್ತಿದ್ದಾರೆ. ಅವರಿಗಿಲ್ಲದ ನಿರ್ಭಂಧ ಪಾಲಿಕೆಗೆ ಬರಲು ಏಕೆ ಎಂದು ಪ್ರಶ್ನಿಸಿದರಲ್ಲದೆ,ವಿಐಪಿ ಸಂಸ್ಕೃತಿ ಬೇಡ ಎಂದು ಘೋಷಣೆ ಕೂಗಿದರು. ಕೊನೆಗೂ ಪ್ರತಿಭಟನಾನಿರತ ಒತ್ತಡಕ್ಕೆ ಮಣಿದ ಆಯುಕ್ತರು ತಾವೇ ಸ್ವತಹಃ ಪೂರ್ವ ಭಾಗದ ಗೇಟ್ ತೆರೆಯುವ ಮೂಲಕ ಸಾರ್ವಜನಿಕರ ಒಡಾಟಕ್ಕೆ ಅನುವು ಮಾಡಿಕೊಟ್ಟರು. ಪ್ರತಿಭಟನೆಯಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರಾದ ರಘುರಾಂ, ಪರಶುರಾಂ, ನಾಗರಾಜು, ಸುಧೀರ್, ಪಿ.ಎನ್.ರಾಮಯ್ಯ, ಕ್ರೀಡಾಪಟು ಟಿ.ಕೆ.ಆನಂದ್, ಉಮೇಶ್, ಕೆ.ಪಿ.ರಾಘವೇಂದ್ರ ಭಾಗವಹಿಸಿದ್ದರು.
Get real time updates directly on you device, subscribe now.
Prev Post
Next Post
Comments are closed.