ಜಿಲ್ಲೆಯಲ್ಲಿ ನೈಟ್‌ ಕರ್ಫ್ಯೂ ಜಾರಿ: ಡೀಸಿ

95

Get real time updates directly on you device, subscribe now.


ತುಮಕೂರು: ಹೊಸ ವರ್ಷಾಚರಣೆ ಸನ್ನಿಹಿತದಲ್ಲಿರುವ ಹಿನ್ನೆಲೆಯಲ್ಲಿ ಜನಸಂದಣಿ ನಿಯಂತ್ರಣ ಅತ್ಯಗತ್ಯವಾಗಿದ್ದು, ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಇಂದಿನಿಂದ ನೈಟ್‌ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಕೋವಿಡ್‌ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 28ರಿಂದ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್‌ ಕರ್ಫ್ಯೂ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ, ಅದೇ ರೀತಿ ಡಿಸೆಂಬರ್‌ 30 ರಿಂದ 2022ರ ಜನವರಿ 2ರ ವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಸಮಾರಂಭಗಳನ್ನು ನಡೆಸುವುದನ್ನು ಹಾಗೂ ಹೆಚ್ಚು ಜನ ಸೇರುವುದನ್ನು ನಿಷೇಧಿಸಲಾಗಿದೆ. ಅಗತ್ಯ ಚಟುವಟಿಕೆ ಹೊರತುಪಡಿಸಿ ಅನಗತ್ಯವಾಗಿ ಓಡಾಡುವಂತಿಲ್ಲ, ಮದುವೆಯಲ್ಲಿ 300 ಮಂದಿ ಮಾತ್ರ ಭಾಗವಹಿಸಲು ಅವಕಾಶವಿದೆ ಎಂದು ತಿಳಿಸಿದರು.
ಔಷಧಾಲಯಗಳು, ಆರೋಗ್ಯ ಕೇಂದ್ರಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ವೈದ್ಯಕೀಯ ತುರ್ತು ಇರುವಲ್ಲಿ ರೋಗಿಗಳು ಮತ್ತು ಅವರ ಪರಿಚಾರಕರಿಗೆ ಮಾತ್ರ ಓಡಾಡಲು ಅವಕಾಶವಿರುತ್ತದೆ. ರಾತ್ರಿ ಪಾಳಿಲ್ಲಿ ಕಾರ್ಯಾಚರಣೆಯ ಅಗತ್ಯವಿರುವ ಕೈಗಾರಿಕೆ, ಕಂಪನಿಗಳು ಎಂದಿನಂತೆ ಕಾರ್ಯನಿರ್ವಹಿಸಲು ಅನುಮತಿಸಿದ್ದು, ಅಂತಹ ಉದ್ಯೋಗಿಗಳು ಸಂಸ್ಥೆ ಮಾನ್ಯ ಮಾಡಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೋರಿಸಿ ಕೆಲಸ ನಿರ್ವಹಿಸಬಹುದಾಗಿದೆ. ಟ್ರಕ್‌, ಸರಕು ವಾಹನಗಳು ಸೇರಿದಂತೆ ಯಾವುದೇ ಸರಕು ಸಾಗಾಟ ವಾಹನಗಳ ಚಾಲನೆ ಎಂದಿನಂತಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವ ಸಲುವಾಗಿ ಬಸ್‌ ಸಂಚಾರ, ವಿಮಾನ, ಮೆಟ್ರೋ, ಖಾಸಗಿ ವಾಹನ, ಟ್ಯಾಕ್ಸಿ ಸೇವೆಗಳನ್ನು ಅನುಮತಿಸಲಾಗಿದೆ ಎಂದು ತಿಳಿಸಿದರು.
ಹೊಸ ವರ್ಷಾಚರಣೆ ನಿಮಿತ್ತ ಡಿಸೆಂಬರ್‌ 30 ರಿಂದ 2022ರ ಜನವರಿ 2ರ ವರೆಗೆ ರೆಸ್ಟೋರೆಂಟ್‌, ಪಬ್‌, ಹೋಟೆಲ್‌ಗಳಲ್ಲಿ ಒಟ್ಟಾರೆ ಸಾಮರ್ಥ್ಯದಲ್ಲಿ ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಕೋವಿಡ್‌ ನೆಗೆಟಿವ್‌ ಹೊಂದಿರುವ ಸಿಬ್ಬಂದಿಗಳಿಗೆ ಮಾತ್ರ ಹೋಟೆಲ್‌ನಲ್ಲಿ ಕೆಲಸ ನಿರ್ವಹಿಸಲು ಅವಕಾಶ ನೀಡಬೇಕು ಹಾಗೂ ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಎರಡೂ ಡೋಸ್‌ ಲಸಿಕೆ ಪಡೆದಿರಬೇಕು. ಸರ್ಕಾರ ಹೊರಡಿಸಿರುವ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪ್ರತಿಯೊಬ್ಬರೂ ಪಾಲಿಸಬೇಕು ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಕೋವಿಡ್‌ ಪ್ರಕರಣಗಳ ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಈವರೆಗೂ ಲಸಿಕಾಕರಣವಾಗದ ಪ್ರತಿ ಹಳ್ಳಿಗೆ ಖುದ್ದು ಅಧಿಕಾರಿಗಳೇ ಭೇಟಿ ನೀಡಿ ಲಸಿಕಾಕರಣ ಪೂರ್ಣಗೊಳಿಸಬೇಕು. ಹೋಂ ಕ್ವಾರಂಟೈನ್‌ ಆಗಿರುವವರ ವರದಿಯನ್ನು ಶೀಘ್ರ ಸಿದ್ಧಪಡಿಸಬೇಕು. ಕಾರಣ ನೀಡಿ ಮುಂದೂಡದೆ ದಿನಕ್ಕೆ 30 ಸಾವಿರ ಕೋವಿಡ್‌ ಪರೀಕ್ಷೆ ನಡೆಸಬೇಕು. ಈ ವರ್ಷಾಂತ್ಯದೊಳಗೆ ಮೊದಲನೇ ಹಾಗೂ ಎರಡನೇ ಡೋಸ್‌ ಲಸಿಕಾಕರಣ ಪೂರ್ಣಗೊಳಿಸಬೇಕು ಎಂದು ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಪ್ರಸ್ತುತ 81 ಸಕ್ರಿಯ ಕೋವಿಡ್‌ ಪ್ರಕರಣಗಳಿದ್ದು, 0.26 ಪಾಸಿಟಿವಿಟಿ ರೇಟ್‌ ವರದಿಯಾಗಿದೆ. ಪಾಸಿಟೀವ್‌ ಬಂದಿರುವ ಪ್ರದೇಶಗಳಲ್ಲಿ ಹೆಚ್ಚು ಗಮನಹರಿಸಬೇಕಾಗಿದ್ದು, ಕೋವಿಡ್‌ ಲಕ್ಷಣಗಳು ಕಂಡು ಬಂದಲ್ಲಿ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದರು.
ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಡಿಸೆಂಬರ್‌ 28ರಿಂದಲೇ ಕೇಂದ್ರಗಳನ್ನು ತೆರೆಯಬೇಕು. ರಾಗಿ ಮಾರಾಟಕ್ಕೆ ಬಂದ ರೈತರಿಂದ ಸ್ಯಾಂಪಲ್‌ ರಾಗಿ ತರಲು ದಿನಾಂಕ ನಿಗಧಿ ಮಾಡಿ ನಂತರ ಗ್ರೇಡ್‌ ನಿಗಧಿಪಡಿಸಬೇಕು. ರೈತರಿಂದ ದೂರುಗಳು ಕೇಳಿ ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಮತ್ತು ಇಲಾಖೆಯನ್ನು ನೇರ ಹೊಣೆ ಮಾಡಲಾಗುವುದು ಎಂದು ಸೂಚಿಸಿದರು.
ಬೆಳೆಹಾನಿಗೆ ಸಂಬಂಧಿಸಿದಂತೆ ಪರಿಹಾರ ಪೋರ್ಟಲ್‌ನಲ್ಲಿ ಎಂಟ್ರಿಗಳನ್ನು ಪೂರ್ಣಗೊಳಿಸಿರುವ ಬಗ್ಗೆ ಪ್ರಮಾಣ ಪತ್ರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅತೀವೃಷ್ಟಿಯಿಂದ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಶೀಘ್ರ ಚೆಕ್‌ ವಿತರಣೆ ಮಾಡಬೇಕು ಎಂದರಲ್ಲದೆ ವಿತರಣೆಯಾಗಿರುವ ಬಗ್ಗೆ ವರದಿ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಘನ ತ್ಯಾಜ್ಯ ವಿಲೇವಾರಿ, ಪೈಕಿ ಪಹಣಿ ಒಗ್ಗೂಡಿಸುವಿಕೆ, ಪಹಣಿ ಕಲಂ 3/9 ಮಿಸ್‌ಮ್ಯಾಚ್‌, ಭೂಮಿ ಪೆಂಡೆನ್ಸಿ, ನಾಡ ಕಚೇರಿ, ಸ್ಮಶಾನ ಹಾಗೂ ಇತರೆ ಉದ್ದೇಶಗಳಿಗೆ ಸರ್ಕಾರಿ ಜಾಗ ಕಾಯ್ದಿರಿಸುವುದು ಸೇರಿದಂತೆ ವಿವಿಧ ವಿಷಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಡಿಹೆಚ್‌ಒ ಡಾ: ನಾಗೇಂದ್ರಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲಾ ತಾಲೂಕುಗಳ ತಹಸೀಲ್ದಾರ್‌ಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!