ಸೇವೆ ಖಾಯಂಗೆ ಅತಿಥಿ ಉಪನ್ಯಾಸಕರ ಆಗ್ರಹ

ತುಮಕೂರಿನಲ್ಲಿ ಉಪನ್ಯಾಸಕರ ಪ್ರತಿಭಟನೆ- ಸರ್ಕಾರದ ವಿರುದ್ಧ ಆಕ್ರೋಶ

462

Get real time updates directly on you device, subscribe now.

ತುಮಕೂರು: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು ಹಾಗೂ ಆತ್ಮಹತ್ಯೆಗೆ ಶರಣಾಗಿರುವ ಅತಿಥಿ ಉಪನ್ಯಾಸಕ ಹರ್ಷ ಶಾನುಭೋಗ್‌ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು.
ನಗರದ ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಅತಿಥಿ ಉಪನ್ಯಾಸಕರು ಜಿಲ್ಲಾಧಿಕಾರಿಗಳ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು. ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸಿದ್ದು, ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಯಾವುದೇ ಭದ್ರತೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಧುನಿಕ ಜೀತ ಪದ್ಧತಿ ಆಚರಿಸುತ್ತಿರುವ ರಾಜ್ಯ ಸರ್ಕಾರಗಳು ಇದುವರೆಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೆ, ಅತಿಥಿ ಉಪನ್ಯಾಸಕರನ್ನೇ ದುಡಿಸಿಕೊಳ್ಳುತ್ತಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ನೂತನ ಸಹಾಯಕ ಪ್ರಾಧ್ಯಾಪಕ ನೇಮಕಾತಿ ತಡೆ ಹಿಡಿಯಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ವಯೋಮಿತಿ ಅಂಚಿನಲ್ಲಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿದರು.
ಅತಿಥಿ ಉಪನ್ಯಾಸಕರಿಗೆ ಯಾವುದೇ ಇಎಸ್‌ಐ, ಪಿಎಫ್‌ನಂತಹ ಗರಿಷ್ಠ ಸೌಲಭ್ಯ ನೀಡದೆ ಆಧುನಿಕ ಕೂಲಿಕಾರರಂತೆ ಅತಿಥಿ ಉಪನ್ಯಾಸಕರನ್ನು ಸರ್ಕಾರಗಳು ನಡೆಸಿಕೊಳ್ಳುತ್ತಿದ್ದು, ಕನಿಷ್ಠ ವೇತನ ನೀಡಿ ಗರಿಷ್ಠ ಕೆಲಸ ಮಾಡಿಸಿಕೊಳ್ಳುತ್ತಿದ್ದು, ಕಳೆದ 15 ವರ್ಷಗಳಿಂದಲೂ ಶಿಕ್ಷಣ ಇಲಾಖೆಯ ಪ್ರಗತಿಗೆ ಕಾರಣವಾಗಿರುವ ಅತಿಥಿ ಉಪನ್ಯಾಸಕರತ್ತ ಮೊದಲು ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ತೆಲಂಗಾಣ, ಕೇರಳ, ಹರಿಯಾಣ, ಪಶ್ಚಿಮ ಬಂಗಾಳದಲ್ಲಿ ಅತಿಥಿ ಉಪನ್ಯಾಸಕರಿಗೆ ಅಲ್ಲಿನ ಸರ್ಕಾರಗಳು ಸೇವಾ ಭದ್ರತೆ ನೀಡಿದ್ದು, ಕರ್ನಾಟಕ ಸರ್ಕಾರ ಇದೇ ಮಾದರಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ ಅವರು, ಅತಿಥಿ ಉಪನ್ಯಾಸಕರು ನಿವೃತ್ತಿಯಾಗುವವರೆಗೆ ಗರಿಷ್ಠ ವೇತನ ನೀಡಬೇಕು ಎಂದು ಮನವಿ ಮಾಡಿದರು.
ಪ್ರಧಾನಿ ಮೋದಿ ಅವರು ಏಕರೂಪ ಕಾನೂನು ಜಾರಿಗೆ ತಂದಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ, ಅದರಂತೆ ಅತಿಥಿ ಉಪನ್ಯಾಸಕರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಕ್ರಮವಹಿಸಬೇಕು ಎಂದು ಆಗ್ರಹಿಸಿದ ಅವರು, ಇದುವರೆಗೆ ನೀಡುತ್ತಿದ್ದ 9 ತಿಂಗಳ ವೇತನವನ್ನು 6 ತಿಂಗಳಿಗೆ ಇಳಿಸಿರುವ ಸರ್ಕಾರ ನಿರ್ಧಾರವನ್ನು ಹಿಂಪಡೆಯಬೇಕು ಆಗ್ರಹಿಸಿದರು.
ಸೆಮಿಸ್ಟರ್‌ ಪದ್ಧತಿ ಆಧಾರದ ಮೇಲೆ ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ವಿದ್ಯಾವಂತರನ್ನು ಕೂಲಿ ಕೆಲಸದವರಿಗಿಂತ ಕಡೆಯಾಗಿ ನೋಡುತ್ತಿದೆ, ಅತಿಥಿ ಉಪನ್ಯಾಸಕರಿಗೆ ನೀಡುವ ಸಂಬಳವನ್ನು ಆರು ತಿಂಗಳಿಗೋ, ಮೂರು ತಿಂಗಳಿಗೋ ನೀಡುವಂತಹ ಪರಿಸ್ಥಿತಿ ಇದೆ, ಇಂತಹ ಸಂದರ್ಭದಲ್ಲಿಯೇ ಕೇವಲ ಆರು ತಿಂಗಳಿಗೆ ಮಾತ್ರ ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡಿದರೆ ಉಳಿಕೆ ಅವಧಿಯಲ್ಲಿ ಅತಿಥಿ ಉಪನ್ಯಾಸಕರು ಏನು ಮಾಡಬೇಕೆಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಮಾರಕ ನೀತಿಗಳಿಂದಾಗಿ ಇದುವರೆಗೆ 70ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸಾವನ್ನಪ್ಪಿದ್ದು, ಅವರನ್ನೇ ನಂಬಿದ ಹೆಂಡತಿ, ಮಕ್ಕಳು, ಪೋಷಕರು ಬೀದಿಗೆ ಬಿದ್ದಿದ್ದಾರೆ. ತಾತ್ಕಾಲಿಕ ನೌಕರಿಯನ್ನೇ ನೆಚ್ಚಿಕೊಂಡಿದ್ದ ತೀರ್ಥಹಳ್ಳಿಯ ಹರ್ಷ ಶಾನುಭೋಗ್‌ ಅವರ ಕುಟುಂಬಕ್ಕೆ ಸರ್ಕಾರ 25 ಲಕ್ಷ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಿವಣ್ಣ ತಿಮ್ಲಾಪುರ್‌, ರಂಗಧಾಮಯ್ಯ ಜೆ.ಸಿ, ಶಿವಣ್ಣ, ಅಂಜನ್ ಮೂರ್ತಿ, ಚೇತನ್‌, ಗಂಗಾಧರ್‌, ಗಂಗಾಬಿಕೆ, ಅಂಬಿಕಾ, ಸುಧಾ, ಡಾ.ಕುಮಾರ್‌, ಡಾ.ಶಿವಯ್ಯ, ಡಾ.ಸಿದ್ದನಾಯ್ಕ, ಸುರೇಶ್‌, ಕರಿಯಣ್ಣ, ಜಲಜಾಕ್ಷಿ, ಸುಧಾ ತಿಪಟೂರು, ಡಾ.ವೆಂಕಟೇಶಯ್ಯ, ಪಿ.ಸಿ.ಲೋಕೇಶ್‌, ರವೀಂದ್ರ, ಮಹದೇವ್‌, ಚೇತನ್‌ ಸೇರಿದಂತೆ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!