ಬಡಾವಣೆಗಳ ನಿವೇಶನ ನೋಂದಣಿ ಮಾಡದಂತೆ ಪತ್ರ

369

Get real time updates directly on you device, subscribe now.

ಕುಣಿಗಲ್‌: ಸರ್ಕಾರದ ಆದೇಶದಂತೆ ರೇರಾ ನಿಯಮಗಳು ಪಾಲನೆ ಆಗುತ್ತಿಲ್ಲವಾದ್ದರಿಂದ ರೇರಾ ನಂಬರ್‌ ಇಲ್ಲದ ಅಭಿವೃದ್ಧಿ ಹೊಂದಿದ ಬಡಾವಣೆಗಳ ನಿವೇಶನ ನೋಂದಣಿ ಮಾಡದಂತೆ ಪುರಸಭೆ ಸದಸ್ಯ ನಾಗೇಶ್‌ ಉಪ ನೋಂದಣಾಧಿಕಾರಿಗಳು ಸೇರಿದಂತೆ ಜಿಲ್ಲಾ ನೋಂದಣಾಧಿಕಾರಿಗಳನ್ನು ಆಗ್ರಹಿಸಿ ಪತ್ರ ಬರೆದಿದ್ದಾರೆ. ಈ ಬಗ್ಗೆ ವಿವರ ನೀಡಿದ ಅವರು, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿವಿಧ ಸರ್ವೇ ನಂಬರ್ ಗಳಲ್ಲಿ ಎಕರೆಗಟ್ಟಲೆ ಜಮೀನು ಕೃಷಿ ಉದ್ದೇಶದಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಯಾಗುತ್ತಿದೆ. ಈರೀತಿ ಬದಲಾವಣೆಯಾಗಿ ಬಡಾವಣೆಗಳಾಗಿ ಅಭಿವೃದ್ಧಿ ಮಾಡುವ ಡೆವಲಪರ್‌ಗಳು, ರಿಯಲ್‌ಎಸ್ಟೇಟ್‌ ಏಜೆಂಟರು, ಜಮೀನಿನ ಮಾಲೀಕರು ಕರ್ನಾಟಕ ರಾಜ್ಯ ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ರೇರಾ) ದಲ್ಲಿ ನಿಯಮಾನುಸಾರ ನೋಂದಣಿ ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕಿದೆ.
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಬೆಂಗಳೂರು ಸೇರಿದಂತೆ ಇತರೆಡೆಯಿಂದ ಬಂದಂತಹ ಕೆಲ ಡೆವೆಲಪರ್‌ಗಳು ಜಮೀನು ಮಾಲೀಕರೊಂದಿಗೆ ಶಾಮೀಲಾಗಿ, ರೇರಾ ನಿಯಮ ಉಲ್ಲಂಘಿಸಿ ನೋಂದಣಿ ಮಾಡದೆ ಯೋಜನಾ ಪ್ರಾಧಿಕಾರದ ಅನುಮೋದಿತ ನಕ್ಷೆಯನ್ನು ಉಲ್ಲಂಘಿಸಿ ಬಡಾವಣೆ ಅಭಿವೃದ್ಧಿಗೊಳಿಸಿ, ಸ್ಥಳೀಯ ಸಂಸ್ಥೆಗಳಾದ ಪುರಸಭೆ, ಗ್ರಾಮ ಪಂಚಾಯಿತಿಯ ಅಧಿಕಾರಿಗಳೊಂದಿಗೆ ಅಕ್ರಮ ಮೈತ್ರಿ ಮಾಡಿಕೊಂಡು ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಮಾಡಿಸಿಕೊಂಡು ಆ ಖಾತೆ ಸಂಖ್ಯೆಗಳ ಆಧಾರದ ಮೇಲೆ ನೋಂದಣಿ ಮಾಡಿಸುತ್ತಾ ನಿವೇಶನ ಖರೀದಿದಾರರ ಒಂದೆಡೆ ವಂಚನೆ ಮಾಡುತ್ತಿದ್ದಾರೆ. ಮತ್ತೊಂದೆಡೆ ರೇರಾ ನಿಯಮಾವಳಿ ಪ್ರಕಾರ ಸೂಕ್ತ ಲೆಕ್ಕಪತ್ರ ನಿರ್ವಹಣೆ ಮಾಡದೆ ಕಪ್ಪುಹಣ ವೃದ್ಧಿಯಾಗಲು ಪರೋಕ್ಷವಾಗಿ ಕಾರಣವಾಗಿದ್ದಾರೆ. ಇನ್ನು ಕೆಲ ಪ್ರಕರಣಗಳಲ್ಲಿ ಇನ್ನು ಅಭಿವೃದ್ಧಿಗೊಳ್ಳದ ನಿವೇಶನಗಳಿಗೆ ಸೂಕ್ತ ಖಾತಾ ನಂಬರ್‌, ಇ-ಆಸ್ತಿ ಸಂಖ್ಯೆ ಇಲ್ಲದೆ ಜಿಪಿಎ ಆಧಾರದ ಮೇಲೆ ಒಂದೆ ನಿವೇಶನವನ್ನು ಹಲವರಿಗೆ ಮಾರಾಟ ಮಾಡಿರುವ ಪ್ರಕರಣ ಕಂಡು ಬರುತ್ತಿವೆ. ಇದರಿಂದಾಗಿ ನಿವೇಶನ ಹೊಂದುವ ಕನಸು ಕಂಡು ಜೀವನದ ದುಡಿಮೆಯನ್ನೆಲ್ಲಾ ವ್ಯಯಿಸುವ ಮಧ್ಯಮ ವರ್ಗದ ಕುಟುಂಬದವರು ಪರದಾಡುವಂತಾಗಿದೆ. ನಿವೇಶನ ಖರೀದಿದಾರರ ಹಿತರಕ್ಷಣೆ ನಿಟ್ಟಿನಲ್ಲಿ ಕೇಂದ್ರ, ರಾಜ್ಯಸರ್ಕಾರಗಳು ಜಾರಿಗೆ ತಂದ ರೇರಾ ನಿಯಮಗಳ ಪಾಲನೆ ಆಗದೆ ಯಡವಟ್ಟುಗಳಾಗಿ ಬೋಗಸ್‌ ಕಂಪನಿಗಳಿಗೆ ನಿವೇಶನಕ್ಕೆ ಜನ ಹಣಕೊಟ್ಟು ಪರದಾಡುವಂತಾಗಿದೆ.
ಕಳೆದ ಸಾಲಿನಲ್ಲಿ ರೇರಾ ಪ್ರಾಧಿಕಾರವು ನಿವೇಶನ ಅಭಿವೃದ್ಧಿದಾರರು, ರಿಯಲ್‌ ಎಸ್ಟೇಟ್‌ ಏಜೆಂಟರು, ಡೆವೆಲಪರ್‌ಗಳು ಜಮೀನು ಅಭಿವೃದ್ಧಿಗೊಳಿಸಿ ಮಾರಾಟ ಮಾಡುವ ನೋಂದಣಿ ಸಮಯದಲ್ಲಿ ರೇರಾ ನೋಂದಣಿ ಸಂಖ್ಯೆ ಇಲ್ಲದೆ ನೋಂದಣಿ ಮಾಡದಂತೆ ನಗರ ಯೋಜನಾ ಇಲಾಖೆ ಸೇರಿದಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಹಾ ನಿರ್ದೇಶಕರಿಗೆ ಸುತ್ತೋಲೆ ಮುಖಾಂತರ ಸೂಚನೆ ನೀಡಿದ್ದರೂ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ರೇರಾ ನಿಯಮ ಉಲ್ಲಂಘಿಸಿ ಪ್ರಾರಂಭಿಸಲಾಗಿರುವ ಖಾತೆ ಸಂಖ್ಯೆಯ ಆಧಾರದಲ್ಲಿ ಆಸ್ತಿ ನೋಂದಣಿ ಮಾಡುತ್ತಿರುವುದು ಕಂಡು ಬರುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚತ್ತು ರೇರಾ ನಿಯಮವಳಿಗಳ ಪಾಲನೆ ಮಾಡಲು, ಅಧಿಕೃತ ರೇರಾ ನೋಂದಣಿ ಸಂಖ್ಯೆ ಇಲ್ಲದ ನಿವೇಶನ ಅಭಿವೃದ್ಧಿದಾರರ, ಡೆವಲಪರ್ ಗಳು ಅಭಿವೃದ್ಧಿ ಪಡಿಸುವ ನಿವೇಶನಗಳ ನೋಂದಣಿ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!