ತುಮಕೂರು: ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಲೆಕ್ಕ ಪತ್ರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದಲ್ಲಿ ಅನಗತ್ಯ ಇಲಾಖಾ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಗ್ರಾಮ ಪಂಚಾಯತಿ ಪಿಡಿಓಗಳಿಗೆ ಕಿವಿಮಾತು ಹೇಳಿದರು.
ನಗರದ ಜಿಲ್ಲಾ ಬಾಲಭವನದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗಾಗಿ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಮರ್ಪಕ ಮಾಹಿತಿಯ ಕೊರತೆಯಿಂದ ಅಧಿಕಾರಿಗಳು ಇಲಾಖಾ ವಿಚಾರಣೆ ಹಾಗೂ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಉಂಟಾಗಬಹುದು. ಇದರಿಂದ ಅಧಿಕಾರಿಗಳು ಕ್ಷೇತ್ರದಲ್ಲಿ ಆಸಕ್ತಿ ತೋರದೆ ಒತ್ತಡದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 10-12 ವರ್ಷಗಳಿಂದ ಇಲಾಖಾ ವಿಚಾರಣೆಗಳು ಬಗೆಹರಿಯದೆ ಹಾಗೆಯೇ ಬಾಕಿ ಉಳಿದುಕೊಂಡಿವೆ. ಈ ಹಿನ್ನೆಲೆಯಲ್ಲಿ ದಾಖಲೆ ನಿರ್ವಹಣೆ ಕುರಿತು ಪಿಡಿಓಗಳಿಗಾಗಿ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಗ್ರ ಮಾಹಿತಿ ಕೊರತೆಯಿಂದ ಉಂಟಾಗುವ ತಪ್ಪುಗಳನ್ನು ತಿದ್ದಿಕೊಳ್ಳಲು ಈ ಕಾರ್ಯಾಗಾರ ಉಪಯೋಗವಾಗಲಿದೆ. ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮರಳಿ ತಪ್ಪು ನಡೆಯದಂತೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವಂತೆ ಮಾಡುವುದು ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಾಮಾನ್ಯವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಒತ್ತಡದಲ್ಲಿ ಕೆಲಸ ನಿರ್ವಹಿಸುವುದು ಅನಿವಾರ್ಯವಾಗಿದ್ದು, ಅಧಿಕಾರಿಗಳು ನಿಯಮಿತ ವ್ಯಾಯಾಮ, ಓದುವ, ಸಂಗೀತ ಕೇಳುವಂತಹ ಉತ್ತಮ ಹವ್ಯಾಸ ರೂಢಿಸಿಕೊಳ್ಳುವ ಮೂಲಕ ಒತ್ತಡದಿಂದ ಮುಕ್ತರಾಗಬಹುದು ಹಾಗೂ ಪಾರದರ್ಶಕತೆ, ಪ್ರಾಮಾಣಿಕತೆ, ಶಿಸ್ತು, ಸಮಯಪಾಲನೆಯಿಂದ ಒತ್ತಡಗಳಿಂದ ದೂರವಿರಬಹುದಾಗಿದೆ ಎಂದು ಸಲಹೆ ನೀಡಿದರು.
ಸರ್ಕಾರಿ ಸೇವೆಯಲ್ಲಿರುವವರಿಗೆ ವೈಯಕ್ತಿಕ ಹಾಗೂ ವೃತ್ತಿ ಬದುಕುಗಳೆರಡೂ ಬಹಳ ಮುಖ್ಯವಾಗಿದ್ದು, ವೈಯಕ್ತಿಕ ಬದುಕಿನಲ್ಲಾಗುವ ಸಮಸ್ಯೆಗಳು ವೃತ್ತಿ ಬದುಕಿನಲ್ಲಿಯೂ ಪ್ರಭಾವ ಬೀರುತ್ತವೆ. ಹಾಗಾಗಿ ಪ್ರತಿಯೊಬ್ಬ ಅಧಿಕಾರಿಯು ತಮ್ಮ ಕುಟುಂಬ ಹಾಗೂ ಕರ್ತವ್ಯಗಳ ನಡುವಿನ ಸಮತೋಲನ ಕಾಪಾಡಿಕೊಂಡು ಒತ್ತಡ ನಿವಾರಿಸಿಕೊಳ್ಳಬೇಕು ಎಂದರು.
ಪ್ರತಿ ಪಂಚಾಯತಿಗೆ 15ನೇ ಹಣಕಾಸು, ನರೇಗಾ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಡಿ ಪ್ರತಿವರ್ಷ 3-4 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದ್ದು, ಬಿಡುಗಡೆಯಾದ ಅನುದಾನದ ಸಮರ್ಪಕ ಬಳಕೆಗೆ ಸಂಬಂಧಿಸಿದಂತೆ ಆದಾಯ-ವ್ಯಯಗಳ ಕುರಿತ ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ನಿಖರತೆಯನ್ನು ಕಾಪಾಡುವುದು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯವಾಗಿದೆ. ಈ ಬಗ್ಗೆ ಆಕ್ಷೇಪಣೆಗಳು ಎದುರಾಗುವ ಕಡೆಗಳಲ್ಲಿ ಸಮಸ್ಯೆ ಬಗೆಹರಿಸಲು ಸಮರ್ಪಕ ಮಾಹಿತಿ ಹೊಂದಿರುವುದೂ ಅಷ್ಟೇ ಮುಖ್ಯ ಎಂದು ತಿಳಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ನಾಗರಾಜ್ ಮಾತನಾಡಿ, ರಾಜ್ಯದಲ್ಲಿ ಬೆಳಗಾವಿಯ ನಂತರ ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ತುಮಕೂರು ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿಯ ಕನಸನ್ನು ನನಸಾಗಿಸಲು ಹಲವು ತೊಡಕುಗಳಿದ್ದಾಗ್ಯೂ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಸಂಘವು ಅಭಿವೃದ್ಧಿ ಅಧಿಕಾರಿಗಳಲ್ಲಿ ನೈತಿಕ ಸ್ಥೈರ್ಯ ತುಂಬುವ ಕಾರ್ಯ ಮಾಡುತ್ತಿದ್ದು, ಸಂಘದ ವತಿಯಿಂದ ಕೋವಿಡ್ ಸಂದರ್ಭದಲ್ಲಿ ಅಸುನೀಗಿದ ಅಧಿಕಾರಿಗಳ ಕುಟುಂಬಕ್ಕೆ ತಲಾ 1 ಲಕ್ಷ ರೂ. ಆರ್ಥಿಕ ನೆರವು ನೀಡಲಾಗಿದೆ. ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಕ್ರೀಡಾ ಕೂಟ, ರಕ್ತದಾನ ಶಿಬಿರದಂತಹ ಕಾರ್ಯಕ್ರಮ ಆಯೋಜಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿ ಭುವನಹಳ್ಳಿ ನಾಗರಾಜ್ ಮಾತನಾಡಿ, ಅಧಿಕಾರಿಗಳು ತಡ ಒತ್ತಡಗಳಲ್ಲಿ ಕಾರ್ಯ ನಿರ್ವಹಿಸುವುದು ಎಷ್ಟು ಅನಿವಾರ್ಯವೋ ಅಂತಹ ಪರಿಸ್ಥಿತಿಗಳಲ್ಲಿ ಸಂಯಮ ಮತ್ತು ಸಹನೆ ಕಾಪಾಡಿಕೊಳ್ಳುವುದೂ ಅಷ್ಟೇ ಅನಿವಾರ್ಯವಾಗಿದೆ, ಪ್ರತಿಯೊಬ್ಬರೂ ತಪ್ಪು ಮಾಡುವುದು ಸಹಜ, ನಮ್ಮ ತಪ್ಪುಗಳೇ ಮತ್ತೊಬ್ಬರ ಅಸ್ತ್ರವಾಗಲು ಅವಕಾಶ ಮಾಡಿಕೊಡದೆ ಜಾಗರೂಕರಾಗಿ, ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ರಾಜ್ಯದ 4 ವಿಭಾಗಗಳಲ್ಲಿ ಸಾರ್ವಜನಿಕ ಕುಂದು ಕೊರತೆ ನಿವಾರಣಾ ಪ್ರಾಧಿಕಾರಗಳನ್ನು ಸ್ಥಾಪಿಸಲಾಗಿದ್ದು, ಪಂಚಾಯತಿ ಹಂತದಲ್ಲಿ ತಮ್ಮ ಕುಂದು ಕೊರತೆಗಳನ್ನು ಪ್ರಾಧಿಕಾರದ ಮುಂದಿಟ್ಟು ಬಗೆಹರಿಸಿಕೊಳ್ಳಬೇಕು. ಮೇಲಾಧಿಕಾರಿಗಳಿಂದ ಅನಾರೋಗ್ಯಕರವಾಗಿ ಕಿರುಕುಳಕ್ಕೆ ಒಳಗಾದಲ್ಲಿ ಅಂತಹ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಹೆಚ್‌ಎಎಲ್‌ನ ನಿವೃತ್ತ ಅಧಿಕಾರಿ ಬಿ.ಎಂ.ರಾಜಗೋಪಾಲ್ ಅವರಿಂದ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಒತ್ತಡ ನಿವಾರಣೆ ಮತ್ತು ಸಮತೋಲನ, ಜಿಲ್ಲಾ ಪಂಚಾಯತ್‌ನ ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ರಾಮಚಂದ್ರಯ್ಯ ಅವರಿಂದ ಆಯವ್ಯಯ, ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನಾ ನಿಯಮಗಳು, ಜಿಲ್ಲಾ ಪಂಚಾಯತ್ ನ ಲೆಕ್ಕಾಧಿಕಾರಿ ನಾಗೇಶ್ ಅವರಿಂದ ಕೆಟಿಪಿಪಿ ನಿಯಮಗಳು ಹಾಗೂ ಪಿಡಿಒ ಕೂಬಾ ಸಿಂಗ್ ಅವರಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಗೆ ಸಂಬಂಧಿಸಿದಂತೆ ದಾಖಲಾತಿಗಳ ನಿರ್ವಹಣೆ ವಿಷಯ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಪಂನ ಉಪ ಕಾರ್ಯದರ್ಶಿ ಅಥಿಕ್ ಪಾಷ ಹಾಗೂ ಕೃಷ್ಣಮೂರ್ತಿ, ಮುಖ್ಯ ಯೋಜನಾ ಅಧಿಕಾರಿ ಸಣ್ಣಮತಿಯಪ್ಪ, ಯೋಜನಾ ನಿರ್ದೇಶಕ ನರಸಿಂಹಮೂರ್ತಿ, ಮುಖ್ಯ ಲೆಕ್ಕಾಧಿಕಾರಿ ಮುನಿವೀರಪ್ಪ ಸೇರಿದಂತೆ ಸಹಾಯಕ ನಿರ್ದೇಶಕರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.
ಪಿಡಿಓಗಳು ಸರಿಯಾಗಿ ಲೆಕ್ಕಪತ್ರ ನಿರ್ವಹಿಸಲಿ
ದಾಖಲೆಗಳ ನಿರ್ವಹಣೆ ಮಾಡದಿದ್ದಲ್ಲಿ ಕ್ರಮ: ಡಾ.ಕೆ.ವಿದ್ಯಾಕುಮಾರಿ
Get real time updates directly on you device, subscribe now.
Prev Post
Next Post
Comments are closed.